Asianet Suvarna News Asianet Suvarna News

30​ ಕೋಟಿ ಮಂದಿಗೆ ಲಸಿಕೆ ನೀಡಲು ಕೇಂದ್ರದ ಸಿದ್ಧತೆ!

30​ ಕೋಟಿ ಮಂದಿಗೆ ಲಸಿಕೆ ನೀಡಲು ಕೇಂದ್ರದ ಸಿದ್ಧತೆ| ರಾಜ್ಯಗಳ ಜತೆಗೂಡಿ ಆದ್ಯತಾ ಪಟ್ಟಿತಯಾರಿಕೆ| ಲಸಿಕೆ ಹಾಕಲು ವಿಶೇಷ ಅಭಿಯಾನ ಆಯೋಜನೆ| ರಾಜ್ಯಗಳ ಬದಲು ಕೇಂದ್ರದಿಂದಲೇ ಲಸಿಕೆ ಖರೀದಿ

Govt Identifying 30 Crore Priority Beneficiaries for Covid Vaccine pod
Author
Bangalore, First Published Oct 24, 2020, 7:13 AM IST

ನವದೆಹಲಿ(ಅ.24): ಕೊರೋನಾ ಸೋಂಕಿಗೆ ಪರಿಣಾಮಕಾರಿ ಲಸಿಕೆ ಇನ್ನೇನು ಕೈಗೆ ಸಿಗಬಹುದು ಎನ್ನುವ ನಿರೀಕ್ಷೆಗಳು ಗರಿಗೆದರಿರುವಾಗಲೇ, ಅದನ್ನು ಅರ್ಹರಿಗೆ ವಿತರಿಸಲು ಕೇಂದ್ರ ಸರ್ಕಾರ ತನ್ನ ಸಿದ್ಧತೆಗಳನ್ನು ಚುರುಕುಗೊಳಿಸಿದೆ. ಲಸಿಕೆ ಲಭ್ಯವಾಗುತ್ತಲೇ ವಿಶೇಷ ಲಸಿಕೆ ಅಭಿಯಾನ ನಡೆಸಲು ಸರ್ಕಾರ ನಿರ್ಧರಿಸಿದೆ. ಮೊದಲ ಹಂತದಲ್ಲಿ ತನಗೆ 40- 60 ಕೋಟಿ ಲಸಿಕೆ ಸಿಗಬಹುದು ಎಂಬ ನಿರೀಕ್ಷೆಯಲ್ಲಿರುವ ಕೇಂದ್ರ ಸರ್ಕಾರ, ಇದನ್ನು ಆದ್ಯತೆಯ ಮೇಲೆ ನೀಡಬೇಕಾದ 30 ಕೋಟಿ ಜನರ ಗುರುತಿಸುವಿಕೆಗೆ ಮುಂದಾಗಿದೆ.

ತಾನೇ ಔಷಧ ಕಂಪನಿಗಳಿಂದ ನೇರವಾಗಿ ಲಸಿಕೆಯನ್ನು ಖರೀದಿಸಿ ಅದನ್ನು ರಾಜ್ಯಗಳಿಗೆ ಹಂಚಲು ಮುಂದಾಗಿದೆ. ರಾಜ್ಯಗಳು ಲಸಿಕೆ ಖರೀದಿಗೆ ಪ್ರತ್ಯೇಕ ಯೋಜನೆ ಹಾಕಿಕೊಳ್ಳಬಾರದು ಎಂದು ನಿರ್ದೇಶನ ನೀಡಿದೆ. ಜೊತೆಗೆ ಲಸಿಕೆಯನ್ನು ಉಚಿತವಾಗಿಯೇ ನೀಡಲು ನಿರ್ಧರಿಸುವ ಮೂಲಕ, ಸೋಂಕಿನಿಂದ ಮುಕ್ತವಾಗಲು ದುಬಾರಿ ಔಷಧಿ ಪಡೆಯಬೇಕಾಗಿ ಬರಬಹುದು ಎಂಬ ಆತಂಕದಲ್ಲಿದ್ದ ಕೋಟ್ಯಂತರ ಜನರಿಗೆ ಶುಭ ಸುದ್ದಿ ನೀಡಿದೆ.

