ನವದೆಹಲಿ(ಜು.31): ಅತಿವೇಗದ ಮಾನವ ಕಂಪ್ಯೂಟರ್‌ ಎಂದೇ ಖ್ಯಾತಿ ಪಡೆದಿದ್ದ ಕನ್ನಡತಿ, ಬೆಂಗಳೂರು ಮೂಲದ ಗಣಿತಜ್ಞೆ ಶಕುಂತಲಾ ದೇವಿ ಅವರ ಸಾಧನೆ ಅವರು ಮೃತಪಟ್ಟಏಳು ವರ್ಷಗಳ ನಂತರ ಕೊನೆಗೂ ಗಿನ್ನೆಸ್‌ ದಾಖಲೆಗೆ ಸೇರ್ಪಡೆಯಾಗಿದೆ. ಅದರ ಪ್ರಮಾಣ ಪತ್ರ ಲಂಡನ್ನಿನಲ್ಲಿರುವ ಅವರ ಪುತ್ರಿ ಅನುಪಮಾ ಬ್ಯಾನರ್ಜಿಗೆ ಗುರುವಾರ ಹಸ್ತಾಂತರವಾಗಿದೆ.

40 ವರ್ಷಗಳ ಹಿಂದೆ, 1980ರಲ್ಲಿ ಲಂಡನ್‌ನ ಇಂಪೀರಿಯಲ್‌ ಕಾಲೇಜಿನಲ್ಲಿ ಶಕುಂತಲಾ ದೇವಿ ಅವರು 13 ಅಂಕಿಗಳ ಎರಡು ಸಂಖ್ಯೆಗಳನ್ನು 28 ಸೆಕೆಂಡ್‌ನಲ್ಲಿ ಗುಣಿಸಿ ದಾಖಲೆ ನಿರ್ಮಿಸಿದ್ದರು. ಅಷ್ಟುದೊಡ್ಡ ಸಂಖ್ಯೆಯನ್ನು ಯಾರೂ ಅಷ್ಟುಕಡಿಮೆ ಅವಧಿಯಲ್ಲಿ ಮನಸ್ಸಿನಲ್ಲಿಯೇ ಗುಣಿಸಿರಲಿಲ್ಲ. ಆ ಸಾಧನೆ 1982ರಲ್ಲೇ ಗಿನ್ನೆಸ್‌ಗೆ ಸೇರ್ಪಡೆಯಾಗಿದ್ದರೂ ಕೆಲ ಆಕ್ಷೇಪಗಳಿಂದಾಗಿ ಶಕುಂತಲಾ ದೇವಿ ಅವರಿಗೆ ಗಿನ್ನೆಸ್‌ ಬುಕ್‌ ಆಫ್‌ ವಲ್ಡ್‌ರ್‍ ರೆಕಾರ್ಡ್ಸ್ನಿಂದ ಪ್ರಮಾಣ ಪತ್ರ ದೊರೆತಿರಲಿಲ್ಲ ಎನ್ನಲಾಗಿದೆ.

ಈಗ ಬಾಲಿವುಡ್‌ ನಟಿ ವಿದ್ಯಾಬಾಲನ್‌ ನಟನೆಯ ‘ಶಕುಂತಲಾ ದೇವಿ’ ಜೀವನ ಚರಿತ್ರೆಯ ಸಿನಿಮಾ ಶುಕ್ರವಾರ ಅಮೆಜಾನ್‌ ಪ್ರೈಮ್‌ನಲ್ಲಿ ಬಿಡುಗಡೆಯಾಗುತ್ತಿದೆ. ಈ ಚಿತ್ರದ ಶೂಟಿಂಗ್‌ ವೇಳೆ ಶಕುಂತಲಾ ದೇವಿ ಸಾಧನೆಗೆ ಇನ್ನೂ ಗಿನ್ನೆಸ್‌ ಪ್ರಮಾಣ ಪತ್ರ ದೊರೆತಿಲ್ಲ ಎಂಬ ಸಂಗತಿ ಚಿತ್ರತಂಡಕ್ಕೆ ತಿಳಿದುಬಂದಿತ್ತು. ಅದರಂತೆ ಚಿತ್ರತಂಡ ಪತ್ರ ವ್ಯವಹಾರ ನಡೆಸಿ ಗಿನ್ನೆಸ್‌ನಿಂದ ಪ್ರಮಾಣಪತ್ರ ಲಭಿಸುವಂತೆ ಮಾಡಿದೆ.

ಸಿನಿಮಾ ಬಿಡುಗಡೆಯ ಹಿಂದಿನ ದಿನವೇ ಪ್ರಮಾಣಪತ್ರ ಪ್ರದಾನವಾಗಿದೆ. ತಮ್ಮ ತಾಯಿಯ ಸಾಧನೆಗೆ ಗಿನ್ನೆಸ್‌ ಪ್ರಮಾಣಪತ್ರ ದೊರೆತಿರುವುದಕ್ಕೆ ಪುತ್ರಿ ಅನುಪಮಾ ಬ್ಯಾನರ್ಜಿ ಸಂತಸ ವ್ಯಕ್ತಪಡಿಸಿದ್ದಾರೆ.