ಬೆಂಗಳೂರು[ಜ.10]:  ನಾಗಪುರದಿಂದ ಬೆಂಗಳೂರಿಗೆ ಬರುತ್ತಿದ್ದ ವಿಮಾನವನ್ನು ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ವೇಯಲ್ಲಿ ಇಳಿಸದೇ ಪಕ್ಕದಲ್ಲಿದ್ದ ಹುಲ್ಲುಹಾಸಿನ ಮೇಲೆ ಇಳಿಸಿದ ‘ಗೋ ಏರ್‌’ ಕಂಪನಿಯ ಇಬ್ಬರು ಪೈಲಟ್‌ಗಳನ್ನು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಅಮಾನತುಗೊಳಿಸಿದೆ.

ಕಳೆದ ವರ್ಷ ನ.11ರಂದು 180 ಪ್ರಯಾಣಿಕರೊಂದಿಗೆ ಬರುತ್ತಿದ್ದ ‘ಗೋ ಏರ್‌’ ವಿಮಾನವವನ್ನು ಹುಲ್ಲು ಹಾಸಿನ ಮೇಲೆ ಇಳಿಸಲಾಗಿತ್ತು. ಬೆಂಗಳೂರಿನಲ್ಲಿ ಮಂಜು ಮುಸುಕಿದ ವಾತಾವರಣವೇ ಈ ಅವಾಂತರಕ್ಕೆ ಕಾರಣ ಎನ್ನಲಾಗಿತ್ತು. ಆದರೆ, ಹುಲ್ಲುಹಾಸಿನ ಮೇಲೆ ಕೆಲ ದೂರ ವಿಮಾನ ಸಾಗಿದ ಬಳಿಕ ಪೈಲಟ್‌ಗಳಿಗೆ ತಪ್ಪಿನ ಅರಿವಾಗಿತ್ತು. ಪೈಲಟ್‌ಗಳು ಕೂಡಲೇ ಮತ್ತೆ ವಿಮಾನವನ್ನು ಮೇಲೇರುವಂತೆ ಮಾಡಿ ಹೈದರಾಬಾದ್‌ನತ್ತ ತಿರುಗಿಸಿ ಅಲ್ಲಿನ ಏರ್‌ಪೋರ್ಟ್‌ನಲ್ಲಿ ಇಳಿಸಿದ್ದರು. ಎಲ್ಲ 180 ಪ್ರಯಾಣಿಕರೂ ಸುರಕ್ಷಿತವಾಗಿದ್ದರು.

ಕೆಂಪೇಗೌಡ ಏರ್‌ಪೋರ್ಟ್ ರಾಡಾರ್‌ನಿಂದ ವಾಯುಪಡೆ ವಿಮಾನಗಳ ಮೇಲೆ ಕಣ್ಗಾವಲು!...

ಆದರೆ ‘ಇದೊಂದು ಗಂಭೀರ ಘಟನೆ’ ಎಂದು ಪರಿಗಣಿಸಿರುವ ಡಿಜಿಸಿಎ, ಕ್ಯಾಪ್ಟನ್‌ ಹಾಗೂ ಸಹ-ಪೈಲಟ್‌ನನ್ನು ಕ್ರಮವಾಗಿ, ಘಟನೆ ನಡೆದ ನ.11ರಿಂದ ಅನ್ವಯವಾಗುವಂತೆ 6 ತಿಂಗಳು ಹಾಗೂ 3 ತಿಂಗಳ ಅವಧಿಗೆ ಅಮಾನತುಗೊಳಿಸಿದೆ. ಗೋ ಏರ್‌ ಕೂಡ ಈ ಹಿಂದೆ ಇವರನ್ನು ಅಮಾನತು ಮಾಡಿತ್ತು.