Asianet Suvarna News Asianet Suvarna News

ದೇವಸ್ಥಾನದ ಭೂಮಿಗೆ ಇನ್ನು ದೇವರೇ ಮಾಲಿಕ

  •   ಅರ್ಚಕರನ್ನು ದೇವಸ್ಥಾನದ ಭೂಮಿಯ ಮಾಲಿಕನೆಂದು ಪರಿಗಣಿಸಲು ಸಾಧ್ಯವಿಲ್ಲ 
  • ಮಹತ್ವದ ಆದೇಶ ನೀಡಿರುವ ಸುಪ್ರೀಂಕೋರ್ಟ್‌, ದೇವರೇ ಆಯಾ ದೇವಸ್ಥಾನದ ಭೂಮಿಗೆ ಮಾಲಿಕನಾಗಿರುತ್ತಾನೆ ಎಂದು ಸ್ಪಷ್ಟವಾಗಿ ಹೇಳಿದೆ
God is the owner of temple property supreme court snr
Author
Bengaluru, First Published Sep 8, 2021, 10:01 AM IST

 ನವದೆಹಲಿ (ಸೆ.08):  ಅರ್ಚಕರನ್ನು ದೇವಸ್ಥಾನದ ಭೂಮಿಯ ಮಾಲಿಕನೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಮಹತ್ವದ ಆದೇಶ ನೀಡಿರುವ ಸುಪ್ರೀಂಕೋರ್ಟ್‌, ದೇವರೇ ಆಯಾ ದೇವಸ್ಥಾನದ ಭೂಮಿಗೆ ಮಾಲಿಕನಾಗಿರುತ್ತಾನೆ ಎಂದು ಸ್ಪಷ್ಟವಾಗಿ ಹೇಳಿದೆ. ಅರ್ಚಕರು ದೇವಸ್ಥಾನದ ಭೂಮಿಯನ್ನು ನಿರ್ವಹಣೆ ಮಾಡುವುದಕ್ಕಾಗಿ ಮಾತ್ರ ತಮ್ಮ ಸುಪರ್ದಿಯಲ್ಲಿ ಇರಿಸಿಕೊಳ್ಳಬಹುದು ಎಂದೂ ಅದು ತಿಳಿಸಿದೆ.

ಮಧ್ಯಪ್ರದೇಶದ ಪ್ರಕರಣವೊಂದರಲ್ಲಿ ಸೋಮವಾರ ಈ ಆದೇಶ ನೀಡಿರುವ ಸುಪ್ರೀಂಕೋರ್ಟ್‌ನ ನ್ಯಾ. ಹೇಮಂತ್‌ ಗುಪ್ತಾ ಮತ್ತು ಎ.ಎಸ್‌.ಬೋಪಣ್ಣ ಅವರ ಪೀಠ, ‘ದೇವಸ್ಥಾನದ ಭೂಮಿಗೆ ಸಂಬಂಧಿಸಿದಂತೆ ಕಂದಾಯ ದಾಖಲೆಗಳ ಮಾಲಿಕತ್ವದ ಕಾಲಂನಲ್ಲಿ ದೇವರ ಹೆಸರನ್ನೇ ಬರೆಯಬೇಕು.

ಕೋವಿಡ್‌ ನಂತರ ಶಿಕ್ಷಕರ ವೃತ್ತಿ, ಬದುಕು ಹೇಗೆ ಬದಲಾಗಿದೆ? ಇವರು ಯಾವ ಯೋಧರಿಗೂ ಕಮ್ಮಿಯಿಲ್ಲ!

ಅರ್ಚಕರ ಹೆಸರನ್ನಾಗಲೀ, ಜಿಲ್ಲಾಧಿಕಾರಿಯ ಹೆಸರನ್ನಾಗಲೀ ಅಥವಾ ಯಾರು ಆ ಭೂಮಿಯನ್ನು ನೋಡಿಕೊಳ್ಳುತ್ತಿದ್ದಾರೋ ಅವರ ಹೆಸರನ್ನಾಗಲೀ ಬರೆಯಬಾರದು. ಏಕೆಂದರೆ ಆ ಜಾಗದ ಕಾನೂನಾತ್ಮಕ ಮಾಲಿಕ ದೇವರೇ ಆಗಿರುತ್ತಾನೆ. ಭೂಮಿಯ ನಿರ್ವಹಣೆಯ ಜವಾಬ್ದಾರ ಕೂಡ ದೇವರೇ ಆಗಿದ್ದು, ಆತನ ಪರವಾಗಿ ಅದನ್ನು ಅರ್ಚಕರು, ಮ್ಯಾನೇಜರ್‌ಗಳು ಅಥವಾ ಇತರ ಸೇವಾಕರ್ತರು ನೋಡಿಕೊಳ್ಳುತ್ತಿರುತ್ತಾರೆ. ಹೀಗಾಗಿ ಮಾಲಿಕತ್ವದ ಕಾಲಂನಲ್ಲಿ ಅರ್ಚಕರು, ಮ್ಯಾನೇಜರ್‌ ಅಥವಾ ಸೇವಾಕರ್ತರ ಹೆಸರು ಬರೆಯುವ ಅಗತ್ಯವಿಲ್ಲ’ ಎಂದು ತಿಳಿಸಿದೆ.

