ಮೊರ್ಬಿ ಸೇತುವೆ ದುರಂತ, ಪರಿಸ್ಥಿತಿ ಅವಲೋಕಿಸಲು ಪ್ರಧಾನಿ ಮೋದಿ ಉನ್ನತ ಮಟ್ಟದ ಸಭೆ!
ಗುಜರಾತ್‌ನ ತೂಗು ಸೇತುವೆ ದುರಂತದಲ್ಲಿ 134 ಮಂದಿ ಮೃತಪಟ್ಟಿದ್ದಾರೆ. 170 ಮಂದಿಯನ್ನು ರಕ್ಷಿಸಲಾಗಿದೆ. ಘಟನಾ ಸ್ಥಳಕ್ಕೆ ನಾಳೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಇದಕ್ಕೂ ಮುನ್ನ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ.
ಗಾಂಧಿನಗರ(ಅ.31): ಗುಜರಾತ್‌ನ ಮೊರ್ಬಿಯಲ್ಲಿ ನಡೆದ ತೂಗು ಸೇತುವೆ ದುರಂತ ಭಾರತವನ್ನೇ ಬೆಚ್ಚಿ ಬೀಳಿಸಿದೆ. ಪ್ರವಾಸಕ್ಕೆ ಆಗಮಿಸಿದ ಮಂದಿ ತೂಗು ಸೇತುವೆ ದುರಂತದಲ್ಲಿ ಸಿಲುಕಿ ಮೃತಪಟ್ಟ ಘಟನೆಗೆ ಪ್ರಧಾನಿ ಮೋದಿ, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ. ಘಟನೆ ನಡೆದ ಬೆನ್ನಲ್ಲೇ ತುರ್ತು ರಕ್ಷಣಾ ಕಾರ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಸೂಚನೆ ನೀಡಿದ್ದರು. ಈ ಮೂಲಕ 170 ಮಂದಿಯನ್ನು ರಕ್ಷಿಸಲಾಗಿದೆ. ಇನ್ನೂ ಹಲವರು ನಾಪತ್ತೆಯಾಗಿದ್ದಾರೆ. ಶೋಧ ಕಾರ್ಯಾಚರಣೆ ಮುಂದುವರಿದಿದೆ. ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಮೊರ್ಬಿ ತೂಗು ಸೇತುವೆ ದುರಂತ ಪರಿಸ್ಥಿತಿ ಅವಲೋಕಿಸಲು ಉನ್ನತ ಮಟ್ಟದ ಸಭೆ ನಡೆಸಿದ್ದಾರೆ.
ಘಟನೆ ಕುರಿತು ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿ ಪಡೆದುಕೊಂಡ ಪ್ರಧಾನಿ ಮೋದಿ ಹಲವು ಸೂಚನೆಗಳನ್ನು ನೀಡಿದ್ದಾರೆ. ಗಾಂಧಿನಗರದ ರಾಜಭವನದಲ್ಲಿ ಮೋದಿ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ಈ ವೇಳೆ ಮೊರ್ಬಿ ಸೇತುವೆ ದುರಂತದ ಬಳಿಕ ನಡೆದ ರಕ್ಷಣಾ ಕಾರ್ಯಾಚರಣೆ, ಸಂತ್ರಸ್ತರ ಆಸ್ಪತ್ರೆ ದಾಖಲಿಸುವಿಕೆ ಸೇರಿದಂತೆ ಎಲ್ಲಾ ಮಾಹಿತಿಗಳನ್ನು ಅಧಿಕಾರಿಗಳು ಮೋದಿಗೆ ವಿವರಿಸಿದ್ದಾರೆ. ಇದೇ ವೇಳೆ ಸಂತ್ರಸ್ತರಿಗೆ ಎಲ್ಲಾ ನೆರವು ಸಿಗುವಂತೆ ನೋಡಿಕೊಳ್ಳಲು ಮೋದಿ ಸೂಚಿಸಿದ್ದಾರೆ. ದುರಂತಕ್ಕೆ ಕಾರಣ, ಲೋಪಗಳ ಕುರಿತು ಮೋದಿ ಪ್ರಶ್ನಿಸಿದ್ದಾರೆ.
Morbi bridge Tragedy ಘಟನಾ ಸ್ಥಳಕ್ಕೆ ನಾಳೆ ಪ್ರಧಾನಿ ಮೋದಿ ಭೇಟಿ!
