ಶ್ರೀನಗರ/ಜಮ್ಮು(ಡಿ.23): ದಕ್ಷಿಣದ ತುತ್ತತುದಿ ಕೇರಳದಲ್ಲಿ ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದ ಬಿಜೆಪಿ, ಇದೀಗ ಉತ್ತರದ ತುತ್ತತುದಿ ಜಮ್ಮು ಮತ್ತು ಕಾಶ್ಮೀರದಲ್ಲೂ ಬೇರುಬಿಡುವ ಸ್ಪಷ್ಟಸುಳಿವುಗಳನ್ನು ನೀಡಿದೆ. ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರದ ಜಿಲ್ಲಾ ಅಭಿವೃದ್ಧಿ ಮಂಡಳಿಗಳಿಗೆ ನಡೆದ ಚುನಾವಣೆಯ ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು, ಇದೇ ಮೊದಲ ಬಾರಿಗೆ ಕಾಶ್ಮೀರದಲ್ಲಿ ಬಿಜೆಪಿ ತನ್ನ ಖಾತೆ ತೆರೆದಿದೆ. ಕಾಶ್ಮೀರ ಬಂಡಿಪೋರಾ ಜಿಲ್ಲೆಯ ಟುಲೈ ಕ್ಷೇತ್ರದಲ್ಲಿ ಅಜೀಜ್‌ ಅಹಮದ್‌ ಮತ್ತು ಶ್ರೀನಗರದ ಖೋನ್‌ಮೋಹ್‌-2 ಕ್ಷೇತ್ರದಲ್ಲಿ ಅಜೀಜ್‌ ಹುಸೇನ್‌ ಬಿಜೆಪಿಯಿಂದ ಗೆಲುವು ಸಾಧಿಸಿದ್ದಾರೆ.

ಇದು ಕಾಶ್ಮೀರದಲ್ಲಿ ಬಿಜೆಪಿ ಯಾವುದೇ ಚುನಾವಣೆಯೊಂದರಲ್ಲಿ ಸಾಧಿಸಿದ ಮೊದಲ ಗೆಲುವಾದ ಕಾರಣ, ಇದನ್ನು ಅತ್ಯಂತ ಮಹತ್ವದ ಬೆಳವಣಿಗೆ ಎಂದೇ ಬಣ್ಣಿಸಲಾಗಿದೆ.

ಜಮ್ಮು- ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದ ಬಳಿಕ ನಡೆದ ನಿರಂತರ ಪ್ರತಿಭಟನೆಗಳು ಹಾಗೂ ಏಳು ರಾಜಕೀಯ ಪಕ್ಷಗಳು ಒಂದಾಗಿ ಗುಪ್ಕರ್‌ ಮೈತ್ರಿಕೂಟ ಮಾಡಿಕೊಂಡು, ಬಿಜೆಪಿಯನ್ನು ಬಗ್ಗು ಬಡಿಯಲು ಮುಂದಾಗಿದ್ದ ಕಾರಣ, ಚುನಾವಣೆ ಸಾಕಷ್ಟು ಗಮನ ಸೆಳೆದಿತ್ತು.

ಒಟ್ಟಾರೆ 280 ಸ್ಥಾನಗಳ ಪೈಕಿ ಬಿಜೆಪಿ ಒಟ್ಟು 69 ಸ್ಥಾನ, ಗುಪ್ಕರ್‌ ಮೈತ್ರಿಕೂಟ 113 ಹಾಗೂ ಕಾಂಗ್ರೆಸ್‌ 23 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಹಲವು ಕ್ಷೇತ್ರಗಳಲ್ಲಿ ಪಕ್ಷೇತರರು ಗೆಲುವು ಸಾಧಿಸಿದ್ದಾರೆ. ಪೂರ್ಣ ಫಲಿತಾಂಶ ಪ್ರಕಟವಾದ ಬಳಿಕ ಅಂಕಿ ಸಂಖ್ಯೆಯಲ್ಲಿ ಬದಲಾವಣೆಯ ಸಾಧ್ಯತೆ ಇದೆ.

ಇದೇ ವೇಳೆ ಜಮ್ಮು- ಕಾಶ್ಮೀರ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಿಜೆಪಿ ಅಭ್ಯರ್ಥಿಗಳಿಗೆ ಅಭಿನಂದನೆ ಸಲ್ಲಿಸಿರುವ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿಬೊಧ್‌ ಗುಪ್ತಾ, ಕಣಿವೆ ರಾಜ್ಯದ ಜನರು ಬಿಜೆಪಿ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ನಂಬಿಕೆ ಇಟ್ಟಿದ್ದಾರೆ ಎಂದು ಹೇಳಿದ್ದಾರೆ.