ಹಾವೇರಿ[ಫೆ.04]: ಹಾನಗಲ್ಲ ತಾಲೂಕಿನ ವರ್ದಿ ಗ್ರಾಮದಲ್ಲಿ ನೆರೆಯಿಂದ ಕುಸಿದಿದ್ದ ಮನೆಯೊಂದನ್ನು ತೆರವುಗೊಳಿಸುವ ಸಂದರ್ಭದಲ್ಲಿ 169 ಬೆಳ್ಳಿ ನಾಣ್ಯ, 2 ಚಿನ್ನದ ನಾಣ್ಯಗಳು ಪತ್ತೆಯಾಗಿವೆ.

ಗ್ರಾಮದ ಲಕ್ಷ್ಮವ್ವ ಫಕೀರಪ್ಪ ಕುರುಬರ ಎಂಬವರ ಮನೆಯಲ್ಲಿ ಹಳೆ ಕಾಲದ ಈ ನಾಣ್ಯಗಳು ಪತ್ತೆಯಾಗಿವೆ. ನೆರೆಯಿಂದ ಇವರ ಮನೆ ಕುಸಿದಿತ್ತು. ಹೊಸ ಮನೆ ಕಟ್ಟಿಸಿಕೊಳ್ಳಲು ಸರ್ಕಾರದಿಂದ ಇವರಿಗೆ 5 ಲಕ್ಷ ಪರಿಹಾರ ಮಂಜೂರಾಗಿದ್ದು, ಹೊಸ ಮನೆ ಕಟ್ಟಲು ಬಿದ್ದ ಮನೆಯ ಮಣ್ಣನ್ನು ತೆರವುಗೊಳಿಸುವ ಕಾರ್ಯ ನಡೆದಿತ್ತು.

ಮಂಗಳವಾರ ಕಾರ್ಮಿಕರು ಅಗೆಯುತ್ತಿದ್ದಾಗ ನಾಣ್ಯಗಳು ಸಿಕ್ಕಿವೆ. ಅಕ್ಕಪಕ್ಕದವರೆಲ್ಲ ಸೇರಿ ಪರಿಶೀಲಿಸಿ ಪೊಲೀಸರಿಗೆ ಮಾಹಿತಿ ತಲುಪಿಸಿದರು. ಹಾನಗಲ್ಲ ಠಾಣೆ ಪೊಲೀಸರಿಗೆ ಸಿಕ್ಕ ನಾಣ್ಯಗಳನ್ನು ನೀಡಲಾಗಿದೆ.