* ಹಿಂದು/ಮುಸ್ಲಿಂ ಪೈಕಿ ಯಾವ ಅರ್ಜಿ ಮೊದಲು ವಿಚಾರಣೆ* ಗ್ಯಾನವಾಪಿ ಕೇಸ್‌: ಇಂದು ಮಹತ್ವದ ಆದೇಶ ನಿರೀಕ್ಷೆ* ವಾರಾಣಸಿ ಜಿಲ್ಲಾ ಕೋರ್ಚ್‌ನಿಂದ ಇಂದು ನಿರ್ಧಾರ ಸಂಭವ

ವಾರಾಣಸಿ(ಮೇ.24): ಗ್ಯಾನವಾಪಿ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ಹಿಂದು ಹಾಗೂ ಮುಸ್ಲಿಮರು ಸಲ್ಲಿಸಿರುವ ಅರ್ಜಿಗಳ ಪೈಕಿ ಯಾವುದನ್ನು ಮೊದಲು ವಿಚಾರಣೆ ನಡೆಸಬೇಕು ಎಂಬ ಕುರಿತು ವಾರಾಣಸಿಯ ಜಿಲ್ಲಾ ನ್ಯಾಯಾಲಯ ಮಂಗಳವಾರ ಮಹತ್ವದ ಆದೇಶ ಹೊರಡಿಸಲಿದೆ.

ಸಿವಿಲ್‌ ನ್ಯಾಯಾಲಯ (ಹಿರಿಯ ವಿಭಾಗ)ದ ನ್ಯಾಯಾಧೀಶರ ನೇತೃತ್ವದಲ್ಲಿ ನಡೆಯುತ್ತಿದ್ದ ವಿಚಾರಣೆಯನ್ನು ಶುಕ್ರವಾರ ಸುಪ್ರೀಂಕೋರ್ಚ್‌ ಜಿಲ್ಲಾ ನ್ಯಾಯಾಲಯಕ್ಕೆ ವರ್ಗಾಯಿಸಿತ್ತು. 25ರಿಂದ 30 ವರ್ಷ ಅನುಭವವುಳ್ಳ ಹಿರಿಯ ನ್ಯಾಯಾಧೀಶರು ಈ ಪ್ರಕರಣದ ವಿಚಾರಣೆ ನಡೆಸಬೇಕು ಎಂದು ಸೂಚಿಸಿತ್ತು. ಅದರಂತೆ ಜಿಲ್ಲಾ ನ್ಯಾಯಾಧೀಶ ಎ.ಕೆ.ವಿಶ್ವೇಶ್‌ ಅವರು ಸೋಮವಾರ ಹಿಂದು ಹಾಗೂ ಮುಸ್ಲಿಂ ಎರಡೂ ಕಡೆಯ ಅರ್ಜಿಗಳ ವಿಚಾರಣೆ ನಡೆಸಿದರು.

ನ್ಯಾಯಾಲಯದಿಂದ ನೇಮಕಗೊಂಡಿದ್ದ ಸರ್ವೇ ಸಮಿತಿ ಈಗಾಗಲೇ ತನ್ನ ಕಾರ್ಯ ಪೂರ್ಣಗೊಳಿಸಿದೆ. ಹೀಗಾಗಿ ಪ್ರತಿವಾದಿಗಳಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಬೇಕು ಎಂದು ಹಿಂದು ಅರ್ಜಿದಾರರು ಕೋರಿದರು. ಈ ನಡುವೆ, 1991ರ ಪೂಜಾ ಸ್ಥಳ ಕಾಯ್ದೆಯನ್ವಯ ಹಿಂದು ಅರ್ಜಿದಾರರ ಅರ್ಜಿಯೇ ನಿಯಮಬಾಹಿರ. ಹೀಗಾಗಿ ಅರ್ಜಿಯನ್ನೇ ವಜಾಗೊಳಿಸಬೇಕು ಎಂದು ಮುಸ್ಲಿಂ ಅರ್ಜಿದಾರರು ಮನವಿ ಮಾಡಿದರು. ಈ ಪೈಕಿ ಯಾವ ಅರ್ಜಿಯನ್ನು ಮೊದಲು ವಿಚಾರಣೆ ನಡೆಸಬೇಕು ಎಂದು ನ್ಯಾಯಾಲಯ ಮಂಗಳವಾರ ನಿರ್ಧರಿಸಲಿದೆ.

ಹೊಸ ಅರ್ಜಿ:

ಮತ್ತೊಂದೆಡೆ, ವಿಡಿಯೋ ಸಮೀಕ್ಷೆ ವೇಳೆ ಗ್ಯಾನವಾಪಿ ಮಸೀದಿಯೊಳಗೆ ಶಿವಲಿಂಗ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಅಲ್ಲಿ ಪೂಜಿಸಲು ಅನುಮತಿ ನೀಡಬೇಕು ಎಂದು ಕೋರಿ ಕಾಶಿ ವಿಶ್ವನಾಥ ದೇಗುಲದ ಮಹಾಂತ ಡಾ| ಕುಲಪತಿ ತಿವಾರಿ ಅವರು ಹೊಸ ಅರ್ಜಿ ಸಲ್ಲಿಸಿದ್ದಾರೆ.

