ಒಬ್ಬ ಗಾಂಧಿ ಎಪ್ಪತ್ತು ವರ್ಷಗಳ ಬಳಿಕವೂ ನನ್ನತಹ ಕೋಟ್ಯಂತರ ಜನರನ್ನು ಕಾಡುತ್ತಾರೆಂದರೆ ಅವರಲ್ಲೇನೋ ವಿಶೇಷತೆ ಇತ್ತೆಂದೇ ಅರ್ಥ. ಆದರೂ ಒಬ್ಬ ಗಾಂಧಿ ಸೂರ್ಯ ಮುಳುಗದ ಸಾಮ್ರಾಜ್ಯವನ್ನು ತನ್ನ ಚರಕ ಮತ್ತು ನೂಲು , ಅಹಿಂಸೆ ಎಂಬ ಮಂತ್ರ, ಸತ್ಯವೆಂಬ ಅಸ್ತ್ರದಿಂದ ನಡುಗಿಸಿದ್ದನೆಂದರೆ ಹೇಗೆ ನಂಬುವುದು?
ಸ್ವಸ್ತಿಕ್ ಕನ್ಯಾಡಿ
''ತಿಳಿ ನೀಲದಲ್ಲಿ ತಾ ಲೀನನಾಗಿ ಅವ ಹೋದ ದೂರ ದೂರ, ಬೆಳಗಿಹುದು ಇಲ್ಲಿ ಅವ ಬಿಟ್ಟ ಬೆಳಕು ಇನ್ನೊಮ್ಮೆ ಏಕೆ ಬಾರ?'' ಡಾ . ಕರ್ಕಿಯವರು ಗಾಂಧಿ ನಮ್ಮನ್ನಗಲಿದಾಗ ಬರೆದ ಸಾಲುಗಳು ಪದೇ ಪದೇ ಕಾಡುವಂಥದ್ದು. ಒಬ್ಬ ಗಾಂಧಿ ಎಪ್ಪತ್ತು ವರ್ಷಗಳ ಬಳಿಕವೂ ನನ್ನತಹ ಕೋಟ್ಯಂತರ ಜನರನ್ನು ಕಾಡುತ್ತಾರೆಂದರೆ ಅವರಲ್ಲೇನೋ ವಿಶೇಷತೆ ಇತ್ತೆಂದೇ ಅರ್ಥ. ಆದರೂ ಒಬ್ಬ ಗಾಂಧಿ ಸೂರ್ಯ ಮುಳುಗದ ಸಾಮ್ರಾಜ್ಯವನ್ನು ತನ್ನ ಚರಕ ಮತ್ತು ನೂಲು , ಅಹಿಂಸೆ ಎಂಬ ಮಂತ್ರ, ಸತ್ಯವೆಂಬ ಅಸ್ತ್ರದಿಂದ ನಡುಗಿಸಿದ್ದನೆಂದರೆ ಹೇಗೆ ನಂಬುವುದು? ಬೆಳಗಾದ್ರೆ ಮೊಬೈಲ್ ತೆಗೆದು ನೂರಾರು ಟ್ವೀಟ್ ಮಾಡಿ ಅದನ್ನೇ ಹೋರಾಟ ಎಂದುಕೊಳ್ಳುವ ಡಿಜಿಟಲ್ ಯುಗದಲ್ಲಿ ಇವೆಲ್ಲಾ ನಂಬಲಸಾಧ್ಯ. ಅದರ ಹೊರತಾಗಿಯೂ ಆ ಅಮೋಘ ಕಥನ ಬಹುತೇಕರಿಗೆ ತಲುಪಿಲ್ಲ, ಅದಕ್ಕೇ ಬಹುತೇಕ ಜನ ಯುವಕರನ್ನು ಗಾಂಧಿ ತಲುಪಿದ್ದು ವಿರಳ.
ಗಾಂಧಿ ಹೋರಾಟದ ಅಸಲಿ ಕಥೆ ಶುರುವಾಗಬೇಕೆಂದರೆ ಅದರ ಹಿನ್ನಲೆಯೂ ಅಗತ್ಯ. ಅದೊಂದು ಕಾಲಕ್ಕೆ ಅತ್ಯಂತ ಶ್ರೀಮಂತವಾಗಿದ್ದ ಭಾರತ ಒಂದು ಬ್ರಿಟಿಷ್ ಆಡಳಿತಕ್ಕೆ ಸಿಕ್ಕು ದಟ್ಟ ದರಿದ್ರ ದೇಶವಾಗಿದ್ದನ್ನು ಒಮ್ಮೆ ನೆನಪಿಸಿಕೊಳ್ಳಬೇಕು. ವಿಜಯನಗರ ಅರಸರ ಕಾಲದಲ್ಲಿ ಸೇರುಗಳಲ್ಲಿ ಮುತ್ತು ರತ್ನಗಳನ್ನು ಅಳೆದು ಕೊಡುತ್ತಿದ್ದರು, ಭಾರತ ಅಷ್ಟು ಸಮೃದ್ದವಾಗಿತ್ತು ಎಂಬುದನ್ನು ನಾವೆಲ್ಲರೂ ಓದಿದ್ದೇವೆ. ಅದೇ ಭಾರತವನ್ನು ಐರೋಪ್ಯರು ಹಾಳುಗೆಡವಿದ್ದು, ಭಾರತೀಯರು ಮತ್ತೆ ತಮ್ಮ ಸ್ವಾಭಿಮಾನ ಮೆರೆದು ಬ್ರಿಟಿಷರ ಬೆವರಿಳಿಸಿದ್ದು ಇವೆಲ್ಲವೂ ಇತಿಹಾಸ.
