ವಜ್ರೋದ್ಯಮಿ ಕುಟುಂಬದ ಅಜ್ಜಿ, ಮಗಳು, ಮೊಮ್ಮಗಳು ಜೈನ ಸನ್ಯಾಸತ್ವ!
ಶ್ರೀಮಂತ ಕುಟುಂಬಗಳು ಐಷಾರಾಮಿ ಜೀವನಕ್ಕೆ ಒಗ್ಗಿಕೊಂಡಿರುವ ಕುಟುಂಬ| ವಜ್ರೋದ್ಯಮಿ ಕುಟುಂಬದ ಅಜ್ಜಿ, ಮಗಳು, ಮೊಮ್ಮಗಳು ಮೇ 22ಕ್ಕೆ ಜೈನ ಸನ್ಯಾಸತ್ವ
ಅಹಮದಾಬಾದ್(ಜ.06): ಶ್ರೀಮಂತ ಕುಟುಂಬಗಳು ಐಷಾರಾಮಿ ಜೀವನಕ್ಕೆ ಒಗ್ಗಿಕೊಂಡಿರುವ ಹೊತ್ತಿನಲ್ಲೇ, ವಜ್ರದ ವ್ಯಾಪಾರ ಮಾಡುವ ಅತ್ಯಂತ ಸಿರಿವಂತ ಕುಟುಂಬದ ಮೂರು ಹೆಣ್ಣು ಕುಡಿಗಳು ಸನ್ಯಾಸ್ಯತ್ವಕ್ಕೆ ಮುಂದಾಗಿರುವ ಅಚ್ಚರಿಯ ಘಟನೆ ಗುಜರಾತ್‌ನಲ್ಲಿ ನಡೆದಿದೆ.
ಮುಂಬೈನಲ್ಲಿ ನೆಲೆಸಿರುವ ಗುಜರಾತ್ ಮೂಲದ ಇಂದೂಬೆನ್ (73), ಅವರ ಮಗಳು ಹೀತಲ್ ಮೆಹ್ತಾ (49) ಮತ್ತು ಹೀತಲ್‌ರ ಪುತ್ರಿ ಪರಿಷಿ ಶಾ (23) ಮುಂದಿನ ಮೇ 22ಕ್ಕೆ ಜೈನ ಸನ್ಯಾಸಿನಿಯಾಗಿ ದೀಕ್ಷೆ ತೊಡಲು ನಿರ್ಧರಿಸಿದ್ದಾರೆ. ಒಂದೇ ಕುಟುಂಬದ ಮೂವರು ಕುಡಿಗಳು ಹೀಗೆ ಒಮ್ಮೆಗೆ ಸನ್ಯಾಸ್ಯತ್ವ ಸ್ವೀಕರಿಸಲು ಮುಂದಾಗುತ್ತಿರುವುದು ಬಲು ಅಪರೂಪ.
ಉತ್ತರ ಗುಜರಾತ್‌ನ ಬನಸ್ಕಾಂತ ಜಿಲ್ಲೆಯವರಾದ ಇವರು ಸದ್ಯ ಮುಂಬೈನಲ್ಲಿ ತಂಗಿದ್ದು, ಮೇ 22ರಂದು ಸಾಧ್ವಿ ಹಿತದರ್ಶಿತಶ್ರೀಜೀ ಅವರಿಂದ ಜೈನ ಸನ್ಯಾಸತ್ವ ಸ್ವೀಕರಿಸಲಿದ್ದಾರೆ ಎನ್ನಲಾಗಿದೆ.
ಮೊದಲಿಗೆ ಪರಿಷಿ ಮತ್ತು ಅವರ ಅಜ್ಜಿ ಇಂದೂ ಬೆನ್ ಸನ್ಯಾಸತ್ವ ಸ್ವೀಕಾರಕ್ಕೆ ಮುಂದಾಗಿದ್ದರು. ಇದರಿಂದ ಸ್ಫೂರ್ತಿ ಪಡೆದ ಹೀತಲ್ ಮೆಹ್ತಾ ಕೂಡಾ ಅದೇ ಹಾದಿ ತುಳಿಯಲು ಮುಂದಾಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮೊದಲಿಗೆ ಮಗ ಮತ್ತು ಮಗಳ ಮದುವೆ ನೆರವೇರಿಸಿದ ಬಳಿಕ ಜೈನ ಸನ್ಯಾಸತ್ವಕ್ಕೆ ನಿರ್ಧರಿಸಿದ್ದೆ. ಆದರೆ ಮಗಳೇ ಇದೀಗ ಸನ್ಯಾಸಿನಿ ಆಗಲು ಮುಂದಾಗಿದ್ದಾಳೆ. ಈ ಹಿನ್ನೆಲೆಯಲ್ಲಿ ನಾನು ಇನ್ನಷ್ಟುಕಾಯುವುದರಲ್ಲಿ ಅರ್ಥವಿಲ್ಲ ಎಂದಿದ್ದಾರೆ.