ನವದೆಹಲಿ(ಏ.10): ಕೊರೋನಾ ಲಸಿಕೆ ವಿಚಾರದಲ್ಲಿ ಕೆಲವರು ರಾಜಕೀಯ ಮಾಡುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರ ಆರೋಪದ ಬೆನ್ನಲ್ಲೇ, ಕೊರೋನಾ ಲಸಿಕೆಗಳ ರಫ್ತು ನಿಷೇಧಿಸಿ ಅಗತ್ಯವಿರುವ ದೇಶದ ಜನತೆಗೆ ಲಸಿಕೆ ವ್ಯವಸ್ಥೆ ಮಾಡಬೇಕು ಎಂದು ಕೇಂದ್ರಕ್ಕೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಒತ್ತಾಯಿಸಿದ್ದಾರೆ.

ಈ ಸಂಬಂಧ ಮೋದಿ ಅವರಿಗೆ ಪತ್ರ ಬರೆದಿರುವ ರಾಹುಲ್‌, ಇಡೀ ದೇಶವೇ ಕೊರೋನಾ ಲಸಿಕೆಗಳ ಕೊರತೆಯಿಂದ ಬಳಲುತ್ತಿದೆ. ಆದರೆ ಈ ಅವಧಿಯಲ್ಲಿ 6 ಕೋಟಿಗಿಂತ ಹೆಚ್ಚು ಲಸಿಕೆಯ ಡೋಸ್‌ಗಳನ್ನು ವಿದೇಶಗಳಿಗೆ ರಫ್ತು ಮಾಡಲಾದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಲಸಿಕೆಗಳ ರಫ್ತು ನಿಷೇಧಿಸಿ ಅಗತ್ಯವಿರುವ ದೇಶದ ಜನ ಸಾಮಾನ್ಯರಿಗೆ ಲಸಿಕೆ ನೀಡಬೇಕು. ಲಸಿಕೆಗಳ ಖರೀದಿಗೆ ಮೀಸಲಿಡಲಾದ 35 ಸಾವಿರ ಕೋಟಿ ರು. ಅನ್ನು 70 ಸಾವಿರ ಕೋಟಿ ರು.ಗೆ ವಿಸ್ತರಿಸಬೇಕು ಎಂದು ಆಗ್ರಹಿಸಿದ್ದಾರೆ.

ಬಿಜೆಪಿ ತಿರುಗೇಟು:

ರಾಹುಲ್‌ ಆಗ್ರಹಕ್ಕೆ ಬಿಜೆಪಿ ತಿರುಗೇಟು ನೀಡಿದೆ. ‘ಕಾಂಗ್ರೆಸ್‌ ರಾಜ್ಯಗಳಲ್ಲಿ ಮಾತ್ರ ಲಸಿಕೆ ಕೊರತೆ ಉಂಟಾಗುತ್ತಿದೆ. ಇದು ಆರೋಗ್ಯ ಕ್ಷೇತ್ರ ಮೇಲೆ ಕಾಂಗ್ರೆಸ್‌ ಹೊಂದಿರುವ ಬದ್ಧತೆಯ ಕೊರತೆ’ ಎಂದು ಕೇಂದ್ರ ಸಚಿವ ರವಿಶಂಕರ ಪ್ರಸಾದ್‌ ಟೀಕಿಸಿದ್ದಾರೆ.