ಮಹದಾಯಿ ವಿಚಾರವಾಗಿ ತಮ್ಮ ವಿರುದ್ಧ ಕರ್ನಾಟಕ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೀಡಿರುವ ಹೇಳಿಕೆಗೆ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪಣಜಿ (ಜು.26): ಮಹದಾಯಿ ವಿಚಾರವಾಗಿ ತಮ್ಮ ವಿರುದ್ಧ ಕರ್ನಾಟಕ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೀಡಿರುವ ಹೇಳಿಕೆಗೆ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದು ಕಾಂಗ್ರೆಸ್ ಸಂಸ್ಕೃತಿಯನ್ನು ತೋರಿಸುತ್ತದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಮಹದಾಯಿ ಯೋಜನೆ ಜಾರಿಗೆ ಅವಕಾಶ ನೀಡುವುದಿಲ್ಲ ಎಂದು ಕೇಂದ್ರ ಸಚಿವರು ತಿಳಿಸಿದ್ದಾಗಿ ಸಿಎಂ ಪ್ರಮೋದ್ ಸಾವಂತ್ ಅವರು ಗೋವಾ ವಿಧಾನಸಭೆಯಲ್ಲಿ ನೀಡಿದ್ದ ಹೇಳಿಕೆಗೆ ಡಿ.ಕೆ.ಶಿವಕುಮಾರ್ ಗುರುವಾರ ತೀವ್ರ ಕಿಡಿಕಾರಿದ್ದರು.
‘ಗೋವಾ ಸಿಎಂಗೆ ಮಹದಾಯಿ ಬಗ್ಗೆ ಮಾಹಿತಿ ಇದ್ದಂತಿಲ್ಲ. ಅವರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಅವರಿಗೆ ಒಕ್ಕೂಟ ವ್ಯವಸ್ಥೆಯ ಅರಿವಿಲ್ಲ. ನಾವು ಈಗಾಗಲೇ ಕಾಮಗಾರಿ ಕುರಿತು ಟೆಂಡರ್ ಕರೆದಿದ್ದೇವೆ. ಈ ಯೋಜನೆ ಜಾರಿ ಮಾಡಿಯೇ ಸಿದ್ಧ. ಬೇಕಿದ್ದರೆ ಗೋವಾ ಸಿಎಂ ಅದನ್ನು ತಡೆಯಲಿ’ ಎಂದು ಸವಾಲು ಹಾಕಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಸಾವಂತ್ ಅವರು, ‘ಶಿವಕುಮಾರ್ ಹೇಳಿಕೆಯು ಕಾಂಗ್ರೆಸ್ ಸಂಸ್ಕೃತಿಯನ್ನು ತೋರಿಸುತ್ತದೆ. ಯಾರಾದರೂ ತೀವ್ರ ಹತಾಶೆಗೊಳಗಾದಾಗ ಇಂಥ ಪದ ಬಳಸುತ್ತಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ನಾಯಕರು ಕೆಳಮಟ್ಟಕ್ಕಿಳಿಯುವ ವಿಚಾರದಲ್ಲಿ ಪರಸ್ಪರ ಸ್ಪರ್ಧೆಗಿಳಿಸಿದ್ದಾರೆ’ ಎಂದು ಕಿಡಿಕಾರಿದರು.
‘ಮಹದಾಯಿ ನದಿ ತಿರುವು ವಿರೋಧಿಸಿ ನಾವು ಸುಪ್ರೀಂ ಕೋರ್ಟ್‌ಗೆ ಅರ್ಜಿ ಹಾಕಿದ್ದೇವೆ ಮತ್ತು ಕೇಂದ್ರದ ಮುಂದೆ ಒತ್ತಡ ಹಾಕುತ್ತೇವೆ. ನಾವು ಮಹದಾಯಿ ವಿಚಾರದಲ್ಲಿ ಗಂಭೀರವಾಗಿದ್ದೇವೆ. ಮಹದಾಯಿ ರಕ್ಷಣೆಗೆ ನಾವು ನಮ್ಮ ಪ್ರಯತ್ನ ಮುಂದುವರಿಸುತ್ತೇವೆ. ಈ ಸಂಬಂಧ ಕೇಂದ್ರ ಸರ್ಕಾರದ ಜತೆ ನಿರಂತರ ಸಂಪರ್ಕದಲ್ಲಿದ್ದೇವೆ’ ಎಂದು ಇದೇ ವೇಳೆ ತಿಳಿಸಿದರು.
ಪ್ರಧಾನಿ ಮಹದಾಯಿಗೆ ಅನುಮತಿ ನೀಡುತ್ತಿಲ್ಲ: ಗೋವಾ ರಾಜ್ಯಕ್ಕೆ ಹೆದರಿಕೊಂಡು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಹದಾಯಿಗೆ ಅನುಮತಿ ಕೊಡಿಸುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದರು. ಮಹದಾಯಿ ಯೋಜನೆಗೆ ಪರಿಸರ ಇಲಾಖೆ ಅನುಮತಿ ಯಾಕೆ ಕೊಡಿಸುತ್ತಿಲ್ಲ? ಗೋವಾಕ್ಕೆ ಹೆದರಿಕೊಂಡು ಮೋದಿ ಅವರು ಅನುಮತಿ ಕೊಡಿಸುತ್ತಿಲ್ಲ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆ ಬಗ್ಗೆ ಪ್ರಧಾನಿಗಳ ಮುಂದೆ ಮಾತನಾಡಿಲ್ಲ. ನಾವು ಅನೇಕ ಸಲ ಕೇಂದ್ರಕ್ಕೆ ಹೋಗಿ ಮನವಿ ಮಾಡಿದ್ದೇವೆ.
ಆದರೂ ಪ್ರಯೋಜನವಾಗಿಲ್ಲ ಎಂದು ವಿಷಾಧಿಸಿದರು. ಕೆಪಿಎಸ್‌ಸಿಯಲ್ಲಿ ಅವ್ಯವಸ್ಥೆ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆಗೆ ಸಿಡಿಮಿಡಿಗೊಂಡ ಸಿಎಂ, ಪ್ರಹ್ಲಾದ್ ಜೋಶಿ ಮೊದಲು ಮಹದಾಯಿ ಬಗ್ಗೆ ಮಾತಾಡಲಿ ಎಂದು ಕಿಡಿಕಾರಿದರು. ರಾಜ್ಯ ಸರ್ಕಾರಕ್ಕೆ ಎರಡು ವರ್ಷವಾಗುತ್ತಿರುವ ಹಿನ್ನೆಲೆಯಲ್ಲಿ ಮೇ 20ಕ್ಕೆ ವಿಜಯನಗರದಲ್ಲಿ ಬೃಹತ್ ಸಮಾವೇಶ ಹಮ್ಮಿಕೊಂಡಿದ್ದೇವೆ. ಸರ್ಕಾರದ ಸಾಧನೆಗಳನ್ನು ಜನರ ಮುಂದಿಡುತ್ತೇವೆ ಎಂದರು.