ಸಿಎಂ ಭೂಪೇಂದ್ರ ಭಾಯಿ ಪಟೇಲ್, ಗೃಹ ಸಚಿವ ಹರ್ಷ ಸಂಘವಿ, ಗುಜರಾತ್ ಮುಖ್ಯ ಕಾರ್ಯದರ್ಶಿ ಮತ್ತು ಡಿಜಿಪಿ, ರಾಜ್ಯದ ಗೃಹ ಇಲಾಖೆ ಮತ್ತು ಗುಜರಾತ್ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಸೇರಿದಂತೆ ಇತರ ಉನ್ನತ ಅಧಿಕಾರಿಗಳು ಮೋದಿ ಸಭೆಯಲ್ಲಿ ಉಪಸ್ಥಿತರಿದ್ದರು.
ಘಟನೆ ವಿವರ
ಮೊರ್ಬಿ ನಗರದಲ್ಲಿ ಮಚ್ಛೂ ನದಿಗೆ 140 ವರ್ಷಗಳ ಹಿಂದೆ 762 ಅಡಿ ಉದ್ದದ ಸುಂದರವಾದ ತೂಗು ಸೇತುವೆಯೊಂದನ್ನು ನಿರ್ಮಿಸಲಾಗಿತ್ತು. ಪ್ರವಾಸಿಗರ ನೆಚ್ಚಿನ ತಾಣಗಳ ಪೈಕಿ ಒಂದಾದ ಈ ಸೇತುವೆಯನ್ನು 6 ತಿಂಗಳ ಕಾಲ ದುರಸ್ತಿಗೊಳಿಸಿ ಕೇವಲ 4 ದಿನಗಳ ಹಿಂದಷ್ಟೇ ಸಾರ್ವಜನಿಕರ ಬಳಕೆಗೆ ಮುಕ್ತ ಮಾಡಲಾಗಿತ್ತು. ದೀಪಾವಳಿ ರಜೆ ಮತ್ತು ವಾರಾಂತ್ಯದ ರಜೆ ಹಿನ್ನೆಲೆಯಲ್ಲಿ ಭಾನುವಾರ ಸೇತುವೆ ವೀಕ್ಷಣೆಗೆ ಸಾವಿರಾರು ಜನರು ಆಗಮಿಸಿದ್ದರು.
ಗುಜರಾತ್ ತೂಗು ಸೇತುವೆ ಕುಸಿತ 130 ಮೀರಿದ ಮೃತರ ಸಂಖ್ಯೆ! ಕುಸಿತಕ್ಕೆ ಕಾರಣ ಏನು?
ಭಾನುವಾರ ಹೀಗೆ 300-400 ಜನರು ನಿಂತಿದ್ದ ವೇಳೆ ಸಂಜೆ 6.30ರ ಹೊತ್ತಿಗೆ ಸೇತುವೆ ಏಕಾಏಕಿ ಕುಸಿದು ಬಿದ್ದಿದೆ. ಈ ವೇಳೆ ಮಹಿಳೆಯರು, ಮಕ್ಕಳು ಸೇರಿದಂತೆ ನೂರಾರು ಜನರು ಕ್ಷಣಾರ್ಧದಲ್ಲಿ ನದಿ ಪಾಲಾಗಿದ್ದಾರೆ. ರಕ್ಷಣಾ ತಂಡಗಳು ಸ್ಥಳಕ್ಕೆ ಆಗಮಿಸಿ ನದಿಗೆ ಬಿದ್ದವರನ್ನು ರಕ್ಷಿಸುವ ವೇಳೆಗಾಗಲೇ 60 ಜನರು ಸಾವನ್ನಪ್ಪಿದ್ದಾರೆ. ಉಳಿದ ಕೆಲವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸೇತುವೆ ಕುಸಿದ ಬಳಿಕ ಕೆಲವರು ಈಜಿ ದಡ ಸೇರಿದರೆ ಈಜಲು ಬರದವರು ಮುಳುಗಿ ಸಾವನ್ನಪ್ಪಿದ್ದಾರೆ. ಇನ್ನು ಕೆಲವರು ಕುಸಿದು ನೀರಿಗೆ ಬಿದ್ದ ಸೇತುವೆ ಭಾಗಗಳನ್ನು ಹಿಡಿದುಕೊಂಡೇ ಜೀವ ನೇತಾಡುತ್ತಿದ್ದ ದೃಶ್ಯಗಳು ನೋಡುಗರ ಮೊಬೈಲ್‌ನಲ್ಲಿ ಸೆರೆಯಾಗಿವೆ.