ಬೆಳಗ್ಗೆ ಬೆಳಗ್ಗೆಯೇ ಮತ್ತಿನಲ್ಲಿ ಮಾತಾಡ್ತಾರೆ: ಸಂಜಯ್ ರಾವತ್‌ಗೆ ದೇವೇಂದ್ರ ಫಡ್ನವೀಸ್ ತಿರುಗೇಟು
ನಮಗೆಲ್ಲಾ ಗೊತ್ತಿರುವಂತೆ ಕೆಲ ಕುಸ್ತಿಪಟುಗಳು ಮಾದಕ ವಸ್ತು ಸೇವನೆ ಪ್ರಕರಣದಲ್ಲಿ ನಿಷೇಧಕ್ಕೆ ಒಳಗಾಗಿದ್ದಾರೆ. ಜೊತೆಗೆ ಬೆಳಗ್ಗೆ 9ಕ್ಕೆ ಮತ್ತೇರಿಸಿಕೊಳ್ಳುವ ಕೆಲವರು ಕುಸ್ತಿ ಆಡಲು ಸಿದ್ದರಾಗುತ್ತಿದ್ದಾರೆ ಎಂದು ದೇವೇಂದ್ರ ಫಡ್ನವೀಸ್ ವ್ಯಂಗ್ಯವಾಡಿದರು.
ಮುಂಬೈ (ಏಪ್ರಿಲ್ 25, 2023): ಏಕನಾಥ ಶಿಂಧೆ ಸರ್ಕಾರ ಸದ್ಯದಲ್ಲಿಯೇ ಬಿದ್ದುಹೋಗುತ್ತದೆ. ಡೆತ್ ವಾರಂಟ್ ಹೊರಡಿಸಲಾಗಿದೆ ಎಂಬ ಶಿವಸೇನೆ ನಾಯಕ ಸಂಜಯ್ ರಾವತ್ ತಿರುಗೇಟು ನೀಡಿರುವ ಮಹಾರಾಷ್ಟ್ರದ ಡಿಸಿಎಂ ದೇವೇಂದ್ರ ಫಡ್ನವೀಸ್, ಬೆಳಗ್ಗೆ 9 ಗಂಟೆಗೆಲ್ಲಾ ಮತ್ತೇರಿಸಿಕೊಂಡು ಕುಸ್ತಿ ಅಖಾಡಕ್ಕೆ ಇಳಿದಿದ್ದಾರೆ ಎಂದಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಫಡ್ನವೀಸ್ ಸದ್ಯ ರಾಜ್ಯದಲ್ಲಿ ರಾಜಕೀಯ ಕುಸ್ತಿ ನಡೆಯುತ್ತಿದೆ. ನಮಗೆಲ್ಲಾ ಗೊತ್ತಿರುವಂತೆ ಕೆಲ ಕುಸ್ತಿಪಟುಗಳು ಮಾದಕ ವಸ್ತು ಸೇವನೆ ಪ್ರಕರಣದಲ್ಲಿ ನಿಷೇಧಕ್ಕೆ ಒಳಗಾಗಿದ್ದಾರೆ. ಜೊತೆಗೆ ಬೆಳಗ್ಗೆ 9ಕ್ಕೆ ಮತ್ತೇರಿಸಿಕೊಳ್ಳುವ ಕೆಲವರು ಕುಸ್ತಿ ಆಡಲು ಸಿದ್ದರಾಗುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
"ನಿಮ್ಮ ಆಶೀರ್ವಾದದಿಂದ (ಮುಖ್ಯಮಂತ್ರಿ) ಏಕನಾಥ್ ಶಿಂಧೆ ನೇತೃತ್ವದಲ್ಲಿ ನಾವು ಹೋರಾಟವನ್ನು ಗೆದ್ದಿದ್ದೇವೆ. ನಮ್ಮನ್ನು ಆಶೀರ್ವದಿಸಿರಿ ಇದರಿಂದ ನಾವು 2024 (ಲೋಕಸಭಾ ಚುನಾವಣೆಯಲ್ಲಿ) ಮತ್ತೆ ಗೆಲ್ಲುತ್ತೇವೆ" ಎಂದು ದೇವೇಂದ್ರ ಫಡ್ನವೀಸ್ ಹೇಳಿದರು.