ಅರ್ಚಕರು ‘ಭೂಮಿಸ್ವಾಮಿ’ ಅಲ್ಲ:

ದೇವಸ್ಥಾನದ ಭೂಮಿಗೆ ಅರ್ಚಕರು ಅಧಿಕಾರಿ ಅಲ್ಲ. ಮುಜರಾಯಿ ಇಲಾಖೆಯ ಪರವಾಗಿ ಅವರು ನಿರ್ವಹಣೆಗಾಗಿ ಮಾತ್ರ ಆ ಭೂಮಿಯನ್ನು ಹೊಂದಿರುತ್ತಾರೆ. ದೇವರ ಹೆಸರಿನಲ್ಲಿ ಭೂಮಿಯ ನಿರ್ವಹಣೆ ಮಾಡುವುದು ಮಾತ್ರ ಅರ್ಚಕರ ಕರ್ತವ್ಯ. ಅರ್ಚಕರು ದೇವಸ್ಥಾನದ ಪೂಜೆಯ ಕರ್ತವ್ಯವನ್ನು ಮುಂದುವರೆಸಿಕೊಂಡು ಹೋಗುವಲ್ಲಿ ವಿಫಲರಾದರೆ ಅಥವಾ ಭೂಮಿಯ ನಿರ್ವಹಣೆಯಲ್ಲಿ ವಿಫಲರಾದರೆ ಅವರಿಂದ ಭೂಮಿಯನ್ನು ಹಿಂಪಡೆಯಬಹುದು. ಅರ್ಚಕರನ್ನು ದೇವಸ್ಥಾನದ ಭೂಮಿಗೆ ‘ಭೂಮಿಸ್ವಾಮಿ’ (ಮಧ್ಯಪ್ರದೇಶದಲ್ಲಿ ಬಳಕೆಯಲ್ಲಿರುವ ಪದ) ಎಂದು ಪರಿಗಣಿಸಲಾಗದು. ಕಂದಾಯ ದಾಖಲೆಗಳಲ್ಲಿ ಅರ್ಚಕರ ಹೆಸರು ಬರೆಯಬೇಕು ಎಂದು ಯಾವ ಕಾಯ್ದೆಯೂ ಹೇಳುವುದಿಲ್ಲ ಎಂದು ನ್ಯಾಯಪೀಠ ಹೇಳಿದೆ.

ದೇವಸ್ಥಾನದ ಭೂಮಿಗೆ ಸಂಬಂಧಿಸಿದ ಕಂದಾಯ ದಾಖಲೆಯ ಮಾಲಿಕತ್ವದ ಕಾಲಂನಲ್ಲಿರುವ ಅರ್ಚಕರ ಹೆಸರನ್ನು ತೆಗೆದುಹಾಕಬೇಕು ಎಂದು ಮಧ್ಯಪ್ರದೇಶ ಸರ್ಕಾರ ಎರಡು ಸುತ್ತೋಲೆ ಹೊರಡಿಸಿತ್ತು. ದೇವಸ್ಥಾನದ ಭೂಮಿಯನ್ನು ಅರ್ಚಕರು ಮಾರಾಟ ಮಾಡುವುದನ್ನು ತಪ್ಪಿಸಲು ಸರ್ಕಾರ ಈ ಕ್ರಮ ಕೈಗೊಂಡಿತ್ತು. ಆದರೆ, ಸರ್ಕಾರದ ಎರಡೂ ಸುತ್ತೋಲೆಗಳನ್ನು ಹೈಕೋರ್ಟ್‌ ರದ್ದುಪಡಿಸಿತ್ತು. ನಂತರ ಮಧ್ಯಪ್ರದೇಶ ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಅದರ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ ಈ ಆದೇಶ ಹೊರಡಿಸಿದೆ.

Follow Us:
Download App:
  • android
  • ios