ಹದಿನೆಂಟನೆಯ ಶತಮಾನದ ಮೊದಲ ಭಾಗದಲ್ಲಿ ಸೂರತ್ತಿನ ಅಬ್ದುಲ್ ಗಪೂರ್ ಎಂಬ ವರ್ತಕ ಈಸ್ಟ್ ಇಂಡಿಯಾ ಕಂಪೆನಿಗೆ ಸರಿಸಮನಾಗಿ ವಿದೇಶಿ ವ್ಯಾಪಾರ ನಡೆಸುತ್ತಿದ್ದ ಎಂಬ ಉಲ್ಲೇಖವಿದೆ. ಅವನ ಇಪ್ಪತ್ತು ಹಡಗುಗಳು ಅರಬ್ ದೇಶಗಳೊಂದಿಗೆ ವ್ಯಾಪಾರ ನಡೆಸುತ್ತಿದ್ದು, ಗುಜರಾತಿನ ವರ್ತಕರು, ತಮಿಳ್ನಾಡಿನ ವರ್ತಕರು, ಆಗ್ನೇಯ ಏಷ್ಯಾ ದೇಶಗಳೊಂದಿಗೆ ವ್ಯಾಪಾರ ಮಾಡುತ್ತಿದ್ದು ಕ್ರಮೇಣ ಕೆಲವರು ಆ ದೇಶಗಳಲ್ಲೆ ನೆಲೆಸುತ್ತಿದ್ದರು. ಭಾರತದ ವ್ಯಾಪಾರ ವಹಿವಾಟುಗಳು ಎಷ್ಟು ಸಮೃದ್ದವಾಗಿದ್ದವು ಎಂಬುದು ಇಲ್ಲಿ ತಿಳಿಯುತ್ತದೆ.
ಸಹಜವಾಗಿ ಈ ಲೇವಾದೇವಿಗಾರರಿಗೆ ರಾಜಕೀಯ ಬಲವೂ ಇರುತ್ತಿತ್ತು. ಪೇಶ್ವೆ ಬಾಜಿರಾಯ ಶೇಕಡಾ 12 ರಿಂದ 30 ರ ಬಡ್ಡಿಯಲ್ಲಿ 30 ಲೇವಾದೇವಿದಾರರಿಂದ ಹದಿನಾಲ್ಕೂವರೆ ಲಕ್ಷ ರೂ ಸಾಲ ಎತ್ತಿದ್ದ. 1736ರಲ್ಲಿ ಕೈಗೊಂಡ ದಂಡಯಾತ್ರೆಗೆ ಹಣ ಒದಗಿಸಲಾಗದೆ ಆ ಹೊಣೆಯನ್ನು ಸಿಂಧ್ಯ ನಂತಹ ಮರಾಠ ಮುಖಂಡರಿಗೆ ವಹಿಸಿದ್ದ. ಆಗ ಹಣ ಒದಗಿಸಿದ ಪರೇಖ್ ಎಂಬ ಗುಜರಾತಿ ಲೇವಾದೇವಿಗಾರ ಮುಂದೆ ಸಿಂಧಿಯಾನ ಮುಖ್ಯಮಂತ್ರಿಯಾದ. ಅಷ್ಟರ ಮಟ್ಟಿಗೆ ಲೇವಾದೇವಿದಾರರು ದೇಶದಲ್ಲಿ ಪ್ರಬಲರಾಗಿದ್ದರು.
ಹದಿನೆಂಟನೇ ಶತಮಾನದ ಮಧ್ಯಭಾಗದವರೆಗೂ ಭಾರತ ಅತ್ಯಂತ ಪ್ರಬಲ ಆರ್ಥಿಕತೆಯನ್ನು ಹೊಂದಿದ ದೇಶವಾಗಿತ್ತು. ಬ್ರಿಟಿಷರ ಕೆಂಗಣ್ಣು ಬಿದ್ದಿದ್ದು ಭಾರತದ ಆರ್ಥಿಕತೆಯ ಮೇಲೂ ಎಂಬುದು ಗಮನಾರ್ಹ ಅಂಶ.
18 ನೇ ಶತಮಾನದ ಮಧ್ಯಭಾಗದಲ್ಲಿ ಸಮೃದ್ಧ ದೇಶವೆಂದು ಖ್ಯಾತಿ ಪಡೆದಿದ್ದ ಭಾರತ 19ನೇ ಶತಮಾನದ ಕೊನೆಯ ವೇಳೆಗೆ ಜಗತ್ತಿನ ಅತ್ಯಂತ ದೀನ ದರಿದ್ರ ದೇಶ ಎಂದು ಹೆಸರಾಗಿ ಎಲ್ಲರ ಕನಿಕರಕ್ಕೂ ಪಾತ್ರವಾಗುವ ದುಸ್ಥಿತಿಗೆ ಇಳಿದಿತ್ತು. 1757 ರ ಪ್ಲಾಸಿ ಕದನದಲ್ಲಿ ಭಾರತೀಯ ಪಕ್ಷ ಸೋತುದು ಈ ಆರ್ಥಿಕ ಅವನತಿಯ ಆರಂಭ ಬಿಂದು.
