ಹೈದರಾಬಾದ್‌[ಮಾ.11]: ಮಧುಮೇಹ ಕಾಯಿಲೆ ಪೀಡಿತರಿಗಾಗಿ ತೆಲಂಗಾಣ ಕೃಷಿ ವಿದ್ಯಾಲಯ ಅಭಿವೃದ್ಧಿಪಡಿಸಿದ್ದ ಗೋಲ್ಡನ್‌ ರೈಸ್‌ ಕೇವಲ ಮಧುಮೇಹಿಗಳಿಗೆ ಮಾತ್ರವಲ್ಲ, ಹೃದಯ ಹಾಗೂ ರಕ್ತನಾಳಗಳಿಗೆ ಸಂಬಂಧಿಸಿದ ಕಾಯಿಲೆಗಳಿಗೂ ರಾಮಭಾಣ ಎಂದು ಹೊಸ ಸಂಶೋಧನೆಯಿಂದ ಕಂಡುಬಂದಿದೆ.

ಈ ನೂತನ ಭತ್ತದ ತಳಿಯನ್ನು ಸ್ವತಃ ತಾವೇ ಅಭಿವೃದ್ಧಿಪಡಿಸಿರುವ ತೆಲಂಗಾಣ ಕೃಷಿ ವಿವಿ ಪ್ರಾಧ್ಯಾಪಕ ಜಯಶಂಕರ್‌ ಅದನ್ನು ತಮ್ಮ ಗದ್ದೆಯಲ್ಲಿ ಉಳಿಮೆ ಮಾಡಿದ್ದಾರೆ.

ಸಾಮಾನ್ಯ ಅಕ್ಕಿಯಲ್ಲಿ ಗ್ಲೂಕೋಸ್‌ ಪ್ರಮಾಣ ಶೇ.55ರಿಂದ 62ರಷ್ಟುಇರುತ್ತದೆ. ಆದರೆ, ‘ತೆಲಂಗಾಣ ಸೋನಾ’ ಅಥವಾ ‘ಗೋಲ್ಡನ್‌ ರೈಸ್‌’ ಎಂದು ಹೆಸರಿಸಲಾಗಿರುವ ನೂತನ ತಳಿಯ ಅಕ್ಕಿಯಲ್ಲಿ ಕೇವಲ 51.6ರಷ್ಟುಪ್ರಮಾಣದ ಗ್ಲೂಕೋಸ್‌ ಅಂಶವಿದೆ. ಅಲ್ಲದೆ, ಈ ಅಕ್ಕಿಯಲ್ಲಿನ ಕಾರ್ಬೊಹೈಡ್ರೇಟ್‌ ಪ್ರಮಾಣವು ಜೋಳ, ರಾಗಿ, ನವಣೆ, ಸಜ್ಜೆ ಸೇರಿದಂತೆ ಇನ್ನಿತರ ದಾನ್ಯಗಳಿಗಿಂತಲೂ ಕಡಿಮೆ ಪ್ರಮಾಣದಲ್ಲಿದೆ ಎಂದು ಸಿಕಂದರಾಬಾದ್‌ನಲ್ಲಿರುವ ರಾಷ್ಟ್ರೀಯ ಪೌಷ್ಠಿಕಾಂಶ ಸಂಸ್ಥೆ(ಎನ್‌ಐಎನ್‌) ಹೇಳಿದೆ. ಇದರಿಂದಾಗಿ ಈ ಅಕ್ಕಿ 2ನೇ ಮಾದರಿಯ ಮಧುಮೇಹ ಕಾಯಿಲೆಯನ್ನು ಗುಣಮುಖಪಡಿಸುವ ಸಾಮರ್ಥ್ಯ ಹೊಂದಿದೆ ಎಂದು ಸಂಶೋಧಕರು ಹೇಳಿದ್ದಾರೆ.