ನವದೆಹಲಿ(ಮಾ.21): ದೇಶದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎಸ್‌.ಎ.ಬೋಬ್ಡೆ ಅವರ ನಿವೃತ್ತಿಗೆ ಇನ್ನೊಂದೇ ತಿಂಗಳು ಬಾಕಿಯಿರುವುದರಿಂದ ಉತ್ತರಾಧಿಕಾರಿಯ ಹೆಸರು ಶಿಫಾರಸು ಮಾಡಬೇಕು ಎಂದು ಮನವಿ ಮಾಡಿ ಕೇಂದ್ರ ಸರ್ಕಾರ ಅವರಿಗೆ ಪತ್ರ ಬರೆದಿದೆ. ಕಾನೂನು ಸಚಿವ ರವಿಶಂಕರ ಪ್ರಸಾದ್‌ ಈ ಕುರಿತು ಬೋಬ್ಡೆ ಅವರಿಗೆ ಶುಕ್ರವಾರ ಪತ್ರ ಬರೆದಿದ್ದಾರೆಂದು ಮೂಲಗಳು ತಿಳಿಸಿವೆ.

ನ್ಯಾ| ಬೋಬ್ಡೆ ಏ.23ರಂದು ನಿವೃತ್ತಿಯಾಗುತ್ತಾರೆ. ಅವರ ನಂತರ ಸುಪ್ರೀಂಕೋರ್ಟ್‌ನ ಅತ್ಯಂತ ಹಿರಿಯ ನ್ಯಾಯಮೂರ್ತಿ ಎನ್‌.ವಿ.ರಮಣ ಸಿಜೆಐ ಆಗುವುದು ಬಹುತೇಕ ನಿರ್ಧಾರವಾಗಿದೆ. ನ್ಯಾ| ಎನ್‌.ವಿ.ರಮಣ ಅವರು ಸಿಜೆಐ ಆದರೆ 2022ರ ಆ.26ರವರೆಗೆ ಕಾರ್ಯನಿರ್ವಹಿಸಲಿದ್ದಾರೆ.

ನಿಯಮಗಳ ಪ್ರಕಾರ ಭಾರತದ ಮುಖ್ಯ ನ್ಯಾಯಮೂರ್ತಿಗಳನ್ನು ನೇಮಕ ಮಾಡುವ ಮುನ್ನ ಕಾನೂನು ಸಚಿವರು ನಿವೃತ್ತಿ ಹೊಂದುತ್ತಿರುವ ಮುಖ್ಯ ನ್ಯಾಯಮೂರ್ತಿಗಳಿಂದ ಸೂಕ್ತ ಸಮಯದಲ್ಲಿ ಭವಿಷ್ಯದ ಸಿಜೆಐ ನೇಮಕದ ಕುರಿತು ಶಿಫಾರಸು ಪಡೆಯಬೇಕು. ಸಿಜೆಐ ಶಿಫಾರಸು ಮಾಡಿದ ಮೇಲೆ ಕಾನೂನು ಸಚಿವರು ಅದನ್ನು ಪ್ರಧಾನಿಗೆ ಸಲ್ಲಿಸಬೇಕು. ಪ್ರಧಾನಿಯವರು ರಾಷ್ಟ್ರಪತಿಗಳಿಗೆ ಸಲಹೆ ನೀಡಬೇಕು. ಸುಪ್ರೀಂಕೋರ್ಟ್‌ನ ಅತ್ಯಂತ ಹಿರಿಯ ನ್ಯಾಯಮೂರ್ತಿಗಳ ಕ್ಷಮತೆಯ ಬಗ್ಗೆ ಪ್ರಶ್ನೆ ಬಂದರೆ ಇನ್ನಿತರ ಜಡ್ಜ್‌ಗಳ ಜೊತೆಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಬೇಕು ಎಂದು ಕಾನೂನಿನಲ್ಲಿದೆ. ಅದರಂತೆ ರವಿಶಂಕರ್‌ ಪ್ರಸಾದ್‌ ಪತ್ರ ಬರೆದಿದ್ದಾರೆ ಎಂದು ಹೇಳಲಾಗಿದೆ.