ನವದೆಹಲಿ(ಸೆ.27): ಹಬ್ಬಗಳ ಋುತು ಆರಂಭವಾಗುವುದಕ್ಕಿಂತ ಮುಂಚೆ ಕೇಂದ್ರ ಸರ್ಕಾರ ಇನ್ನೊಂದು ಬೃಹತ್‌ ಆರ್ಥಿಕ ಉತ್ತೇಜನಾ ಪ್ಯಾಕೇಜ್‌ ಘೋಷಿಸಲು ಸಿದ್ಧತೆ ಮಾಡಿಕೊಂಡಿದೆ. ಅಂದಾಜು ಇದರ ಮೊತ್ತ 35,000 ಕೋಟಿ ರು. ಆಗಿರಲಿದೆ ಎಂದು ಹೇಳಲಾಗಿದೆ.

ಮುಖ್ಯವಾಗಿ ಈ ಪ್ಯಾಕೇಜ್‌ ಉದ್ಯೋಗ ಸೃಷ್ಟಿಸಲು ಹಾಗೂ ಮಾರುಕಟ್ಟೆಯಲ್ಲಿ ಕುಸಿದಿರುವ ಬೇಡಿಕೆ ಹೆಚ್ಚಿಸಲು ಗಮನ ಕೇಂದ್ರೀಕರಿಸಲಿದೆ. ಕಷ್ಟದಲ್ಲಿರುವವರಿಗೆ ನೇರ ನಗದು ವರ್ಗಾವಣೆ ಮಾಡುವ ಯೋಜನೆಯೂ ಇದರಲ್ಲಿರಲಿದೆ. ಈ ಹಿಂದಿನ ಪಿಎಂ ಗರೀಬ್‌ ಕಲ್ಯಾಣ್‌ ಪ್ಯಾಕೇಜ್‌ ಮತ್ತು ಆತ್ಮನಿರ್ಭರ ಭಾರತ್‌ ಪ್ಯಾಕೇಜ್‌ನಿಂದ ಆಗಿರುವುದಕ್ಕಿಂತಲೂ ಹೆಚ್ಚು ನೇರ ನಗದು ಲಾಭ ಈ ಪ್ಯಾಕೇಜ್‌ನಿಂದ ಜನರಿಗೆ ಆಗಲಿದೆ ಎಂದು ಮೂಲಗಳು ಹೇಳುತ್ತಿವೆ.

ಹೆಚ್ಚಾಗಿ ನಗರ ಪ್ರದೇಶಗಳಲ್ಲಿ ಉದ್ಯೋಗಗಳನ್ನು ಸೃಷ್ಟಿಸುವ, ದೊಡ್ಡ ಪ್ರಮಾಣದಲ್ಲಿ ಮೂಲಸೌಕರ್ಯಗಳನ್ನು ಸೃಷ್ಟಿಸುವ 20-25 ಬೃಹತ್‌ ಯೋಜನೆಗಳು, ಗ್ರಾಮೀಣ ಹಾಗೂ ಕೃಷಿ ಸಂಬಂಧಿ ಉದ್ಯೋಗಗಳ ಸೃಷ್ಟಿಗೆ ಆದ್ಯತೆ ಮತ್ತು ಉಚಿತವಾಗಿ ಆಹಾರ ಹಾಗೂ ಹಣ ಹಂಚುವಂತಹ ಉಪಕ್ರಮಗಳು ಈ ಪ್ಯಾಕೇಜ್‌ನಲ್ಲಿರುವ ಸಾಧ್ಯತೆಯಿದೆ. ‘ಹಬ್ಬಗಳು ಶುರುವಾಗುವುದಕ್ಕಿಂತ ಮುಂಚೆ ಇದನ್ನು ಘೋಷಿಸುವ ಉದ್ದೇಶ ಹೊಂದಿದ್ದೇವೆ. ಜೊತೆಗೆ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲೂ ಇನ್ನಷ್ಟುಉದ್ಯೋಗ ಸೃಷ್ಟಿಸುವ ಬಗ್ಗೆ ಚಿಂತನೆ ನಡೆಯುತ್ತಿದೆ’ ಎಂದು ಕೇಂದ್ರದ ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ ಎನ್ನಲಾಗಿದೆ.

ಈ ಹಿಂದೆ ಕೊರೋನಾ ವೈರಸ್‌ ಲಾಕ್‌ಡೌನ್‌ನಿಂದ ಉಂಟಾದ ಆರ್ಥಿಕ ಆಘಾತವನ್ನು ಸರಿಪಡಿಸಲು 20 ಲಕ್ಷ ಕೋಟಿ ರು.ಗಳ ಆತ್ಮನಿರ್ಭರ ಭಾರತ್‌ ಪ್ಯಾಕೇಜನ್ನು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದರು.