ರೈಲು-ಫ್ಲಾಟ್‌ಫಾರ್ಮ್ ನಡುವೆ ಸಿಲುಕಿಕೊಂಡ ಯುವತಿ, ಫ್ಲಾಟ್‌ಫಾರ್ಮ್ ಒಡೆದು ರಕ್ಷಣೆ ಮಾಡಿದ ಸಿಬ್ಬಂದಿ!
ಗುಂಟೂರು ಎಕ್ಸ್‌ಪ್ರೆಸ್ ಹತ್ತುವ ವೇಳೆ ಯುವತ್ತಿಯೊಬ್ಬಳು ಆಯತಪ್ಪಿ ರೈಲು ಹಾಗೂ ಫ್ಲಾಟ್‌ಫಾರ್ಮ್ ನಡುವಿನ ಜಾಗದಲ್ಲಿ ಸಿಲುಕಿಹಾಕಿಕೊಂಡಿದ್ದಳು. ಯಾವ ರೀತಿಯಲ್ಲಿಯೂ ಆಕೆಯನ್ನೂ ಹೊರಗೆಳೆಯುವ ಪ್ರಯತ್ನ ಫಲ ಕೊಡದೇ ಇದ್ದಾಗ, ಫ್ಲಾಟ್‌ಫಾರ್ಮ್‌ಅನ್ನು ಒಡೆದು ಆಕೆಯ ರಕ್ಷಣೆ ಮಾಡಲಾಗಿದೆ.
ನವದೆಹಲಿ (ಡಿ.7): ಆಂಧ್ರಪ್ರದೇಶದ ವಿಶಾಖಪಟ್ಟಣದ ದುವ್ವಾಡ ರೈಲು ನಿಲ್ದಾಣದಲ್ಲಿ ಕಾಲೇಜು ವಿದ್ಯಾರ್ಥಿನಿಯೊಬ್ಬಳು ರೈಲು ಹಾಗೂ ಫ್ಲಾಟ್‌ಫಾರ್ಮ್‌ನ ನಡುವೆ ಆಯತಪ್ಪಿ ಬಿದ್ದಿದ್ದಳು. ಬುಧವಾರ ಈ ಘಟನೆ ನಡೆದಿದೆ. ಗುಂಟೂರು-ರಾಯಗಢ ಎಕ್ಸ್‌ಪ್ರೆಸ್‌ನಿಂದ ಇಳಿಯುವಾಗ 23 ವರ್ಷದ ಯುವತಿ ಕಾಲು ಜಾರಿ ಫ್ಲಾಟ್‌ಫಾರ್ಮ್‌ನ ಅಂಚಿನಲ್ಲಿ ಬಿದ್ದಿದ್ದಾಳೆ. ಆಕೆ ರೈಲು ಹಾಗೂ ಫ್ಲಾಟ್‌ಫಾರ್ಮ್‌ನ ನಡುವೆ ಬಿದ್ದಿದ್ದನ್ನು ನೋಡಿದ ಜನರು ತಕ್ಷಣವೇ ರೈಲನ್ನು ನಿಲ್ಲಿಸಿದ್ದಾರೆ. ಆದರೆ, ಆಕೆಯನ್ನು ಮೇಲೆತ್ತುವ ಪ್ರಯತ್ನ ಫಲ ನೀಡಲಿಲ್ಲ. ಕೊನೆಗೆ ಸಾಕಷ್ಟು ಪ್ರಯತ್ನದ ಬಳಿಕ ಆಕೆಯನ್ನು ಹೊರಗೆಳೆದು ರಕ್ಷಣೆ ಮಾಡಲಾಗಿದೆ. ಇದಕ್ಕಾಗಿ ಫ್ಲಾಟ್‌ಫಾರ್ಮ್‌ಅನ್ನು ಕೂಡ ಒಡೆಯಲಾಗಿದೆ. ರೈಲು ಮತ್ತು ಪ್ಲಾಟ್‌ಫಾರ್ಮ್ ನಡುವೆ ಸಿಲುಕಕೊಂಡಿದ್ದ ಯುವತಿ ನೋವಿನಿಂದ ನರಳುತ್ತಿದ್ದಳು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ ಅವರ ಕಾಲು ಟ್ರ್ಯಾಕ್ ಮತ್ತು ಚಕ್ರದ ನಡುವೆ ಸಿಲುಕಿಕೊಂಡಿರುವುದು ಕಂಡು ಬಂದಿದೆ.
ಈ ಕಾರ್ಯಕ್ಕಾಗಿ ಜಿಆರ್‌ಪಿ, ಆರ್‌ಪಿಎಫ್ ಮತ್ತು ರೈಲ್ವೆ ಎಂಜಿನಿಯರ್‌ಗಳು ಸ್ಥಳಕ್ಕೆ ಆಗಮಿಸಿ ಗಾಯಗೊಂಡ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ರೈಲಿಗೆ ಸಿಕ್ಕಿ ಹಾಕಿಕೊಂಡಿದ್ದ ಬ್ಯಾಗನ್ನು ಹೊರತೆಗೆದು ಯುವತಿಗೆ ಕೊಂಚ ಸಮಾಧಾನ ನೀಡಿದರು. ಆ ಬಳಿಕ ಫ್ಲಾಟ್‌ಫಾರ್ಮ್‌ನ ಅಂಚನ್ನು ಒಡೆದು ಆಕೆಯನ್ನು ಹೊರತೆಗೆದಿದ್ದಾರೆ. ಈ ಘಟನೆಯಲ್ಲಿ ಯುವರಿಗೆ ಸ್ವಲ್ಪ ಗಾಯವಾಗಿದ್ದು, ಆಕೆಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರತಿ ದಿನ ಸಂಚಾರ ಮಾಡುತ್ತಿದ್ದ ಯುವತಿ: ವರದಿಗಳ ಪ್ರಕಾರ, 23 ವರ್ಷದ ಶಶಿಕಲಾ ಅಣ್ಣಾವರಂ ನಿವಾಸಿ. ಇಂಜಿನಿಯರಿಂಗ್ ವಿದ್ಯಾರ್ಥಿನಿಯಾಗಿರುವ ಆಕೆ ವಿಶಾಖಪಟ್ಟಣಂನಲ್ಲಿರುವ ತನ್ನ ಕಾಲೇಜಿಗೆ ಪ್ರತಿದಿನ ರೈಲಿನಲ್ಲಿ ಹೋಗುತ್ತಿದ್ದಳು. ಬುಧವಾರ ಕೂಡ ಅವಳು ಕಾಲೇಜಿಗೆ ಹೋಗಿದ್ದಳು, ಈ ವೇಳೆ ಘಟನೆ ಸಂಭವಿಸಿದೆ. ಸುಮಾರು ಒಂದು ಗಂಟೆ ಹೋರಾಟದ ಬಳಿಕ ಅವರನ್ನು ಹೊರ ತೆಗೆಯಲಾಯಿತು.
ವಂದೇ ಭಾರತ್ ರೈಲಿನ ಕಂಟಕ ನಿವಾರಿಸಲು 264 ಕೋಟಿ ರೂಪಾಯಿ ಖರ್ಚು!
ಹಾಗಂತ ಇಂಥ ಪ್ರಕರಣಗಳು ಮೊದಲೇನಲ್ಲ: ಇತ್ತೀಚೆಗೆ ಭೋಪಾಲ್‌ನ ರಾಣಿ ಕಮಲಾಪತಿ ನಿಲ್ದಾಣದಲ್ಲಿ ಇದೇ ರೀತಿಯ ಘಟನೆಯನ್ನು ತಪ್ಪಿಸಲಾಗಿತ್ತು. ಮಹಿಳೆಯೊಬ್ಬರು ಚಲಿಸುತ್ತಿರು ರೈಲಿನಿಂದ ಹೊರಬಿದ್ದಿದ್ದಲ್ಲದೆ, ರೈಲು ಮತ್ತು ಪ್ಲಾಟ್‌ಫಾರ್ಮ್ ನಡುವೆ ಸಿಲುಕಿಕೊಂಡಿದ್ದಳು. ಇದನ್ನು ಆರ್‌ಪಿಎಫ್ ಮತ್ತು ಜಿಆರ್‌ಪಿಎಫ್ ಯೋಧರು ಜನರ ಸಹಾಯದಿಂದ ರಕ್ಷಿಸಿದ್ದಾರೆ. ರೈಲಿನಿಂದ ಬಿದ್ದ ಮಹಿಳೆಯನ್ನು ಯೋಧರು ರಕ್ಷಿಸಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.
Pune Bangalore Expressway: ಊರಿಲ್ಲದ ಜಾಗದಲ್ಲಿ ಸಾಗುವ ಹೆದ್ದಾರಿ!
ಫತೇಪುರ್‌ನ ಖಾಗಾ ರೈಲು ನಿಲ್ದಾಣದಲ್ಲಿ, ಪ್ರಯಾಣಿಕರ ಜಾಣ್ಮೆಯಿಂದ ದೊಡ್ಡ ಅಪಘಾತವನ್ನು ತಪ್ಪಿಸಲಾಗಿತ್ತು. ಚಲಿಸುತ್ತಿದ್ದ ರೈಲು ಹತ್ತುವಾಗ ಕಾಲು ಜಾರಿ ರೈಲಿನಡಿಗೆ ಬಂದ ಯುವಕನನ್ನು ರೈಲು ಅಂದಾಜು 20 ಮೀಟರ್ ಎಳೆದೊಯ್ದು ಗಂಭೀರವಾಗಿ ಗಾಯಗೊಳಿಸಿತ್ತು. ಪ್ರಯಾಣಿಕರು ವ್ಯಕ್ತಿಯೊಬ್ಬ ಕೆಳಗೆ ಬೀಳುವುದನ್ನು ನೋಡಿ ಸರಪಳಿ ಎಳೆದು ಆತನ ಪ್ರಾಣವನ್ನು ಉಳಿಸಿದ್ದರು.