ನವದೆಹಲಿ(ಜೂ.22): ತನ್ನ 20 ಯೋಧರು ಚೀನೀ ಸೈನಿಕರ ಕೈಯಲ್ಲಿ ಹತ್ಯೆ ಆಗುತ್ತಿದ್ದಂತೆಯೇ ಭಾರತ ಸರ್ಕಾರ ಚೀನಾ ಉತ್ಪನ್ನಗಳ ಮೇಲೆ ಸಮರಕ್ಕೆ ಅಧಿಕೃತವಾಗಿ ಮುಂದಾಗಿದೆ. ಆಮದಾಗುವ ಚೀನಾದ ಅಗ್ಗದ ದರದ ಉತ್ಪನ್ನಗಳು ಯಾವುವು, ದೇಶೀ ಉತ್ಪನ್ನಕ್ಕೂ ಚೀನೀ ಉತ್ಪನ್ನಕ್ಕೂ ಇರುವ ದರದ ವ್ಯತ್ಯಾಸವೇನು, ಭಾರತೀಯ ಉತ್ಪನ್ನಗಳಿಗೆ ಹೆಚ್ಚಿನ ತೆರಿಗೆ ಏನಾದರೂ ಇದೆಯೇ ಎಂಬ ವಿವರವನ್ನು ಉದ್ಯಮದಿಂದ ಬಯಸಿದೆ.

ಸೇನೆಗೆ ಪರಮಾಧಿಕಾರ, ಶಸ್ತ್ರಾಸ್ತ್ರ ಬಳಕೆಗೂ ಅನುಮತಿ: ತಂಟೆಗೆ ಬಂದ್ರೆ ಚೀನಾಗೆ ಶಾಸ್ತಿ!

ಚೀನಾದ ಕಳಪೆ ಗುಣಮಟ್ಟದ ಉತ್ಪನ್ನಗಳಿಗೆ ಕಡಿವಾಣ ಹಾಕಿ ದೇಶೀ ಉತ್ಪನ್ನಗಳಿಗೆ ಹೆಚ್ಚು ಆದ್ಯತೆ ನೀಡುವುದು ಇದರ ಹಿಂದಿನ ಉದ್ದೇಶವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ‘ಆತ್ಮನಿರ್ಭರ ಭಾರತ’ಕ್ಕೆ (ಸ್ವಾವಲಂಬಿ ಭಾರತ) ಕರೆ ನೀಡಿದ್ದರು. ಇದಕ್ಕೆ ಅನುಗುಣವಾಗಿ ಸರ್ಕಾರವು ಚೀನೀ ದಾಳಿಯ ಬೆನ್ನಲ್ಲೇ ಕ್ರಮಕ್ಕೆ ಮುಂದಾಗಿದೆ.

ಪ್ರಧಾನಿ ಕಚೇರಿಯಲ್ಲಿ ಇತ್ತೀಚೆಗೆ ‘ಆತ್ಮನಿರ್ಭರ ಭಾರತ’ ಕುರಿತಂತೆ ಉನ್ನತ ಮಟ್ಟದ ಸಭೆ ನಡೆಯಿತು. ಈ ವೇಳೆ, ಚೀನಾದಿಂದ ಆಮದು ಆಗುವ ವಸ್ತುಗಳ ಬಗ್ಗೆ ಟಿಪ್ಪಣಿ ಹಾಗೂ ಸಲಹೆ ಕಳಿಸಿ ಎಂದು ಉದ್ಯಮಕ್ಕೆ ಮನವಿ ಮಾಡಿತು ಎಂದು ಮೂಲಗಳು ಹೇಳಿವೆ.

2014-15 ಹಾಗೂ 2018-19ರ ನಡುವೆ ಆಮದಿನಲ್ಲಿ ಎಷ್ಟುಏರಿಕೆ ಆಗಿದೆ ಹಾಗೂ ಇವೇ ಭಾರತೀಯ ಉತ್ಪನ್ನಗಳಿಗೆ ಭಾರತದಲ್ಲಿ ಎಷ್ಟುಎಂಬುದರ ವಿವರ ಬಯಸಲಾಯಿತು. ಈ ಬಗ್ಗೆ ಉದ್ಯಮವು ತನ್ನ ಅಭಿಪ್ರಾಯವನ್ನು ಸಿದ್ಧಪಡಿಸುತ್ತಿದ್ದು, ಸರ್ಕಾರಕ್ಕೆ ಸಲ್ಲಿಸಲಿದೆ ಎಂದು ಮೂಲಗಳು ತಿಳಿಸಿವೆ. ಭಾರತದ ಆಮದಿನಲ್ಲಿ ಚೀನಾ ಉತ್ಪನ್ನಗಳ ಪಾಲು ಶೇ.14ರಷ್ಟಿದೆ. ಸೆಲ್‌ಫೋನ್‌, ಟೆಲಿಕಾಂ, ವಿದ್ಯುತ್‌, ಆಟಿಕೆ ಸಾಮಾನು, ಔಷಧ ಕಚ್ಚಾವಸ್ತುಗಳು ಇದರಲ್ಲಿ ಪ್ರಮುಖವಾಗಿವೆ.

ಯೋಧರ ಕೆಚ್ಚೆದೆಯಿಂದಾಗಿ ಅತಿಕ್ರಮಣ ವಿಫಲ: ಪಿಎಂಒ ಸ್ಪಷ್ಟನೆ!

ಅಗ್ಗದ ಚೀನಾ ವಸ್ತುಗಳು

ಕೈಗಡಿಯಾರ, ಗೋಡೆ ಗಡಿಯಾರ, ಆಟಿಕೆ ಸಾಮಗ್ರಿ, ಹೇರ್‌ ಕ್ರೀಂ, ಗ್ಲಾಸ್‌ ಟ್ಯೂಬ್‌ ಹಾಗೂ ರಾಡ್‌, ಫೇಸ್‌ ಪೌಡರ್‌, ಮುದ್ರಣ ಇಂಕ್‌, ಸೌಂದರ್ಯ ವರ್ಧಕ, ವಾರ್ನಿಷ್‌, ತಂಬಾಕು ಉತ್ಪನ್ನ, ಔಷಧಕ್ಕೆ ಸಂಬಂಧಿಸಿದ ಕಚ್ಚಾವಸ್ತುಗಳು.