ಬ್ರಿಟಿಷ್ ಆಡಳಿತ ಹೊಸ ಹೊಸ ಪ್ರದೇಶಗಳಿಗೆ ಹರಡಿದಂತೆ ಅದರ ನೆರಳಿನಂತೆ ದರಿದ್ರ ಕ್ಷಾಮಗಳು ಹರಡುತ್ತಾ ಹೋದವು. 1770 ರಲ್ಲಿ ಅವರ ಆಡಳಿತದಲ್ಲಿದ್ದ ಬಂಗಾಳದಲ್ಲಿ ಭೀಕರ ಕ್ಷಾಮ ತಲೆದೋರಿ 1ಕೋಟಿ ಜೀವಗಳನ್ನು ಬಲಿ ತೆಗೆದುಕೊಂಡಿತ್ತು. ಮುರ್ಷಿದಾಬಾದಿನಲ್ಲಿ ಕಂಪೆನಿಯ ರೆಸಿಡೆಂಟರಾಗಿದ್ದ ಬೆಕರ್ ಎಂಬಾತ ತನ್ನ ವರದಿಯೊಂದರಲ್ಲಿ ಸ್ವೇಚ್ಛೆ ಹಾಗೂ ನಿರಂಕುಶ ಸರ್ಕಾರದ ಆಳ್ವಿಕೆಯಲ್ಲಿ, ಸಮೃದ್ಧವಾಗಿದ್ದ ಈ ಸೊಗಸಾದ ದೇಶ, ಇಂಗ್ಲಿಷರು ಪ್ರಮುಖ ಪಾತ್ರ ವಹಿಸುತ್ತಿರುವ ಆಳ್ವಿಕೆಯಲ್ಲಿ, ವಿನಾಶದ ಅಂಚಿಗೆ ಸಾಗಿವೆ ಎಂದು 1769ರಲ್ಲಿಯೇ ಎಚ್ಚರಿಸಿದ್ದ. ಈಸ್ಟ್ ಇಂಡಿಯಾ ಕಂಪೆನಿಯ ವರದಿಯ ಪ್ರಕಾರವೇ 1/3 ಪಾಲು ಜನಸಂಖ್ಯೆ ಈ ಬ್ರಿಟಿಷ್ ಆಡಳಿತಾವಧಿಯಲ್ಲಿ ಅಳಿದು ಹೋಯಿತು ಎಂದೇ ತಿಳಿಸಿದೆ.
ಆಡಳಿತ ಸೂತ್ರ ವಹಿಸಿದ್ದ ಕಂಪೆನಿ ಅಭಿವೃದ್ಧಿ ಮಾಡಲಾಗದೆ ಹೋದರೂ ಕೊನೆ ಪಕ್ಷ ಭೂಕಂದಾಯ ವಸೂಲಿಯನ್ನಾದರೂ ತಡೆಯಬಹುದಾಗಿತ್ತು. ಆದರೆ ವ್ಯಾಪಾರಿಗೆ ಜಗತ್ತು ನಾಶವಾದರೂ ಅದರಿಂದ ಎಷ್ಟು ಲಾಭ ಬಂತು ಎಂಬುದು ಮುಖ್ಯವಾಗುತ್ತದೆ. 1768ಕ್ಕಿಂತ 1771ರಲ್ಲಿ ಹೆಚ್ಚು ವಸೂಲಿ ಮಾಡಿರುವುದಾಗಿ ವಾರನ್ ಹೇಸ್ಟಿಂಗ್ಸ್ ತೃಪ್ತಿ ಹೆಮ್ಮೆಯಿಂದ ಹೇಳಿಕೊಳ್ಳುತ್ತಾನೆ. ಹೀಗೆ ಯಾವುದೇ ರೀತಿ ಮಾನವೀಯತೆ ತೋರದೆ ಭಾರತೀಯರ ಮೇಲೆ ದೌರ್ಜನ್ಯವೆಸಗಿ ತೆರಿಗೆ ವಸೂಲಿ ಮಾಡಲಾಗಿತ್ತು. ಹೀಗೆ ಭಾರತ ಬ್ರಿಟಿಷರ ಉಕ್ಕಿನ ಮುಷ್ಟಿಗೆ ಸಿಕ್ಕಿ ನುಜ್ಜುನೂರಾಗುತ್ತಿರುವಾಗಲೇ ಇಂಗ್ಲೆಂಡಿನ ಔದ್ಯಮಿಕ ಕ್ರಾಂತಿ ಜರುಗಿದುದು ಹಳ್ಳಕ್ಕೆ ಬಿದ್ದವನ ಮೇಲೆ ಬಂಡಿ ಎಳೆದಂತಾಗಿತ್ತು.
ಈಸ್ಟ್ ಇಂಡಿಯಾ ಕಂಪೆನಿಯ ವ್ಯಾಪಾರ ಇಂಗ್ಲೆಂಡಿನಲ್ಲಿ ಹಣದ ಹೊಳೆ ಹರಿಸಿ ಬೃಹತ್ ಉದ್ಯಮಗಳು ತಲೆ ಎತ್ತಲು ಅಗತ್ಯವಾದ ಬಂಡವಾಳ ಒದಗಿಸಿತು. ಕಂಪೆನಿಯ ವ್ಯಾಪಾರದ ಬಹುದೊಡ್ಡ ಪಾಲು ಭಾರತದ ಸರಕುಗಳನ್ನು ಇಂಗ್ಲೆಂಡಿನ ಮಾರುಕಟ್ಟೆಗೆ ಒದಗಿಸುವುದಾಗಿರಲಿಲ್ಲ. ಭಾರತೀಯ ವಸ್ತುಗಳು ಜನಪ್ರಿಯವಾದಂತೆ ಅವುಗಳ ಬಳಕೆಯ ವಿರುದ್ಧವಾಗಿ ಚಳವಳಿ ಎದ್ದು, ಕಾಯಿದೆಗಳ ಮೂಲಕ, ಹೆಚ್ಚುವರಿ ಸುಂಕ ಹೇರುವ ಮೂಲಕ ಅವು ಯುರೋಪ್ ಮಾರುಕಟ್ಟೆಯಲ್ಲಿ ಬೇರೂರದಂತೆ ಕ್ರಮ ಕೈಗೊಂಡಿತ್ತು. ಇದರ ಪರಿಣಾಮವಾಗಿ ಈಸ್ಟ್ ಇಂಡಿಯಾ ಕಂಪೆನಿ ಭಾರತದಿಂದ ಒಯ್ದ ಸರಕುಗಳಿಗೆ ಪರದೇಶಗಳ ಮಾರುಕಟ್ಟೆಯನ್ನು ಬೆಳೆಸಿಕೊಂಡಿತ್ತು. ಅಂದರೆ ಸರಕು ಭಾರತದ್ದೇ ಆದರೆ ವ್ಯಾಪಾರ ಕಂಪೆನಿಯ ಹಿಡಿತದಲ್ಲಿತ್ತು.
