ಭರತ್‌ಪುರ (ಜ.23): ಈ ಮಹಿಳೆಗೆ ಕೊರೋನಾ ವೈರಸ್‌ ಸೋಂಕಿನ ಯಾವುದೇ ಲಕ್ಷಣಗಳಿಲ್ಲ. ಆದರೆ, ಇಲ್ಲಿಯವರೆಗೆ 31 ಬಾರಿ ಸೋಂಕು ಪತ್ತೆಗೆ ಪರೀಕ್ಷೆ ನಡೆಸಿದಾಗಲೂ ಫಲಿತಾಂಶ ಪಾಸಿಟಿವ್‌ ಬಂದಿದೆ!

- ಹೌದು... ಈಕೆಯ ಪ್ರಕರಣ ಸ್ವತಃ ವೈದ್ಯರಿಗೆ ಅಚ್ಚರಿ ಮೂಡಿದ್ದು, ಚಿಕಿತ್ಸೆ ನೀಡುವುದು ಹೇಗೆಂದು ತಲೆಕೆಡಿಸಿಕೊಂಡಿದ್ದಾರೆ. ರಾಜಸ್ಥಾನದ ಭರತ್‌ಪುರ ಜಿಲ್ಲೆಯಲ್ಲಿ ಈ ಘಟನೆ ವರದಿಯಾಗಿದೆ.

ಶಾರದಾ ಎಂಬ ಈ ಮಹಿಳೆ ಅಪ್ನಾ ಘರ್‌ ಎಂಬ ಆಶ್ರಮದ ನಿವಾಸಿ. ಈಕೆಗೆ 5 ತಿಂಗಳ ಹಿಂದೆ ಅಂದರೆ ಆಗಸ್ಟ್‌ 28, 2020ರಂದು ಮೊದಲ ಬಾರಿ ಟೆಸ್ಟ್‌ ಮಾಡಲಾಗಿತ್ತು. ಆಗ ಕೊರೋನಾ ಪತ್ತೆಯಾಗಿತ್ತು. ನಂತರ ಆಕೆಯನ್ನು ಆರ್‌ಬಿಎಂ ಆಸ್ಪತ್ರೆಗೆ ದಾಖಲಿಸಲಾಯಿತು. ಶಿಷ್ಟಾಚಾರದಂತೆ ಕೆಲ ಚಿಕಿತ್ಸೆ ನೀಡಿದ ವೈದ್ಯರು 14 ದಿನಗಳ ನಂತರ ಟೆಸ್ಟ್‌ ಮಾಡಿದರು. ಆಗ ಮತ್ತೆ ಪಾಸಿಟಿವ್‌ ಬಂತು. ಅಲ್ಲಿಂದ ಇಲ್ಲಿಯವರೆಗೆ ಆಕೆಯನ್ನು ಡಿಸ್‌ಚಾರ್ಜ್ ಮಾಡಲೆಂದು ಒಟ್ಟು 31 ಬಾರಿ ಪರೀಕ್ಷೆ ನಡೆಸಲಾಗಿದೆ. ಅಷ್ಟೂಸಲವೂ ಆಕೆಗೆ ಪಾಸಿಟಿವ್‌ ಬಂದಿದೆ.

ಬೆಂಗ್ಳೂರಲ್ಲಿ 20000 ಅಧಿಕ ಮಂದಿಗೆ ಕೊರೋನಾ ಲಸಿಕೆ

ಈಕೆಗೆ ಆಯುರ್ವೇದ, ಯುನಾನಿ ಹಾಗೂ ಅಲೋಪತಿ- ಎಲ್ಲ ಔಷಧವನ್ನೂ ನೀಡಲಾಗುತ್ತಿದೆ. ಅತ್ಯಂತ ಆರೋಗ್ಯದಿಂದ ಇದ್ದಾಳೆ. ಆದರೂ ಪಾಸಿಟಿವ್‌ ಬರುತ್ತಿರುವುದು ಹೇಗೆ ಎಂದು ಆತಂಕಕ್ಕೆ ಒಳಗಾಗಿರುವ ವೈದ್ಯರು ಐಸೋಲೇಶನ್‌ನಲ್ಲೇ ಚಿಕಿತ್ಸೆ ಮುಂದುವರಿಸಿದ್ದಾರೆ.

ಜಿಲ್ಲೆಯಲ್ಲಿ ಸದ್ಯ ಇರುವ ಏಕೈಕ ಕೊರೋನಾ ರೋಗಿ ಈಕೆಯಾಗಿದ್ದಾಳೆ. ಸೋಂಕಿನ ಯಾವ ಲಕ್ಷಣವೂ ಇಲ್ಲದೆ ಮಹಿಳೆ ಆರೋಗ್ಯವಾಗಿದ್ದರೂ ‘ಪಾಸಿಟಿವ್‌’ ಸಮಸ್ಯೆ ನಿವಾರಣೆ ಆಗದ ಕಾರಣ ಹೆಚ್ಚಿನ ಚಿಕಿತ್ಸೆ ಹಾಗೂ ಅಧ್ಯಯನಕ್ಕಾಗಿ ಜೈಪುರದ ಎಸ್‌ಎಂಎಸ್‌ ಆಸ್ಪತ್ರೆಗೆ ಕಳಿಸಲು ಜಿಲ್ಲಾಡಳಿತ ಮುಂದಾಗಿದೆ.

ಲಸಿಕೆ ಬಗೆಗಿನ ಭೀತಿ ನಿವಾರಿಸಿ: ಮೋದಿ

ಲಖನೌ: ಕೊರೋನಾ ಲಸಿಕೆಯ ಸುರಕ್ಷತೆ ಮತ್ತು ಪರಿಣಾಮಕಾರಿತ್ವದ ಬಗ್ಗೆ ಜನರಲ್ಲಿ ಇರುವ ಭಯ ಹಾಗೂ ಅಪನಂಬಿಕೆಗಳನ್ನು ನಿವಾರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಆರೋಗ್ಯ ಕಾರ್ಯಕರ್ತರಲ್ಲಿ ಮನವಿ ಮಾಡಿಕೊಂಡಿದ್ದಾರೆ. ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರು ಲಸಿಕೆಗೆ ಕ್ಲೀನ್‌ಚಿಟ್‌ ನೀಡಿದರೆ, ಕೊರೋನಾ ಲಸಿಕೆಯ ಕ್ಷಮತೆ ಬಗ್ಗೆ ಪ್ರಬಲ ಸಂದೇಶ ರವಾನೆ ಆಗಲಿದೆ ಎಂದಿದ್ದಾರೆ.