ನವದೆಹಲಿ(ಡಿ.21): ಕಾಯ್ದೆಗಳನ್ನು ಹಿಂಪಡೆಯುವ ಹೊರತು ಪ್ರತಿಭಟನೆಯಿಂದ ಹಿಂದೆ ಸರಿಯಲ್ಲ ಎಂದು ಬಿಗಿಪಟ್ಟು ಹಿಡಿದಿರುವ ರೈತರ ಮನವೊಲಿಕೆಗಾಗಿ ಕೇಂದ್ರ ಸರ್ಕಾರ ಮತ್ತೊಂದು ಯತ್ನಕ್ಕೆ ಮುಂದಾಗಿದೆ. ಈ ನಿಟ್ಟಿನಲ್ಲಿ ಭಾನುವಾರ ಪ್ರತಿಭಟನಾನಿರತ ರೈತ ಸಂಘಟನೆಗಳಿಗೆ ಪತ್ರ ಬರೆದಿರುವ ಕೇಂದ್ರ ಸರ್ಕಾರ ಮಾತುಕತೆಗೆ ಆಹ್ವಾನ ನೀಡಿದೆ. ಜೊತೆಗೆ ಮಾತುಕತೆಯ ದಿನಾಂಕ ನಿರ್ಧಾರವನ್ನು ರೈತರಿಗೆ ನೀಡಲಾಗಿದೆ.

ಕೃಷಿ ಕಾಯ್ದೆಗಳ ಕುರಿತಾಗಿ ನಿಮ್ಮ ಆತಂಕ ಮತ್ತು ಅನುಮಾನಗಳನ್ನು ನಿವಾರಿಸುವ ಸಲುವಾಗಿ ಹಿಂದೆ ಭಾಗಿಯಾಗಿದ್ದ ರೈತ ಸಂಘಟನೆಗಳಿಗೆ ಮತ್ತೊಂದು ಆಹ್ವಾನ ನೀಡಲು ಇಚ್ಚಿಸಲಾಗಿದೆ. ಮುಂದಿನ ಸುತ್ತಿನ ಮಾತುಕತೆ ದಿನಾಂಕವನ್ನು ನೀವೇ ನಿರ್ಧರಿಸಿ ಎಂದು ರೈತ ಸಂಘಟನೆಗಳಿಗೆ ಕೇಂದ್ರ ಕೃಷಿ ಇಲಾಖೆಯ ಜಂಟಿ ಕಾರ್ಯದರ್ಶಿ ವಿವೇಕ್‌ ಅಗರ್‌ವಾಲ್‌ ಅವರು ಬರೆದ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ರೈತರ ಮನವೊಲಿಕೆಗಾಗಿ ಕೇಂದ್ರ ಸರ್ಕಾರ ಈಗಾಗಲೇ 5 ಸುತ್ತಿನ ಮಾತುಕತೆಯನ್ನು ನಡೆಸಿದೆ. ಆದರೆ ಈ ಮಾತುಕತೆಗಳು ಫಲಪ್ರದವಾಗಿರಲಿಲ್ಲ.