ನವದೆಹಲಿ(ಅ.07): ಕೊರೋನಾ ವೈರಸ್‌ನಿಂದಾಗಿ ಕಳೆದ ಏಳು ತಿಂಗಳಿನಿಂದ ದೇಶಾದ್ಯಂತ ಮುಚ್ಚಿರುವ ಚಿತ್ರಮಂದಿರಗಳನ್ನು ಅ.15ರಿಂದ ತೆರೆಯಲು ಅನುಮತಿ ನೀಡಿದ್ದ ಕೇಂದ್ರ ಸರ್ಕಾರ ಇದೀಗ ಚಿತ್ರಮಂದಿರಗಳು ಪಾಲಿಸಬೇಕಾದ ಮಾರ್ಗಸೂಚಿಯನ್ನು ಪ್ರಕಟಿಸಿದೆ.

ಚಿತ್ರಮಂದಿರಗಳ ಸಾಮರ್ಥ್ಯದ ಶೇ.50ರಷ್ಟುಪ್ರೇಕ್ಷಕರಿಗೆ ಮಾತ್ರ ಒಂದು ಸಲಕ್ಕೆ ಸಿನಿಮಾ ವೀಕ್ಷಣೆಗೆ ಅವಕಾಶ ನೀಡಬೇಕು. ಒಂದು ಆಸನ ಬಿಟ್ಟು ಒಂದು ಆಸನದಲ್ಲಿ ಪ್ರೇಕ್ಷಕರನ್ನು ಕುಳ್ಳಿರಿಸಬೇಕು. ಪ್ರತಿ ಪ್ರದರ್ಶನದ ನಂತರವೂ ಆಡಿಟೋರಿಯಂಗಳನ್ನು ಸ್ಯಾನಿಟೈಸ್‌ ಮಾಡಬೇಕು. ಪ್ರೇಕ್ಷಕರು ಆರೋಗ್ಯ ಸೇತು ಆ್ಯಪ್‌ ಅನ್ನು ಡೌನ್‌ಲೋಡ್‌ ಮಾಡಿಕೊಂಡಿರಬೇಕು ಎಂಬ ನಿಯಮಗಳು ಮಾರ್ಗಸೂಚಿಯಲ್ಲಿವೆ.

ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್‌ ಜಾವಡೇಕರ್‌ ಚಿತ್ರಮಂದಿರಗಳನ್ನು ಪುನಾರಂಭ ಮಾಡುವ ಬಗ್ಗೆ ಮಂಗಳವಾರ ಈ ಮಾರ್ಗಸೂಚಿಗಳನ್ನು ಪ್ರಕಟಿಸಿದರು.

‘ಜನರ ಸುರಕ್ಷತೆಗಾಗಿ ಶೇ.50ರಷ್ಟುವೀಕ್ಷಕರಿಗೆ ಮಾತ್ರ ಒಂದು ಸಲಕ್ಕೆ ಸಿನಿಮಾ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ. ಆಡಿಟೋರಿಯಂ ಒಳಗೆ ಒಂದು ಸೀಟು ಬಿಟ್ಟು ಒಂದು ಸೀಟಿನಲ್ಲಿ ಪ್ರೇಕ್ಷಕರು ಕುಳಿತುಕೊಳ್ಳಬೇಕು. ಮಧ್ಯದ ಸೀಟಿನ ಮೇಲೆ ‘ಕುಳಿತುಕೊಳ್ಳಬಾರದು’ ಎಂದು ಮಾರ್ಕ್ ಮಾಡಿರಬೇಕು. ಸಿನಿಮಾ ವೀಕ್ಷಿಸುವಷ್ಟೂಹೊತ್ತು ಮಾಸ್ಕ್‌ ಧರಿಸಿರುವುದು ಕಡ್ಡಾಯ. ಚಿತ್ರಮಂದಿರದೊಳಗೆ ಜನರು ಎಲ್ಲಾ ಸಮಯದಲ್ಲೂ ಕನಿಷ್ಠ ಆರು ಅಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು’ ಎಂದು ಜಾವಡೇಕರ್‌ ಹೇಳಿದರು.

ಮಾರ್ಗಸೂಚಿಯಲ್ಲಿ ಇನ್ನೇನಿದೆ?:

ಸಾಧ್ಯವಾದಷ್ಟುಆನ್‌ಲೈನ್‌ ಟಿಕೆಟ್‌ ಬುಕಿಂಗ್‌ಗೆ ಪ್ರೋತ್ಸಾಹ ನೀಡಬೇಕು. ಆದರೂ ಸಿಂಗಲ್‌ ಸ್ಕ್ರೀನ್‌ ಚಿತ್ರಮಂದಿರಗಳಲ್ಲಿ ಟಿಕೆಟ್‌ ಮಾರಲು ಬಾಕ್ಸ್‌ ಆಫೀಸ್‌ಗಳು ತೆರೆಯಬಹುದು. ಒಳಗೆ ಜನರು ಹೋಗುವಾಗ ಒಂದೊಂದೇ ಸಾಲಿನ ಪ್ರೇಕ್ಷಕರನ್ನು ಒಳಗೆ ಬಿಡಬೇಕು. ಮಲ್ಟಿಪ್ಲೆಕ್ಸ್‌ಗಳಲ್ಲಿ ಬೇರೆ ಬೇರೆ ಸ್ಕ್ರೀನ್‌ಗಳ ಪ್ರೇಕ್ಷಕರು ಒಂದೇ ಸಲ ಒಳಗೆ ಅಥವಾ ಹೊರಗೆ ಹೋಗದಂತೆ ಹಾಗೂ ಇಂಟರ್‌ವಲ್‌ನಲ್ಲಿ ಸಂಧಿಸದಂತೆ ನೋಡಿಕೊಳ್ಳಬೇಕು. ಜನರು ಸಾಮಾಜಿಕ ಅಂತರ ಕಾಯ್ದುಕೊಂಡು ಶೌಚಕ್ಕೆ ಹೋಗಿ-ಬರಲು ಇಂಟರ್‌ವಲ್‌ಗೆ ಹೆಚ್ಚು ಸಮಯ ನೀಡುವುದು ಒಳ್ಳೆಯದು.

ಆಡಿಟೋರಿಯಂ ಒಳಗೆ ಎ.ಸಿ.ಯನ್ನು 23 ಡಿಗ್ರಿ ಸೆಲ್ಷಿಯಸ್‌ಗಿಂತ ಮೇಲೆ ಸೆಟ್‌ ಮಾಡಿರಬೇಕು. ಆಡಿಟೋರಿಯಂ ಒಳಗೆ ಆಹಾರ ತಿನಿಸುಗಳನ್ನು ಮಾರಾಟ ಅಥವಾ ಪೂರೈಕೆ ಮಾಡುವಂತಿಲ್ಲ. ಫುಡ್‌ ಕೌಂಟರ್‌ಗಳಲ್ಲಿ ಪೊಟ್ಟಣದ ಆಹಾರಗಳನ್ನು ಮಾತ್ರ ಮಾರಾಟ ಮಾಡಬೇಕು. ಸಿನಿಮಾ ವೀಕ್ಷಣೆಗೆ ಹೋಗುವವರೆಲ್ಲ ಆರೋಗ್ಯ ಸೇತು ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳಬೇಕು.

ಚಿತ್ರಮಂದಿರದ ಪ್ರವೇಶ ದ್ವಾರದಲ್ಲಿ ಥರ್ಮಲ್‌ ಸ್ಕ್ರೀನಿಂಗ್‌ ಕಡ್ಡಾಯ. ಕೊರೋನಾ ಲಕ್ಷಣಗಳಿಲ್ಲದವರನ್ನು ಮಾತ್ರ ಒಳಗೆ ಬಿಡಬೇಕು. ಎಲ್ಲಾ ಪ್ರವೇಶ ದ್ವಾರಗಳಲ್ಲೂ ಹ್ಯಾಂಡ್‌ ಸ್ಯಾನಿಟೈಸರ್‌ ಇರಿಸಿರಬೇಕು. ಕ್ಯೂದಲ್ಲಿ ಜನರು ನಿಲ್ಲಲು ದೂರ-ದೂರ ಬಾಕ್ಸ್‌ ಗುರುತು ಮಾಡಿರಬೇಕು ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.

ಕೇಂದ್ರ ಗೃಹ ಸಚಿವಾಲಯವು ಸೆ.30ರಂದು ಹೊರಡಿಸಿದ ಅನ್‌ಲಾಕ್‌ 5.0 ಆದೇಶದಲ್ಲಿ ಅ.15ರಿಂದ ಚಿತ್ರಮಂದಿರಗಳನ್ನು ತೆರೆಯಲು ಅನುಮತಿ ನೀಡಿತ್ತು. ಅದಕ್ಕೀಗ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

ಪ್ರಮುಖ ನಿಯಮ

1. 2 ಸೀಟಿನ ಮಧ್ಯೆ 1 ಖಾಲಿ ಇದ್ದು, ಅದಕ್ಕೆ ಮಾರ್ಕ್ ಮಾಡಿರಬೇಕು

2. ಚಿತ್ರಮಂದಿರದಲ್ಲಿ ಆಹಾರ ತಿನಿಸು ಮಾರಾಟ, ಪೂರೈಕೆಗೆ ನಿಷೇಧ

3. ಆನ್‌ಲೈನ್‌ ಟಿಕೆಟ್‌ ಪ್ರೋತ್ಸಾಹಿಸಬೇಕು. ಎ.ಸಿ. ತಾಪ 23+ ಇರಬೇಕು

4. ಮಲ್ಟಿಪ್ಲೆಕ್ಸ್‌ನಲ್ಲಿ ಎಲ್ಲ ಪರದೆಗಳಿಗೂ ಒಮ್ಮೆಗೆ ಪ್ರವೇಶ ನೀಡಬಾರದು

5. ಚಿತ್ರಮಂದಿರದೊಳಕ್ಕೆ ಒಂದೊಂದೇ ಸಾಲಿನ ಪ್ರೇಕ್ಷಕರನ್ನು ಬಿಡಬೇಕು