ಅಷ್ಟಕ್ಕೂ ಈ ಔದ್ಯಮಿಕ ಕ್ರಾಂತಿ ಆರಂಭವಾದುದು ಹತ್ತಿಯ ನೂಲು, ಬಟ್ಟೆಗಳ ಉದ್ಯಮದಲ್ಲಿ. ಇದರ ಮಹತ್ವ ಏನು ಎಂಬುದನ್ನು ಇದರ ಕುರಿತಾಗಿ ನಡೆದ ಸಂಶೋಧನೆ ಆವಿಷ್ಕಾರಗಳು ಬೆಳಕು ಚೆಲ್ಲುವ ಅಂಶಗಳು ಇಂತಿವೆ. 1733ರಲ್ಲಿ ಜಾನ್ ಕೆ ಎಂಬುವವನ ಹಾರುಲಾಳಿ(ಫ್ಲೈಷಟಲ್), 1738ರಲ್ಲಿ ವ್ಯಾಟಿನ ಜಲಶಕ್ತಿಯಿಂದ ಕೆಲಸಮಾಡುವ ನೂಲು ಯಂತ್ರ, 1764ರಲ್ಲಿ ಹಾರ್ ಗ್ರೀವನ ಸ್ಪಿನ್ನಿಂಗ್ ಜೆನ್ನಿ ಎಂದು ಹೆಸರಾದ ನೂಲು ಯಂತ್ರ, 1775ರಲ್ಲಿ ಆರ್ಕ್ ರೈಟ್ ಹತ್ತಿಯನ್ನು ಶುದ್ಧ ಮಾಡುವ ಹಿಂಜುವ ಮತ್ತು ನೂಲುವ ಯಂತ್ರಗಳು, 1785ರಲ್ಲಿ ಕಾರ್ಟ್ ರೈಟ್ ನ ಯಾಂತ್ರಿಕ ಮಗ್ಗ ಇತ್ಯಾದಿಗಳು ಬರೀ ಹತ್ತಿ ಬಟ್ಟೆಗೇ ಸಂಬಂಧಿಸಿದ್ದು ಅನ್ನೋದು ಗಮನಾರ್ಹ.
ಯಾಕೆ ಇದೇ ವಿಚಾರಕ್ಕೆ ಸಂಶೋಧನೆ ನಡೆಯಿತೆಂದರೆ ಭಾರತದ ಹತ್ತಿ ವಸ್ತ್ರಗಳಿಗೆ ಪ್ರಪಂಚದಾದ್ಯಂತ ಮಾರುಕಟ್ಟೆ ಇದ್ದವು. ಆ ಮಾರುಕಟ್ಟೆ ಬ್ರಿಟಿಷರ ಹತೋಟಿಯಲ್ಲಿದ್ದು ಔದ್ಯಮಿಕ ಕ್ರಾಂತಿಯ ಮೊದಲ ಹೆಜ್ಜೆಗಳು ಹತ್ತಿಬಟ್ಟೆಗಳ ಉದ್ಯಮಕ್ಕೆ ಮಾತ್ರ ಸಂಬಂಧಿಸುವುದಕ್ಕೆ ಮುಖ್ಯ ಹಾಗೂ ಮೂಲಭೂತ ಕಾರಣಗಳು ಇದು. 1820-21ರಲ್ಲಿ ನಾಗಪುರವನ್ನು ಬ್ರಿಟಿಷರು ಗಣತಿಗೆ ಒಳಪಡಿಸಿದ್ದು, ಆ ಜಿಲ್ಲೆಯಲ್ಲಿ 2,49,800 ಜನ ವಯಸ್ಕ ಗಂಡಸರಲ್ಲಿ 77,700 ಜನ ಕೈಗಾರಿಕೆಗಳಲ್ಲಿ ನೇಯ್ಗೆ ಕೆಲಸದಲ್ಲಿನಿರತರಾಗಿದ್ದರು. ನಾಗಪುರ ಒಂದರಲ್ಲೇ 4,162 ನೇಕಾರರು ನೆಲೆ ನಿಂತಿದ್ದರು. 1008 ನೂಲುವುದೇ ಕಸುಬಾಗಿದ್ದ ಹೆಂಗಸರು, 367 ಬಣ್ಣಗಾರರು, 265 ಕಮ್ಮಾರರು, 223 ಬಡಗಿಗಳು ಇದ್ದರು ಎಂದು ಈ ಸಮಯದಲ್ಲಿ ನಡೆದ ಗಣತಿ ಹೇಳುತ್ತದೆ.
ಬುಖಾನನ್ ವರದಿ ಪ್ರಕಾರ ಬಿಹಾರದ ಷಹಪುರ, ಭಾಗಲಪುರ, ಉತ್ತರ ಪ್ರದೇಶದ ಗೋರಖಾಪುರದಲ್ಲಿ ಕ್ರಮವಾಗಿ 1 ಲಕ್ಷ 59 ಸಾವಿರ , 1 ಲಕ್ಷ 20 ಸಾವಿರ, 1 ಲಕ್ಷ 75 ಸಾವಿರ ನೂಲುಗಾರರು ಇದ್ದರು ಮತ್ತು 7,950, 3,275, 2114 ಮಗ್ಗಗಳು ಕೆಲಸ ಮಾಡುತ್ತಿದ್ದವು. ಅಷ್ಟರ ಮಟ್ಟಿಗೆ ಭಾರತ ನೂಲುವ ಉದ್ಯಮವನ್ನು ಅಂದು ನೆಚ್ಚಿಕೊಂಡಿತ್ತು.
