ಭಾರತದ ಗಡಿ ಭಾಗವನ್ನು ಚೀನಾ ಆಕ್ರಮಿಸಿತೆ? ರಕ್ಷಣಾ ಸಚಿವರಿಗೆ ರಾಹುಲ್ ಗಾಂಧಿ ಪ್ರಶ್ನೆ!
ಭಾರತ ಹಾಗೂ ಚೀನಾ ಗಡಿ ಭಾಗದಲ್ಲಿ ಉದ್ವಿಘ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಶಾಂತಿ ಮಾತುಕತೆ ಪ್ರಸ್ತಾಪಿಸಿ, ಗಡಿಯಲ್ಲಿ ಹೆಚ್ಚುವರಿ ಸೇನೆ ನಿಯೋಜಿಸುತ್ತಿರುವ ಚೀನಾ, ಭಾರತದ ಗಡಿ ಪ್ರದೇಶದೊಳಗೆ ಪ್ರವೇಶಿಸಿದೆ ಎಂದು ಕೇಂದ್ರ ಸರ್ಕಾರವೇ ಹೇಳಿತ್ತು. ಇದೀಗ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ರಕ್ಷಣಾ ಸಚಿವರಿಗೆ ಗಡಿ ಬಿಕ್ಕಟ್ಟಿನ ಕುರಿತು ಪ್ರಶ್ನೆಯೊಂದನ್ನು ಕೇಳಿದ್ದಾರೆ.
ನವದೆಹಲಿ(ಜೂ.09): ಭಾರತ ಹಾಗೂ ಚೀನಾ ಗಡಿ ಬಿಕ್ಕಟ್ಟು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಶಾಂತಿ ಮಾತುಕತೆ, ಉನ್ನತ ಮಟ್ಟದ ಸಭೆಗಳು ಫಲ ನೀಡಿಲ್ಲ. ಪ್ರತಿ ದಿನ ಚೀನಾ ಹೆಚ್ಚುವರಿ ಸೇನೆ ನಿಯೋಜಿಸುತ್ತಿದೆ. ಜೊತೆಗೆ ಶಸ್ತ್ರಾಸ್ತ್ರ ಪೂರೈಕೆ ಮಾಡುತ್ತಿದೆ. ಭಾರತದ ಭೂಭಾಗದಲ್ಲಿ ರಸ್ತೆ ಕಾಮಗಾರಿ ವಿರೋಧಿಸಿ ಆರಂಭವಾದ ತಕರಾರು ಇದೀಗ ಯುದ್ಧದ ಕಾರ್ಮೋಡ ಆವರಿಸಿದೆ. ಇದರ ಬೆನ್ನಲ್ಲೇ ಇತ್ತ ರಾಹುಲ್ ಗಾಂಧಿ, ಕೇಂದ್ರ ಸರ್ಕಾರ ವಿರುದ್ಧ ಪ್ರಶ್ನೆಗಳ ಬಾಣ ಹೂಡಿದ್ದಾರೆ.
ಎದುರಿಗೆ ಶಾಂತಿ ಮಂತ್ರ, ಗಡಿಯಲ್ಲಿ ಯುದ್ಧ ಸಿದ್ಧತೆ: ಬಯಲಾಯ್ತು ಚೀನಾ ಕುತಂತ್ರ ಬುದ್ಧಿ!...
ರಾಹುಲ್ ಗಾಂಧಿ, ಕೇಂದ್ರ ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್‌ಗೆ ಟ್ವಿಟರ್ ಮೂಲಕ ಪ್ರಶ್ನಿಸಿದ್ದಾರೆ. ರಕ್ಷಣಾ ಮಂತ್ರಿ ಇದಕ್ಕೆ ಉತ್ತರ ನೀಡುವರೆ? ಚೀನಾ ಸೇನೆ ಭಾರತದ ಭೂಭಾಗವನ್ನು ಆಕ್ರಮಿಸಿಕೊಂಡಿದೆಯಾ ಎಂದು ರಾಹುಲ್ ಪ್ರಶ್ನಿಸಿದ್ದಾರೆ.
ಭಾರತ-ಚೀನಾ ಬಿಕ್ಕಟ್ಟು ಸಮಸ್ಯೆ ಕುರಿತು ರಾಹುಲ್ ಗಾಂಧಿ ಕೇಂದ್ರ ಸರ್ಕಾರ ವಿರುದ್ಧ ಅಸಮಧಾನ ವ್ಯಕ್ತಪಡಿಸಿದ್ದರು. ಇದಕ್ಕೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿರುಗೇಟು ನೀಡಿದ್ದರು. ಇದೀಗ ರಾಹುಲ್ ಗಾಂಧಿ ಖಡಕ್ ಪ್ರಶ್ನೆ ಮೂಲಕ ರಕ್ಷಣಾ ಸಚಿವ ರಾಜನಾಥ್ ಸಿಂಗ್‌ಗೆ ಎಚ್ಚರಿಕೆ ನೀಡಿದ್ದಾರೆ. ದೇಶದ ಜನತೆ ಮುಂದೆ ಗಡಿ ಪ್ರದೇಶದ ಮಾಹಿತಿ ನೀಡಿ. ಭಾರತದ ಗಡಿಯೊಳಗೆ ಚೀನಾ ಪ್ರವೇಶಿಸಿದೆಯಾ ಎಂದು ಸ್ಪಷ್ಟಪಡಿಸಿ ಎಂದಿದ್ದಾರೆ.