ನವದೆಹಲಿ(ಏ.08): ಕೋವಿಡ್‌ ಲಸಿಕೆ ನೀಡಿಕೆ ತೀವ್ರಗೊಳಿಸಬೇಕು ಎಂಬ ಇರಾದೆಯಿಂದ ಮಹತ್ವದ ಕ್ರಮ ಕೈಗೊಂಡಿರುವ ಕೇಂದ್ರ ಸರ್ಕಾರ, ಕಚೇರಿಗಳಲ್ಲಿ ಕೂಡ ಲಸಿಕೆ ನೀಡುವ ಅವಕಾಶ ಕಲ್ಪಿಸಲು ನಿರ್ಧರಿಸಿದೆ.

‘ಕಚೇರಿಗಳಲ್ಲಿನ 45 ವರ್ಷ ಮೇಲ್ಪಟ್ಟಸಿಬ್ಬಂದಿ ಲಸಿಕೆಗೆ ಅರ್ಹರಾಗಲಿದ್ದಾರೆ. ಏಪ್ರಿಲ್‌ 11ರಿಂದ 100 ಅರ್ಹ ಉದ್ಯೋಗಿಗಳು ಇರುವ ಕಚೇರಿಗಳಲ್ಲಿ ಲಸಿಕೆ ಹಾಕಲು ಅವಕಾಶ ನೀಡಲಾಗುತ್ತದೆ’ ಎಂದು ಕೇಂದ್ರ ಆರೋಗ್ಯ ಕಾರ‍್ಯದರ್ಶಿ ರಾಜೇಶ್‌ ಭೂಷಣ್‌ ಅವರು ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ.

ಸರ್ಕಾರಿ ಕಚೇರಿ, ಖಾಸಗಿ ಕಚೇರಿ, ಕಾರ್ಖಾನೆಗಳು ಹಾಗೂ ಕಂಪನಿಗಳಿಗೆ ಆದೇಶ ಅನ್ವಯವಾಗಲಿದೆ. ಸರ್ಕಾರಿ ಹಾಗೂ ಖಾಸಗಿ ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಉದ್ಯೋಗಿಗಳಿಗೆ ಲಸಿಕೆ ಲಭ್ಯತೆಯನ್ನು ಹೆಚ್ಚಿಸುವ ನಿಟ್ಟಿನಿಂದ ಕೆಲಸದ ಸ್ಥಳಗಳಲ್ಲಿ ಲಸಿಕೆ ನೀಡಿಕೆ ಸೆಷನ್‌ಗಳನ್ನು ನಡೆಸಬಹುದಾಗಿದೆ. ಈ ಉದ್ದೇಶಕ್ಕಾಗಿ ಕಚೇರಿಗಳನ್ನು ಸಮೀಪದ ಲಸಿಕೆ ವಿತರಣೆ ಕೇಂದ್ರಗಳ ಜೊತೆ ಸಂಯೋಜಿಸಲಾಗುವುದು. ಸರ್ಕಾರಗಳು ಕಚೇರಿಗಳ ಜತೆ ಮಾತನಾಡಿ ಲಸಿಕೆ ನೀಡಿಕೆ ಏರ್ಪಡಿಸಬಹುದು.

45 ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟಉದ್ಯೋಗಿಗಳು ಕೆಲಸದ ಸ್ಥಳದಲ್ಲಿ ಲಸಿಕೆ ಪಡೆಯಲು ಅರ್ಹರಾಗಿದ್ದು, ಹೊರಗಿನವರಿಗೆ ಅವಕಾಶ ಇಲ್ಲ. ಸಮನ್ವಯ ಕಾರ್ಯಕ್ಕಾಗಿ ಸಂಸ್ಥೆಯ ಹಿರಿಯ ಸಿಬ್ಬಂದಿಯೊಬ್ಬರನ್ನು ನೋಡಲ್‌ ಅಧಿಕಾರಿಯನ್ನಾಗಿ ನೇಮಿಸಲಾಗುವುದು. ಈ ಸಿಬ್ಬಂದಿ ಎಲ್ಲರಿಗೂ ಲಸಿಕೆ ಲಭ್ಯವಾಗುವುದುನ್ನು ಖಚಿತಪಡಿಸಿಕೊಳ್ಳಬೇಕು. ಸಂಸ್ಥೆಯ ಉದ್ಯೋಗಿಗಳಿಗೆ ಸ್ಥಳದಲ್ಲೇ ನೋಂದಣಿ ಮಾಡಿಕೊಳ್ಳುವುದಕ್ಕೆ ಅವಕಾಶ ಇರಲಿದೆ ಎಂದು ಮಾರ್ಗಸೂಚಿಯಲ್ಲಿ ತಿಳಿಸಿದೆ.