ಹೀಗೆ ಭಾರತ ಈ ಕ್ಷೇತ್ರದಲ್ಲಿ ಕೈಗಾರಿಕೆಯನ್ನು, ವ್ಯಾಪಕ ಜನಬಲ, ಪರಿಶ್ರಮ, ಕುಶಲತೆಯನ್ನು ಕೈಗೂಡಿಸಿಕೊಂಡು ಸಂಪದ್ಭರಿತವಾಗಿತ್ತು. ಅದೇ ಕೈಗಾರಿಕೆಯು ಔದ್ಯಮಿಕ ಕ್ರಾಂತಿಗೆ ಮೊದಲು ಒಳಗಾಗಿ ಭಾರತವು ಬ್ರಿಟಿಷ್ ಆಡಳಿತ ಹಿಡಿತದಲ್ಲಿದ್ದರೂ ತನ್ನ ಅರ್ಥ ವ್ಯವಸ್ಥೆಯನ್ನು ಪುನಶ್ಚೇತನಗೊಳಿಸಿಕೊಳ್ಳಲು ಇದ್ದ ಒಂದೇ ಒಂದು ದಾರಿ ಕತ್ತರಿಸಿಹೋಗಿತ್ತು. ಮೇಲಿನಿಂದ ಬ್ರಿಟಿಷರ ಆಡಳಿತ ಕೆಳಗಿನಿಂದ ಬ್ರಿಟಿಷ್ ಉದ್ಯಮಗಳು ಭಾರತವನ್ನ ಇಕ್ಕುಳದಲ್ಲಿ ಸಿಕ್ಕಿ ಬೀಳಿಸಿ ದೇಶದ ಆರ್ಥಿಕ ಚೈತನ್ಯವನ್ನು ಹೀರುತ್ತಾ ಹೋದವು.
1757ರಿಂದ 1947ರವರೆಗೆ ಹತ್ತೊಂಬತ್ತು ದಶಕಗಳ ಕಾಲ ಈ ಆರ್ಥಿಕ ಹೊಡೆತಕ್ಕೆ ಭಾರತ ಸಿಕ್ಕಿದ್ದು, 1833ರವರೆಗೆ ಕಂಪೆನಿ ತನ್ನ ವ್ಯಾಪಾರಿಯಾಗಿ ಕೊಳ್ಳೆ ಹೊಡೆದರೆ, ಆ ಬಳಿಕ ಕಪ್ಪದ ಹೆಸರಿನಲ್ಲಿ, ತದನಂತರ ತೆರಿಗೆಯ ಹೆಸರಿನಲ್ಲಿ ಸುಲಿಗೆ ನಿರಂತರವಾಗಿತ್ತು. 1794ರಲ್ಲಿ ಕೇವಲ ನೂರೈವತ್ತಾರು ಪೌಂಡು ಹತ್ತಿ ಮತ್ತು ಜವಳಿ ರಫ್ತು ಮಾಡಿದ್ದ ಇಂಗ್ಲೆಂಡು 1810ರ ವೇಳೆಗೆ 1ಲಕ್ಷ 18ಸಾವಿರ ಪೌಂಡ್ ತಲುಪಿಸಿತ್ತು.
1795ರ ವೇಳೆಗೆ ಢಾಕಾದ ಮಸ್ಲಿನ್ ನಿಂದ ಸಾಮಾನ್ಯ ದರ್ಜೆಯ ಸರಕುಗಳನ್ನು ಬ್ರಿಟಿಷ್ ಜವಳಿ ಕಾರ್ಖಾನೆಗಳು ಉತ್ಪಾದಿಸಲಾರಂಭಿಸಿದವು. ಬ್ರಿಟನ್ನಿನ ಉತ್ಪಾದನೆ ರಫ್ತು ಏರಿದಂತೆ ಭಾರತದ ರಫ್ತು, ಅದರ ಪರಿಣಾಮವಾಗಿ ಉತ್ಪಾದನೆ ಇಳಿಯುತ್ತ ಹೋಯಿತು. 1820ರಲ್ಲಿ ಭಾರತಕ್ಕೆ ಬ್ರಿಟೀಷ್ ನೂಲು ಬರತೊಡಗಿ ಚರಕ ನಿಧಾನವಾಗಿ ಮೂಲೆ ಸೇರತೊಡಗಿತು. 1840ರ ವೇಳೆಗೆ ಅತ್ಯುತ್ತಮ ದರ್ಜೆಯ ಮಸ್ಲಿನ್ ಬಟ್ಟೆ ದೆಹಲಿ ಲಖ್ನೋ ಮುಂತಾದ ನವಾಬರು ರಾಜರ ಆಸ್ಥಾನಗಳು ಮಾತ್ರ ಇವುಗಳನ್ನು ಕೊಳ್ಳುವಷ್ಟು ತುಟ್ಟಿಯಾಗಿತ್ತು. ಹೀಗೆ ಭಾರತದ ಆರ್ಥಿಕತೆಯ ಮೇಲೆ ದೊಡ್ಡ ಹೊಡೆತ ಕೊಟ್ಟಿತ್ತು ಬ್ರಿಟಿಷ್ ಸರ್ಕಾರ.
ಭಾರತವನ್ನು ಸಂಪೂರ್ಣವಾಗಿ ಎಲ್ಲಾ ಕ್ಷೇತ್ರಗಳಿಂದಲೂ ಆಕ್ರಮಿಸಿ ಬರಿದಾಗಿಸಿದ್ದ ಬ್ರಿಟಿಷರಿಗೆ ಭಾರತೀಯರು ಮೊಟ್ಟಮೊದಲ ಪ್ರತ್ಯುತ್ತರ ಕೊಟ್ಟಿದ್ದು ಬಹುಶಃ ವಂಗ-ಭಂಗ ಚಳುವಳಿಯಲ್ಲಿ. ಬ್ರಿಟಿಷರ ಒಡೆದು ಆಳುವ ನೀತಿಯ ವಿರುದ್ದ ಶುರುವಾದ ಸ್ವದೇಶಿ ಪ್ರೀತಿ ಇಡೀ ಭಾರತೀಯರನ್ನು ಅಂದು ಒಂದುಗೂಡಿಸಿತ್ತು.