ವಿಶೇಷ ಅಭಿಯಾನ:

ಲಸಿಕೆಯನ್ನು ಸೋಂಕಿತರಿಗೆ ಮಾತ್ರವಲ್ಲದೇ, ಸೋಂಕು ತಗಲುವ ಸಾಧ್ಯತೆ ಹೆಚ್ಚಿರುವವರಿಗೂ ಆದ್ಯತೆಯ ಮೇಲೆ ನೀಡಲಾಗುವುದು. ಇದಕ್ಕಾಗಿ ಇಡೀ ದೇಶಾದ್ಯಂತ ವಿಶೇಷ ಲಸಿಕೆ ಅಭಿಯಾನ ಹಮ್ಮಿಕೊಳ್ಳಲಾಗುವುದು. ಈ ಸಂಬಂಧ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ನೆರವು ಪಡೆದುಕೊಳ್ಳಲಾಗುತ್ತಿದ್ದು, ನವೆಂಬರ್‌ ಮಧ್ಯಭಾಗದೊಳಗೆ ಅರ್ಹರ ಪಟ್ಟಿತಯಾರಿಸುವಂತೆ ಕೇಂದ್ರ ಸರ್ಕಾರ ಸೂಚಿಸಿದೆ. ಹಾಲಿ ರಾಜ್ಯಗಳ ಸಹಯೋಗದಲ್ಲಿ ಕೇಂದ್ರ ಸರ್ಕಾರ ನಡೆಸುತ್ತಿರುವ ಇತರೆ ಲಸಿಕೆ ಅಭಿಯಾನಗಳಿಗೆ ಪರ್ಯಾಯವಾಗಿ ಈ ವಿಶೇಷ ರೋಗ ನಿರೋಧಕ ಅಭಿಯಾನ ನಡೆಯಲಿದೆ. ಆದರೆ ಇದರ ಜಾರಿಗಾಗಿ ಹಾಲಿ ಇರುವ ವಿಧಾನ, ತಂತ್ರಜ್ಞಾನ ಮತ್ತು ವ್ಯವಸ್ಥೆಯನ್ನೇ ಇನ್ನಷ್ಟುಪರಿಣಾಮಕಾರಿ ಬಳಸಿಕೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ.

ಯಾರಿಗೆ ಮೊದಲು?

1 ಕೋಟಿ ವೈದ್ಯರು, ಎಂಬಿಬಿಎಸ್‌ ವಿದ್ಯಾರ್ಥಿಗಳು, ದಾದಿಯರು, ಆಶಾ ಕಾರ್ಯಕರ್ತೆಯರು, ವೈದ್ಯಕೀಯ ಸೇವೆಯಲ್ಲಿ ಇರುವವರು, 2 ಕೋಟಿ ಪೌರ ಕಾರ್ಮಿಕರು, ಪೊಲೀಸರು, ಸಶಸ್ತ್ರ ಪಡೆ ಸಿಬ್ಬಂದಿ, 50 ವರ್ಷ ಮೇಲ್ಪಟ್ಟಮತ್ತು ವಿವಿಧ ರೀತಿಯ ಕಾಯಿಲೆಯಿಂದ ಬಳಲುತ್ತಿರುವ ವರ್ಷಕ್ಕಿಂತ ಕೆಳಗಿನ ಒಟ್ಟು 26 ಕೋಟಿ ಜನರು ಮೊದಲ ಹಂತದಲ್ಲಿ ಲಸಿಕೆ ಪಡೆದುಕೊಳ್ಳಲಿದ್ದಾರೆ.

ಆಧಾರ್‌ ಜೋಡಣೆ

ಲಸಿಕೆ ಪಡೆಯುವವರ ಆರೋಗ್ಯದ ಮೇಲೆ ನಿಗಾ ಇಡಲು ಪ್ರತಿ ಸೋಂಕಿತರ ಆಧಾರ್‌ ಸಂಖ್ಯೆಯನ್ನು ಯೋಜನೆ ಜಾರಿ ಸಮಯದಲ್ಲಿ ಬಳಸಿಕೊಳ್ಳಲು ಉದ್ದೇಶಿಸಲಾಗಿದೆ.