ಕುತುಬ್‌ ಮಿನಾರ್‌ನಲ್ಲಿ ನಡೆಯುತ್ತಾ ಉತ್ಖನನ?

ಗ್ಯಾನವಾಪಿ ಮಸೀದಿ ಬಳಿಕ ದಿಲ್ಲಿಯ ಜಗದ್ವಿಖ್ಯಾತ ಕುತುಬ್‌ ಮಿನಾರ್‌ ಕೂಡ ಹಿಂದೂ ಸ್ಮಾರಕ ಎಂಬ ವಾದ ಕೇಳಿ ಬಂದ ಕಾರಣ, ಕುತುಬ್‌ ಉತ್ಖನನಕ್ಕೆ ಕೇಂದ್ರ ಸಾಂಸ್ಕೃತಿಕ ಸಚಿವಾಲಯವು ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಗೆ (ಎಎಸ್‌ಐ) ಆದೇಶ ನೀಡಿತ್ತು ಎಂದು ಭಾನುವಾರ ಬೆಳಗ್ಗೆ ಮಾಧ್ಯಮ ವರದಿಗಳು ಹೇಳಿದ್ದವು. ಆದರೆ ಈವರೆಗೂ ಇಂಥ ಯಾವುದೇ ನಿರ್ಣಯ ಕೈಗೊಂಡಿಲ್ಲ ಎಂದು ಕೇಂದ್ರ ಸಂಸ್ಕೃತಿ ಸಚಿವ ಜಿ. ಕಿಶನ್‌ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.

ಸಚಿವರು ಉತ್ಖನನ ಸಾಧ್ಯತೆಯನ್ನು ಸಂಪೂರ್ಣವಾಗಿ ತಳ್ಳಿಹಾಕಿಲ್ಲ. ಹೀಗಾಗಿ ಸರ್ಕಾರದ ತಲೆಯಲ್ಲಿ ಉತ್ಖನನದ ಚಿಂತನೆ ಇದೆ ಎಂಬುದು ದೃಢಪಟ್ಟಂತಾಗಿದೆ ಎಂಬ ವಿಶ್ಲೇಷಣೆಗಳು ಕೇಳಬಂದಿವೆ.

ಕುತುಬ್‌ ಮಿನಾರ್‌ ಅನ್ನು ‘ವಿಷ್ಣುಸ್ತಂಭ’ ಎಂದು ಮರುನಾಮಕರಣ ಮಾಡಬೇಕು ಎಂದು ಹಿಂದು ಸಂಘಟನೆಗಳು ಎರಡು ವಾರಗಳ ಹಿಂದೆ ಪ್ರತಿಭಟನೆ ನಡೆಸಿದ್ದವು. ಅದರ ಬೆನ್ನಲ್ಲೇ ಎಎಸ್‌ಐ ಮಾಜಿ ಅಧಿಕಾರಿ ಧರಮ್‌ವೀರ್‌ ಶರ್ಮಾ ಎಂಬುವರು ಇದು ಕುತ್ಬುದ್ದೀನ್‌ ಐಬಕ್‌ ಕಟ್ಟಿಸಿದ ಮಿನಾರ್‌ ಅಲ್ಲ. ವಿಕ್ರಮಾದಿತ್ಯ ಕಟ್ಟಿದ ‘ಸೂರ್ಯಗೋಪುರ’ ಎಂದು ಹೇಳಿದ್ದರು. ಬಳಿಕ ಕೇಂದ್ರ ಸಂಸ್ಕೃತಿ ಸಚಿವಾಲಯದ ಕಾರ್ಯದರ್ಶಿ ಗೋವಿಂದ ಮೋಹನ್‌ ಅವರು ಶನಿವಾರ ಐತಿಹಾಸಿಕ ಸ್ಮಾರಕಕ್ಕೆ, ನಾಲ್ವರು ಎಎಸ್‌ಐ ಅಧಿಕಾರಿಗಳು ಹಾಗೂ ಸಂಶೋಧಕರ ಜತೆ ಭೇಟಿ ನೀಡಿದ್ದರು. ಇದರ ಬೆನ್ನಲ್ಲೇ ಉತ್ಖನನಕ್ಕೆ ಎಎಸ್‌ಐಗೆ ಸಂಸ್ಕೃತಿ ಸಚಿವಾಳಯ ಸೂಚಿಸಿದೆ ಎಂದು ಮೂಲಗಳು ತಿಳಿಸಿದ್ದಾಗಿ ವರದಿಯಾಗಿತ್ತು.

ಆದರೆ ಇಂಥ ನಿರ್ಣಯ ಕೈಗೊಂಡಿಲ್ಲ ಎಂದು ಕೆಲವು ಮೂಲಗಳು ಭಾನುವಾರ ಸ್ಪಷ್ಟನೆ ನೀಡಿವೆಯಾದರೂ, ಉತ್ಖನನದ ಬಗ್ಗೆ ಚರ್ಚೆ ನಡೆದಿದ್ದಂತೂ ನಿಜ ಎಂದು ಹೇಳಿವೆ. ಇದರ ಬೆನ್ನಲ್ಲೇ ಇನ್ನೂ ಯಾವುದೇ ನಿರ್ಣಯ ಕೈಗೊಂಡಿಲ್ಲ ಎಂದು ಸಚಿವ ರೆಡ್ಡಿ ಹೇಳಿದ್ದಾರೆ.