ನವದೆಹಲಿ(ಜು.04): ದೇಶಾದ್ಯಂತ ಪ್ರವಾಸಿ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಲು ಏಕರೂಪದ ಹೊಸ ಪರ್ಮಿಟ್‌ ವ್ಯವಸ್ಥೆಯೊಂದನ್ನು ಕೇಂದ್ರ ಸರ್ಕಾರ ಜಾರಿಗೆ ತರುತ್ತಿದೆ. ಯಾವುದೇ ಪ್ರವಾಸಿ ವಾಹನ ಮಾಲಿಕರು ಆನ್‌ಲೈನ್‌ನಲ್ಲಿ ನಿಗದಿತ ಶುಲ್ಕ ಪಾವತಿಸಿ 3 ತಿಂಗಳಿನಿಂದ 3 ವರ್ಷದವರೆಗೆ ಈ ‘ಅಖಿಲ ಭಾರತ ಪ್ರವಾಸಿ ಪರವಾನಗಿ’ ಪಡೆದುಕೊಳ್ಳಬಹುದು. ಒಮ್ಮೆ ಇದನ್ನು ಪಡೆದುಕೊಂಡರೆ ಯಾವ ರಾಜ್ಯಕ್ಕೆ ಬೇಕಾದರೂ ಮುಕ್ತವಾಗಿ ಹೋಗಿ ಬರಬಹುದು.

ಈ ಸಂಬಂಧ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಶುಕ್ರವಾರ ಪ್ರಕಟಣೆ ಹೊರಡಿಸಿದ್ದು, ದೇಶದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಕೇಂದ್ರೀಯ ಮೋಟಾರು ವಾಹನಗಳ ನಿಯಮಾವಳಿ-1989ರ ಅಡಿಯಿರುವ ರಾಷ್ಟ್ರೀಯ ಪರ್ಮಿಟ್‌ ವ್ಯವಸ್ಥೆಗೆ ಬದಲಾವಣೆ ತರುವುದಾಗಿ ತಿಳಿಸಿದೆ. ಇದಕ್ಕಾಗಿ ‘ಅಖಿಲ ಭಾರತ ಪ್ರವಾಸಿ ವಾಹನಗಳ ಪ್ರಮಾಣೀಕರಣ ಮತ್ತು ಪರ್ಮಿಟ್‌ ನಿಯಮಾವಳಿ - 2020’ ಜಾರಿಗೆ ತರಲಾಗುವುದು. ಸಂಬಂಧಪಟ್ಟವರು ಹೊಸ ನಿಯಮಗಳಿಗೆ ಆಕ್ಷೇಪಣೆಗಳನ್ನು ಸಲ್ಲಿಸಬಹುದು. ನಂತರ ಅಂತಿಮ ಆದೇಶ ಹೊರಡಿಸಲಾಗುವುದು ಎಂದೂ ಹೇಳಿದೆ.

ದೇಶಾದ್ಯಂತ ಸರಕು ಸಾಗಣೆ ವಾಹನಗಳು ಮುಕ್ತವಾಗಿ ಸಂಚರಿಸಲು ಏಕರೂಪದ ಪರ್ಮಿಟ್‌ ವ್ಯವಸ್ಥೆ ಜಾರಿಗೆ ತಂದು ಅದರಲ್ಲಿ ಯಶಸ್ಸು ದೊರಕಿರುವುದರಿಂದ ಈಗ ಪ್ರವಾಸಿ ವಾಹನಗಳಿಗೂ ಅದೇ ರೀತಿಯ ಪರ್ಮಿಟ್‌ ವ್ಯವಸ್ಥೆ ತರುತ್ತಿರುವುದಾಗಿ ಹೆದ್ದಾರಿ ಸಚಿವಾಲಯ ತಿಳಿಸಿದೆ. ಹೊಸ ವ್ಯವಸ್ಥೆಯಲ್ಲಿ ಪ್ರವಾಸಿ ವಾಹನಗಳ ಮಾಲಿಕರು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ, ನಿಗದಿತ ಶುಲ್ಕ ಪಾವತಿಸಿ, 3 ತಿಂಗಳು, 6 ತಿಂಗಳು, 9 ತಿಂಗಳು ಹೀಗೆ ಗರಿಷ್ಠ 3 ವರ್ಷದವರೆಗೆ ಪರ್ಮಿಟ್‌ ಪಡೆದುಕೊಳ್ಳಬಹುದು. ಅರ್ಜಿ ಹಾಗೂ ಶುಲ್ಕ ಸಲ್ಲಿಸಿ 30 ದಿನದೊಳಗೆ ಪರ್ಮಿಟ್‌ ಸಿಗುತ್ತದೆ. ಇದನ್ನು ಪಡೆದವರು ಮತ್ತೆಲ್ಲೂ ಯಾವುದೇ ಶುಲ್ಕ ಪಾವತಿಸುವ ಅಗತ್ಯವಿಲ್ಲ. ಹೊಸ ವ್ಯವಸ್ಥೆ ಜಾರಿಗೆ ಬಂದಮೇಲೂ ಹಳೆಯ ಪರ್ಮಿಟ್‌ಗಳು ಅವುಗಳ ಕೊನೆಯ ದಿನಾಂಕದವರೆಗೆ ಜಾರಿಯಲ್ಲಿರುತ್ತವೆ ಎಂದು ಆದೇಶದಲ್ಲಿ ಹೇಳಲಾಗಿದೆ.