ನವದೆಹಲಿ(ನ.07): 2021ನೇ ಸಾಲಿನ ವಾರ್ಷಿಕ ಹಜ್‌ ಯಾತ್ರೆ ಜೂ.26ರಿಂದ ಆರಂಭವಾಗಲಿದೆ ಎಂದು ಭಾರತೀಯ ಹಜ್‌ ಸಮಿತಿ ತಿಳಿಸಿದೆ. ಕೋವಿಡ್‌ ಪರಿಸ್ಥಿತಿಯನ್ನು ಅವಲೋಕಿಸಿ ಈ ಬಾರಿ ಕೆಲವು ನಿರ್ಬಂಧಗಳನ್ನು ವಿಧಿಸಲಾಗಿದೆ. 18-65 ವರ್ಷದವರಿಗೆ ಮಾತ್ರ ಈ ಬಾರಿ ಯಾತ್ರೆಗೆ ಅವಕಾಶ ಇರಲಿದ್ದು, ನ.7 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದೆ. ಡಿ.10 ಅರ್ಜಿ ಸಲ್ಲಿಕೆಗೆ ಕಡೇ ದಿನವಾಗಿದ್ದು, 500 ಸೀಟುಗಳನ್ನು ಮಹಿಳೆಯರಿಗೆ ಮೀಸಲಿರಿಸಲಾಗಿದೆ ಎಂದು ತಿಳಿಸಿದೆ.

ಪುರುಷ ಜತೆಗಾರರು ಇಲ್ಲದ ಮಹಿಳೆಯರು 4 ಮಂದಿಯ ಗುಂಪು ಮಾಡಿಕೊಂಡು ತೆರಳಬೇಕು ಎನ್ನುವ ನಿಯಮ ಈ ಬಾರಿ ಮೂರಕ್ಕೆ ಇಳಿಸಲಾಗಿದೆ. ಒಂದಕ್ಕಿಂತ ಹೆಚ್ಚು ಕೋಟಾದಲ್ಲಿ ಅರ್ಜಿ ಸಲ್ಲಿಸಿದವರ ಹೆಸರನ್ನು 2021ರ ಜನವರಿಯಲ್ಲಿ ಲಾಟರಿ ತೆಗೆಯುವ ಮೂಲಕ ಆಯ್ಕೆ ಮಾಡಲಾಗುತ್ತದೆ. ಈ ಬಾರಿಯ ಹಜ್‌ ವೆಚ್ಚವನ್ನು ಹೆಚ್ಚಳ ಮಾಡಲಾಗಿದ್ದು, ಎಷ್ಟುಹೆಚ್ಚಿಸಲಾಗಿದೆ ಎನ್ನುವುದನ್ನು ಸ್ಪಷ್ಟಪಡಿಸಿಲ್ಲ. ಆದರೆ ಲಾಟರಿ ಮೂಲಕ ಆಯ್ಕೆಯಾದವರು ಮೊದಲ ಹಂತದ ಠೇವಣಿಯಾಗಿ 1.5 ಲಕ್ಷ ಪಾವತಿ ಮಾಡಬೇಕು ಎಂದು ಹೇಳಲಾಗಿದೆ. ಹಿಂದೆ ಇದು 81 ಸಾವಿರ ಇತ್ತು.

ಜೂನ್‌ 26ಕ್ಕೆ ಮೊದಲ ವಿಮಾನ ಸೌದಿ ಅರೇಬಿಯಾಗೆ ತೆರಳಲಿದ್ದು, ಜುಲೈ 31ಕ್ಕೆ ಕೊನೆಯ ವಿಮಾನ ಹಾರಲಿದೆ. ಬೆಂಗಳೂರು ಸೇರಿ ದೇಶದ 10 ನಗರದಗಳಿಂದ ಹಜ್‌ ವಿಶೇಷ ವಿಮಾನ ಇರಲಿದೆ. ಕೋವಿಡ್‌ ಭಾದೆಯಿಂದಾಗಿ 2020ರ ಹಜ್‌ ಯಾತ್ರೆ ರದ್ದು ಮಾಡಲಾಗಿತ್ತು.