ಆದರೆ ಚಳುವಳಿಗಳನ್ನು ಹತ್ತಿಕ್ಕುವುದನ್ನು ಸುಲಭವಾಗಿ ಅರಿತಿದ್ದ ಬ್ರಿಟಿಷರಿಗೆ ವಂಗಭಂಗ ಚಳುವಳಿಯನ್ನು ಹತ್ತಿಕ್ಕುವುದು ದೊಡ್ಡ ವಿಷಯವಾಗಿರಲಿಲ್ಲ. ಬಂಗಾಳದಿಂದ ರಾಜಧಾನಿ ನವದೆಹಲಿಗೆ ಶಿಫ್ಟ್ ಆದ ಬಳಿಕ ಬಹುತೇಕ ಹೋರಾಟ ನಿಂತು ಹೋಗಿತ್ತು.
ಇವೆಲ್ಲದಕ್ಕೂ ಪುನರ್ಜೀವ ಕೊಟ್ಟಿದ್ದು ಆಗಷ್ಟೇ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಆಗಮಿಸಿ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಂಡ ಮೋಹನದಾಸ ಕರಾಮಚಂದ ಗಾಂಧಿ. 1915ರಲ್ಲಿ ಭಾರತಕ್ಕೆ ಆಗಮಿಸಿ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಂಡ ಗಾಂಧೀಜಿಯವರಿಂದ ಈ ನೂಲುವ ಉದ್ಯಮಕ್ಕೆ ಹೊಸ ಆಯಾಮ ಬಂತು. ಭಾರತಕ್ಕೆ ಆಗಮಿಸುವ ಹೊತ್ತಿನಲ್ಲಿ ಚರಕ ಮತ್ತು ಕೈ ಮಗ್ಗಗಳಿಗೆ ವ್ಯತ್ಯಾಸವೇ ಗೊತ್ತಿಲ್ಲದ ಗಾಂಧಿ ಅದೇ ಚರಕ ಮತ್ತು ನೂಲುಗಳನ್ನು ಬ್ರಹ್ಮಾಸ್ತ್ರದಂತೆ ಬ್ರಿಟಿಷರೆದುರು ಪ್ರಯೋಗಿಸಿದ್ದು ಅಚ್ಚರಿ.
ಭಾರತದ ಹೀನಾಯ ಸ್ಥಿತಿಗೆ ಕಾರಣ ಹುಡುಕುತ್ತ ಹೋದಾಗ ಮತ್ತು ವಂಗ ಭಂಗ ಚಳುವಳಿಯ ಪರಿಣಾಮಗಳ ಬಗ್ಗೆ ಅಧ್ಯಯನ ಮಾಡುತ್ತಾ ಹೋದಾಗ ಸಿಕ್ಕ ಉತ್ತರವೇ ಈ ನೂಲುವ ಉದ್ಯಮ ಮೂಲೆಗುಂಪಾಗಿದ್ದು. ತಮ್ಮ ಸಬರಮತಿ ಆಶ್ರಮದಲ್ಲಿ ಮೊತ್ತ ಮೊದಲಿಗೆ ಕೈ ಮಗ್ಗಗಳನ್ನು ಅಳವಡಿಸಿ ನುರಿತ ನೇಕಾರರನ್ನಿಟ್ಟುಕೊಂಡು ಆಶ್ರಮವಾಸಿಗಳಿಗೆ ತರಬೇತಿಯನ್ನು ಪ್ರಾರಂಭಿಸಿದ ಗಾಂಧಿ ಕ್ರಾಂತಿಯೊಂದಕ್ಕೆ ಮುನ್ನುಡಿ ಬರೆದಿದ್ದರು. ಅಂದು ಭಾರತೀಯರು ಬಹುತೇಕ ಬಟ್ಟೆಗಾಗಿ ಗಿರಣಿಗಳನ್ನೇ ಅವಲಂಬಿಸಿದ್ದರು. ಈ ಅವಲಂಬನೆಯಿಂದ ತಮ್ಮವರನ್ನು ಬಿಡಿಸಬೇಕೆಂದು ಗಾಂಧಿ ಸ್ವದೇಶಿ ತತ್ವದ ಪಾಲನೆಯನ್ನು ತೆಗೆದುಕೊಂಡಿದ್ದರು. ಸ್ಥಳೀಯವಾಗಿ ಉತ್ಪಾದಿಸಿದ ವಸ್ತುಗಳ ಬಳಕೆಯೇ ಸ್ವರಾಜ್ಯದ ಅಡಿಪಾಯ ಎಂಬುದು ಅವರಿಗೆ ಸ್ಪಷ್ಟವಾಗಿ ತಿಳಿದಿತ್ತು. ಆಶ್ರಮದ ಮಗ್ಗಗಳು ಕೆಲಸ ಆರಂಭಿಸಿದ್ದರೂ ಗಾಂಧೀಜಿ ಸಮಾಧಾನಗೊಂಡಿರಲಿಲ್ಲ. ಯಾಕಂದ್ರೆ ಅಲ್ಲಿ ಪೂರ್ಣ ಪ್ರಮಾಣದ ಸ್ವದೇಶಿ ಭಾವ ಅವರಿಗೆ ಕಾಣಲಿಲ್ಲ.