ಅನುಭವಿ ಭಾರತಕ್ಕೆ ಹಾದಿ ಸುಗಮ

ಪ್ರಸಕ್ತ ಕೇಂದ್ರ ಸರ್ಕಾರವು ವಿವಿಧ ರೀತಿಯ ಲಸಿಕಾ ಕಾರ್ಯಕ್ರಮಗಳ ಮೇಲೆ ಸಂಪೂರ್ಣ ನಿಗಾ ಇಡಲು ತನ್ನದೇ ಆದ ಡಿಜಿಟಲ್‌ ವೇದಿಕೆಯನ್ನು ಹೊಂದಿದೆ. ಅದನ್ನು ಇನ್ನಷ್ಟುಆಧುನೀಕರಣಗೊಳಿಸುವ ಮೂಲಕ ಲಸಿಕೆ ಖರೀದಿ, ವಿತರಣೆ, ನೀಡಲಾದವರ ಮಾಹಿತಿ, ಅವರ ಆರೋಗ್ಯ ಕುರಿತ ಮಾಹಿತಿ ಸಂಗ್ರಹಕ್ಕೆ ಬಳಸಿಕೊಳ್ಳಲು ನಿರ್ಧರಿಸಿದೆ. ಅಲ್ಲದೆ ಲಸಿಕೆ ವಿತರಿಸುವವರಿಗೆ ವಿಶೇಷ ಕಾರ್ಯಕ್ರಮದ ಮೂಲಕ ತರಬೇತಿ ನೀಡಲೂ ನಿರ್ಧರಿಸಿದೆ. ಪ್ರತಿ ವರ್ಷ ಭಾರತದಲ್ಲಿ ಸುಮಾರು 60 ಕೋಟಿ ಡೋಸ್‌ಗಳಷ್ಟುವಿವಿಧ ಮಾದರಿಯ ಲಸಿಕೆಯನ್ನು ಮಕ್ಕಳಿಗೆ ಯಶಸ್ವಿಯಾಗಿ ವಿತರಿಸುತ್ತಿರುವ ಕಾರಣ, ಲಸಿಕೆ ಅಭಿಯಾನ ಭಾರತದ ಪಾಲಿಗೆ ಹೆಚ್ಚು ಶ್ರಮದಾಯಕ ಕೆಲಸವಾಗದು ಎಂಬ ವಿಶ್ವಾಸದಲ್ಲಿದೆ ಸರ್ಕಾರ.

ಕೊರೋನಾ ಲಸಿಕೆಯನ್ನು ಸದಾ ಶೀತಲಿಕೃತ ವ್ಯವಸ್ಥೆಯಲ್ಲೇ ಕಾಪಾಡಿಕೊಳ್ಳಬೇಕಾದ ಕಾರಣ, ತನ್ನ ಬಳಿ ಇರುವ ಇಂಥ ವ್ಯವಸ್ಥೆಯನ್ನು ಬಳಸಿಕೊಳ್ಳುವುದರ ಜೊತೆಗೆ ಖಾಸಗಿ ವೈದ್ಯಕೀಯ ಸಂಸ್ಥೆಗಳ ಬಳಿ ಇರುವ ಇಂಥ ವ್ಯವಸ್ಥೆಯನ್ನು ಉಪಯೋಗಿಸಿಕೊಳ್ಳಲು ಸರ್ಕಾರ ತೀರ್ಮಾನಿಸಿದೆ. ಅಲ್ಲದೆ ಕೊರತೆ ಬೀಳುವ ವ್ಯವಸ್ಥೆ ಮತ್ತು ಉಪಕರಣ ಖರೀದಿಗೆ ನಿರ್ಧರಿಸಿದೆ.

Follow Us:
Download App:
  • android
  • ios