ಇದನ್ನು ಓದಿ: ಅಯೋಧ್ಯೆಯಲ್ಲಿ ಸೇನೆ, ಬಿಜೆಪಿ ಶಕ್ತಿಪ್ರದರ್ಶನ; ದ್ರೋಹಿಗಳನ್ನು ರಾಮ ಆಶೀರ್ವದಿಸಲ್ಲ: ಸಂಜಯ್ ರಾವುತ್ ಕಿಡಿ
ರಾಜಕೀಯ ಎದುರಾಳಿಗಳ ವಿರುದ್ಧ ತೀಕ್ಷ್ಣವಾದ ಗೇಲಿಗಳಿಗೆ ಹೆಸರುವಾಸಿಯಾಗಿರುವ ಉದ್ಧವ್ ಠಾಕ್ರೆ ಅವರ ಆಪ್ತ ಸಹಾಯಕ ಸಂಜಯ್ ರಾವತ್ ನಿನ್ನೆ ಏಕನಾಥ್ ಶಿಂಧೆ ನೇತೃತ್ವದ ಮಹಾರಾಷ್ಟ್ರ ಸರ್ಕಾರದ "ಡೆತ್ ವಾರಂಟ್" ಹೊರಡಿಸಲಾಗಿದೆ ಮತ್ತು ಮುಂದಿನ 15-20 ದಿನಗಳಲ್ಲಿ ಅದು ಪತನವಾಗಲಿದೆ ಎಂದು ಹೇಳಿದ್ದರು. ಹಾಗೆ, ನಮ್ಮ ಪಕ್ಷವು ನ್ಯಾಯಾಲಯದ ಆದೇಶಕ್ಕಾಗಿ ಕಾಯುತ್ತಿದೆ ಮತ್ತು ನ್ಯಾಯ ಸಿಗುತ್ತದೆ ಎಂದು ನಿರೀಕ್ಷಿಸುತ್ತಿದೆ ಎಂದೂ ಸಂಜಯ್ ರಾವತ್ ಹೇಳಿದರು. ಬಂಡಾಯವೆದ್ದ 16 ಶಿವಸೇನೆಯ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿ ಉದ್ಧವ್ ಠಾಕ್ರೆ ಬಣ ಸಲ್ಲಿಸಿದ ಅರ್ಜಿಗಳ ವಿಚಾರವಾಗಿ ಸುಪ್ರೀಂ ಕೋರ್ಟ್‌ನ ಬಾಕಿ ಉಳಿದಿರುವ ತೀರ್ಪನ್ನು ಪ್ರಸ್ತಾಪಿಸಿದರು.
"ಈಗಿರುವ ಮುಖ್ಯಮಂತ್ರಿ ಮತ್ತು ಅವರ 40 ಶಾಸಕರ ಸರ್ಕಾರ 15-20 ದಿನಗಳಲ್ಲಿ ಪತನವಾಗಲಿದೆ. ಈ ಸರ್ಕಾರದ ಡೆತ್ ವಾರಂಟ್ ಹೊರಡಿಸಲಾಗಿದೆ. ಇದಕ್ಕೆ ಯಾರು ಸಹಿ ಹಾಕುತ್ತಾರೆ ಎಂಬುದು ಈಗ ನಿರ್ಧರಿಸಬೇಕಿದೆ" ಎಂದು ಸಂಜಯ್ ರಾವತ್ ಹೇಳಿದ್ದರು. ಈ ಹಿಂದೆ ಏಕನಾಥ್ ಶಿಂಧೆ ಸರ್ಕಾರ ಫೆಬ್ರವರಿಯಲ್ಲಿ ಪತನವಾಗಲಿದೆ ಎಂದು ಹೇಳಿದ್ದರು. ಇದಕ್ಕೆ ತಿರುಗೇಟು ನೀಡಿದ್ದ ಮಹಾರಾಷ್ಟ್ರ ಶಿಕ್ಷಣ ಸಚಿವ ದೀಪಕ್ ಕೇಸರ್ಕರ್ ಸಂಜಯ್ ರಾವತ್‌ರನ್ನು "ನಕಲಿ ಜ್ಯೋತಿಷಿ" ಎಂದು ಕರೆದಿದ್ದರು.
