ನವದೆಹಲಿ(ಏ.08): ಮಾರಕ ಕೊರೋನಾ ನಿಗ್ರಹಕ್ಕಾಗಿ ದೇಶಾದ್ಯಂತ ಚಾಲ್ತಿಯಲ್ಲಿರುವ 21 ದಿನಗಳ ಲಾಕ್‌ಡೌನ್‌ ಮುಕ್ತಾಯಗೊಳ್ಳಲು ಕೇವಲ 7 ದಿನ ಬಾಕಿ ಇರುವಾಗಲೇ, ಅದನ್ನು ಮತ್ತಷ್ಟುವಾರ ಮುಂದುವರಿಸುವಂತೆ ಹಲವು ರಾಜ್ಯಗಳಿಂದ ಕೇಂದ್ರ ಸರ್ಕಾರದ ಮೇಲೆ ಒತ್ತಡ ವ್ಯಕ್ತವಾಗುತ್ತಿದೆ. ಹೀಗಾಗಿ ಕೇಂದ್ರ ಸರ್ಕಾರವೂ ಆ ನಿಟ್ಟಿನಲ್ಲಿ ಆಲೋಚನೆ ಮಾಡುತ್ತಿದೆ ಎಂದು ಸರ್ಕಾರದ ಅತ್ಯುನ್ನತ ಮೂಲಗಳು ತಿಳಿಸಿವೆ.

ದೇಶಾದ್ಯಂತ ಕೊರೋನಾ ಸೋಂಕು ಪ್ರಕರಣಗಳ ಸಂಖ್ಯೆ ಮಂಗಳವಾರ 5000ದ ಗಡಿ ದಾಟಿದೆ. ಒಂದು ವೇಳೆ ಲಾಕ್‌ಡೌನ್‌ ಘೋಷಣೆ ಮಾಡದಿದ್ದರೆ ಇದು ಭಾರಿ ಸಂಖ್ಯೆಯಲ್ಲಿ ಹೆಚ್ಚಾಗುತ್ತಿತ್ತು. ‘ಒಬ್ಬ ಸೋಂಕಿತ ವ್ಯಕ್ತಿ ಒಂದು ತಿಂಗಳಲ್ಲಿ 406 ಜನರಿಗೆ ಸೋಂಕು ಹಬ್ಬಿಸಬಲ್ಲ. ಅದೇ ಲಾಕ್‌ಡೌನ್‌ ಇದ್ದರೆ ಆ ಪ್ರಮಾಣ 2.5 ಮಂದಿಗೆ ಇಳಿಕೆಯಾಗುತ್ತಿದೆ’ ಎಂದು ಐಸಿಎಂಆರ್‌ ಕೂಡ ಹೇಳಿದೆ.

ಕೊರೋನಾವನ್ನು ಹೇಗೆ ಎದುರಿಸುತ್ತೆ ದೆಹಲಿ? ಕೇಜ್ರೀವಾಲ್ ಫುಲ್ ಪ್ಲಾನ್ ರೆಡಿ!

ಈ ನಡುವೆ, ಲಾಕ್‌ಡೌನ್‌ ಹಿಂತೆಗೆದುಕೊಂಡರೆ ಸೋಂಕು ವ್ಯಾಪಕವಾಗಿ ಹಬ್ಬುವ ಆತಂಕವಿದೆ ಎಂಬ ಆತಂಕವನ್ನು ಮಹಾರಾಷ್ಟ್ರ, ರಾಜಸ್ಥಾನ , ಮಧ್ಯಪ್ರದೇಶ, ಉತ್ತರಪ್ರದೇಶ, ತೆಲಂಗಾಣದಂತಹ ರಾಜ್ಯಗಳು ವ್ಯಕ್ತಪಡಿಸಿವೆ. ಅಲ್ಲದೆ ಲಾಕ್‌ಡೌನ್‌ ಮುಂದುವರಿಸಿ ಎಂಬ ಸಲಹೆ ಕೂಡ ಮಾಡಿವೆ. ಆರೋಗ್ಯ ಕ್ಷೇತ್ರದ ತಜ್ಞರು ಏಪ್ರಿಲ್‌ ಅಂತ್ಯದವರೆಗೂ ವಿಸ್ತರಣೆ ಮಾಡಿ ಎಂಬ ಬೇಡಿಕೆ ಇಟ್ಟಿದ್ದಾರೆ. ಹೀಗಾಗಿ ಕೇಂದ್ರ ಸರ್ಕಾರ ಆ ಬಗ್ಗೆ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ.

ಟ್ರಂಪ್‌ ಪ್ರತೀಕಾರದ ಮಾತು: 24 ಔಷಧಗಳ ರಫ್ತು ನಿಷೇಧ ಹಿಂಪಡೆದ ಭಾರತ!

ಲಾಕ್‌ಡೌನ್‌ ಕುರಿತು ರಕ್ಷಣಾ ಸಚಿವ ರಾಜನಾಥ ಸಿಂಗ್‌ ನೇತೃತ್ವದ ಸಚಿವರ ಸಮಿತಿ ಮಂಗಳವಾರವೂ ಸಭೆ ಸೇರಿ ಚರ್ಚೆ ನಡೆಸಿತು. ಆದರೆ ವಿಸ್ತರಣೆ ಕುರಿತು ಯಾವುದೇ ನಿರ್ಧಾರ ಕೈಗೊಂಡಿಲ್ಲ. ಒಂದು ವೇಳೆ ಲಾಕ್‌ಡೌನ್‌ ಅನ್ನು ಹಿಂತೆಗೆದುಕೊಂಡರೂ ರಸ್ತೆ ಸಂಚಾರಕ್ಕೆ ಅವಕಾಶ ಸಿಗುವ ಸಾಧ್ಯತೆ ಕಡಿಮೆ ಎಂದು ಹೇಳಲಾಗಿದೆ. ಹೀಗಾಗಿ ರೈಲು, ಬಸ್‌ ಹಾಗೂ ವಿಮಾನ ಸಂಚಾರ ಏಕಾಏಕಿ ಪ್ರಾರಂಭವಾಗುವುದಿಲ್ಲ ಎಂದು ಮೂಲಗಳು ತಿಳಿಸಿವೆ.