ಗಿರಣಿಗಳು ಒದಗಿಸಿದ ನೂಲಿನಿಂದ ಕೈ ಮಗ್ಗದಲ್ಲಿ ಅವರು ನೇಯುತ್ತಿದ್ದರು. ನೂಲನ್ನೂ ತಾನೇ ತಯಾರಿಸಬೇಕೆಂದು ಪಟ್ಟು ಹಿಡಿದ ಗಾಂಧಿ ಮೂಲೆಗುಂಪಾಗಿದ್ದ ಚರಕದ ಧೂಳು ಕೊಡವಿಸಿದರು. ಕೆಲವೇ ದಿನಗಳಲ್ಲಿ ಹತ್ತಿಯಿಂದ ಬೀಜ ತೆಗೆದು, ಹಿಂಜಿ ನೂಲು ತೆಗೆಯುವುದನ್ನು ಕರಗತಗೊಳಿಸಿಕೊಂಡರು ಮಾತ್ರವಲ್ಲದೆ ತಮ್ಮ ಆಶ್ರಮವಾಸಿಗಳಿಗೆ ಇತರ ಸ್ವಾತಂತ್ರ್ಯ ಹೋರಾಟಗಾರರಿಗೆ ಕೊನೆಗೆ ದೇಶದ ಜನತೆಗೆ ನೂಲು ತೆಗೆಯಲು ಬೇಡಿಕೊಂಡರು. ತಾನು ಪ್ರತಿದಿನ ನೂಲು ತೆಗೆಯದೆ ಆಹಾರ ತೆಗೆದುಕೊಳ್ಳುವುದಿಲ್ಲ ಅನ್ನುವ ಕಠಿಣ ನಿರ್ಧಾರಕ್ಕೂ ಬಂದರು.
ಚಲಿಸುವ ರೈಲಿನಲ್ಲಿ, ಹೊಯ್ದಾಡುವ ಹಡಗಿನಲ್ಲಿ, ಸಾರ್ವಜನಿಕ ಸಭೆಗಳಲ್ಲಿ ಹೀಗೆ ಪ್ರತಿ ಕಡೆಗಳಲ್ಲೂ ಚರಕ ಅವರ ಜೊತೆಯಾಯಿತು. ಒಮ್ಮೆ ಗಾಂಧಿಯವರೊಡನೆ ದೀರ್ಘ ಮಾತುಕತೆ ನಡೆಸಿದ ಟಾಗೊರರು ಗಾಂಧಿಯವರ ಬಳಿ ನಿಮ್ಮ ಸಮಯವನ್ನು ನಾನು ವೃಥಾ ಪೋಲು ಮಾಡಿದೆನೆನೋ ಎಂದರು. ತಕ್ಷಣ ಪ್ರತಿಕ್ರಿಯಿಸಿದ ಗಾಂಧೀಜಿ ಇಲ್ಲ, ನಾನು ನಿಮ್ಮೊಂದಿಗೆ ಸಂಭಾಷಣೆ ನಡೆಸುತ್ತಿದ್ದಾಗ ನಾನು ಬಿಡುವೇ ಇಲ್ಲದಂತೆ ನೂಲುತ್ತಿದ್ದೆ. ನಾನು ನೂಲುವ ಒಂದೊಂದು ನಿಮಿಷವನ್ನು ದೇಶದ ಸಂಪತ್ತಿಗೆ ಸೇರಿಸುತ್ತಿದ್ದೇನೆ ಎಂದು ನನಗನಿಸುತ್ತಿದೆ .ಒಂದು ಕೋಟಿ ಜನ ದಿನವೊಂದಕ್ಕೆ ಒಂದು ತಾಸುಗಳ ಕಾಲ ನೂಲು ತೆಗೆದರೆ ರಾಷ್ಟ್ರೀಯ ಸಂಪತ್ತಿಗೆ ನಾವು ಪ್ರತಿದಿನ 50ಸಾವಿರ ರೂಪಾಯಿಗಳನ್ನು ಸೇರಿಸಬಲ್ಲೆವು. ಈ ನೂಲುವ ಚಕ್ರ ಒಬ್ಬ ಅಥವಾ ಒಬ್ಬಳನ್ನು ಅವರ ಕಸುಬಿನಿಂದ ಉಚ್ಛಾಟನೆ ಮಾಡುವುದಕ್ಕಾಗಿ ಇಲ್ಲ. ಬಡವರು ತಮ್ಮದೇ ನೂಲಿನಿಂದ ತಯಾರಿಸಿದ ಖಾದಿಯನ್ನು ಬಳಸುವಂತಾಗಬೇಕು, ಆ ಮೂಲಕ ಸ್ವಸಂಪೂರ್ಣರಾಗಬೇಕು ಎಂದು ಅವರು ಹೇಳ್ತಾರೆ.
ನಾನು ಎಳೆಯುವ ಪ್ರತಿ ಒಂದೊಂದು ನೂಲಿನಿಂದಲೂ ನಾನು ಭಾರತದ ಅದೃಷ್ಟವನ್ನು ನೋಡುತ್ತಿದ್ದೇನೆ ಎಂಬುದು ನನ್ನ ಖಚಿತವಾದ ಅಭಿಪ್ರಾಯ. ನೂಲುವ ಚಕ್ರವಿಲ್ಲದೆ ಹೋದಲ್ಲಿ, ನಮ್ಮ ಈ ದೇಶಕ್ಕೆ ಮೋಕ್ಷ ಎಂಬುದೇ ಇಲ್ಲ ಎಂಬ ಹೇಳಿಕೆಯನ್ನು ಗಾಂಧಿ ಇಟ್ಟರು. ವಿದ್ಯಾರ್ಥಿಗಳಿಗೆ ಗಾಂಧಿ ಕರೆಕೊಡುತ್ತಾರೆ "ನೀವು ಖಾದಿ ಧರಿಸಿದಿರೆಂದರೆ ಧರಿಸುವ ಒಂದೊಂದು ಗಜಕ್ಕೂ ಒಂದಷ್ಟು ದುಡ್ಡು ಬಡವರ ಜೇಬಿಗೆ ಹೋಗುತ್ತದೆ ಎಂದರ್ಥ. ಕೈಮಗ್ಗದ ಒರಟು ಬಟ್ಟೆ ಜೀವನದ ಸರಳತೆಯನ್ನು ಸೂಚಿಸುತ್ತದೆ ಖಾದಿಗೆ ಅದರದೇ ಆದ ಆತ್ಮವೊಂದಿದೆ, ಹಾಗಾಗಿ ಖಾದಿ ಧರಿಸಿ" ಎಂದು ವಿನಂತಿಸಿಕೊಳ್ಳುತ್ತಾರೆ.