ಇದನ್ನೂ ಓದಿ: ಬಿಜೆಪಿ ಶಿವಸೇನೆ ಸರ್ಕಾರ 20 ದಿನದಲ್ಲಿ ಪತನ, ಮಹಾರಾಷ್ಟ್ರ ರಾಜಕೀಯ ಭವಿಷ್ಯ ನುಡಿದ ರಾವತ್!
ಈ ಮಧ್ಯೆ, ರಾಜಕೀಯ ಭವಿಷ್ಯದಲ್ಲಿ ಬದಲಾವಣೆಯ ಊಹಾಪೋಹಗಳು ಹೆಚ್ಚಾಗುತ್ತಿದ್ದು, ಕಾಂಗ್ರೆಸ್, ಶಿವಸೇನೆಯ ಠಾಕ್ರೆ ಬಣ ಮತ್ತು ಶರದ್ ಪವಾರ್ ನೇತೃತ್ವದ ಎನ್‌ಸಿಪಿಯನ್ನು ಒಳಗೊಂಡಿರುವ ಮಹಾ ವಿಕಾಸ್ ಅಘಾಡಿ (ಎಂವಿಎ) ನಲ್ಲಿ ಬಿರುಕು ಮೂಡುತ್ತಿದೆ. ತಾನು ಎಂವಿಎ ಜೊತೆಗಿದ್ದೇನೆ ಮತ್ತು ಒಟ್ಟಿಗೆ ಕೆಲಸ ಮಾಡಲು ಬಯಸುತ್ತೇನೆ ಎಂದು ಶರದ್ ಪವಾರ್ ಭಾನುವಾರ ಹೇಳಿದ್ರು. ಆದರೂ, ನನ್ನೊಬ್ಬನ ಆಶಯ ಮುಖ್ಯವಲ್ಲ. "ಹಲವಾರು ಪ್ರಕ್ರಿಯೆಗಳಿವೆ... ಸೀಟು ಹಂಚಿಕೆ ವಿಚಾರ, ಪಕ್ಷದ ಬೇಡಿಕೆಗಳು... ಈಗಲೇ ಏನನ್ನೂ ಹೇಳುವುದು ಹೇಗೆ?" ಎಂದು ವಿರೋಧ ಪಕ್ಷದ ಮೈತ್ರಿಯೊಂದಿಗೆ ತಮ್ಮ ಪಕ್ಷದ ಭವಿಷ್ಯದ ಬಗ್ಗೆ ಕೇಳಿದಾಗ ಅವರು ಈ ರೀತಿ ಉತ್ತರಿಸಿರುವುದು ವಿಪಕ್ಷ ಮೈತ್ರಿಕೂಟದಲ್ಲಿ ಗೊಂದಲ ಮೂಡಿಸಿದೆ.
ಇದನ್ನೂ ಓದಿ: ರಾಜಕೀಯ ಪಕ್ಷಗಳಿಗೆ ಶಾಕ್: ಮೀಸಲಾತಿ ಮಿತಿ ಶೇ. 50 ಮೀರಿಸಲು ಸುಪ್ರೀಂಕೋರ್ಟ್ ನಕಾರ