ವಿದೇಶೀಯರ ಆಡಂಬರದ ಉಡುಗೆತೊಡುಗೆಗಳಿಗೆ, ಕಸಕ್ಕೆ ಬೆಂಕಿ ಹಚ್ಚುವ ರೀತಿಯಲ್ಲಿ, ಬೆಂಕಿ ಹಚ್ಚುವ ಆಂದೋಲನ ಶುರುವಾಯಿತು. ಇದೇ ಸಮಯಕ್ಕೆ ಬ್ರಿಟಿಷರ ಜವಳಿ ವ್ಯಾಪಾರಕ್ಕೆ ತೀವ್ರ ಹೊಡೆತ ಬಿತ್ತು. ಬ್ರಿಟಿಷರ ಮಾಲೀಕತ್ವದ ಆನೇಕ ಬಟ್ಟೆ ಗಿರಣಿಗಳು ಮುಚ್ಚಲ್ಪಟ್ಟವು. ನೂಲುಗಳೇ ಗಾಂಧಿಯವರಿಗೆ ಬಂದೂಕಿನ ಗುಂಡುಗಳಿಗೆ ಸಮನಾದವು; ಬಿಟಿಷರ ಜವಳಿ ಕಾರ್ಮಿಕರನ್ನು ಈ ಗುಂಡುಗಳು ತಾಕಿದವು. ಇಂಗ್ಲೆಂಡಿನಲ್ಲಿ ಸಾವಿರಾರು ಮಂದಿ ನಿರುದ್ಯೋಗಿಗಳಾದರು.
ದುಂಡು ಮೇಜಿನ ಸಭೆಯಲ್ಲಿ ಭಾಗವಹಿಸಲು ಲಂಡನ್ ಗೆ ತೆರಳಿದ್ದ ಗಾಂಧಿಯವರ ಬಗ್ಗೆ ಅಲ್ಲಿನ ಪತ್ರಿಕೆಯೊಂದು ಮ್ಯಾಂಚೆಸ್ಟರ್ನ ಬಟ್ಟೆಯ ಕಾರ್ಖಾನೆಯೊಂದರ ಉದ್ಯೋಗಿಗಳನ್ನು ಉದ್ದೇಶಿಸಿ ಹೀಗೆ ಬರೆಯುತ್ತದೆ. ''ನಿಮ್ಮ ಉದ್ಯಮವನ್ನು ನಷ್ಟಪಡಿಸಿ ನಿಮ್ಮ ಉದ್ಯೋಗವನ್ನು ತೆಗೆದವನು ಬಂದಿದ್ದಾನೆ'' ಎಂದು. ಗಾಂಧಿಯವರ ಚರಕ ಅಷ್ಟರಮಟ್ಟಿಗೆ ಇಲ್ಲಿಕೆಲಸ ಮಾಡಿತ್ತು. ಇದನ್ನು ಓದಿದ ಬಳಿಕ ಅಲ್ಲಿನ ಕಾಮಿಕರು ಗಾಂಧೀಜಿಯವರನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ.
ಗಾಂಧಿ ಅಲ್ಲಿ ನೆರೆದಿದ್ದ ಗಿರಣಿಯ ಕಾರ್ಮಿಕರಿಗೆ ಸಮಾಧಾನಿಸುತ್ತಾ "ಇಲ್ಲಿನ ನಿರುದ್ಯೋಗವನ್ನು ಕಂಡು ನನಗೆ ನೋವಾಗಿದೆ. ನಿಮಗೆ, 30 ಲಕ್ಷ ಮಂದಿಗೆ ಕೆಲಸವಿಲ್ಲದಂತಾಗಿದೆ. ಆದರೆ ನಮ್ಮಲ್ಲಿ 30 ಕೋಟಿ ಮಂದಿಗೆ ವರ್ಷದಲ್ಲಿ ಆರು ತಿಂಗಳು ಕೆಲಸವಿರುವುದಿಲ್ಲ. ಇಲ್ಲಿನ ನಿರುದ್ಯೋಗ ವೇತನ ಸರಾಸರಿ ಎಪ್ಪತ್ತು ಫಿಲ್ಲಿಂಗುಗಳು, ನಮ್ಮ ಸರಾಸರಿ ಆದಾಯ ತಿಂಗಳಿಗೆ ಏಳು ಒಲ್ಡಿಂಗುಗಳು ಹಾಗೂ ಪೆನ್ಸಿಗಳು, ಭಾರತದ ನೂಲುವವರ ಮತ್ತು ನೇಕಾರರ ಮತ್ತು ಅವರ ಹಸಿದ ಮಕ್ಕಳ ಬಾಯಿಂದ ತುತ್ತು ಅನ್ನವನ್ನು ಕಸಿದುಕೊಂಡು ನೀವು ಉದ್ಧಾರವಾಗಲು ಬಯಸುತ್ತೀರಾ ? ಭಾರತ ತನ್ನ ವಸ್ತ್ರವನ್ನು ತಾನೇ ತಯಾರಿಸಬಹುದಾದರೂ, ಬ್ಯಾಂಕಾಶೈರಿನ ಬಟ್ಟೆಯನ್ನು ಖರೀದಿಸುವ ನೈತಿಕ ಬದ್ಧತೆ ಅದಕ್ಕಿದೆಯೇ ? ಭಾರತದ ಲಕ್ಷಗಟ್ಟಲೆ ಬಡವರ ಸಮಾಧಿಗಳ ಮೇಲೆ ಉದ್ದಾರವಾಗುವ ಯೋಚನೆ ನಿಮಗಿದೆಯೇ ? ಎಂದು ಪ್ರಶ್ನಿಸುತ್ತಾರೆ.
ಗಾಂಧಿಯವರ ಈ ನೇರ ಮಾತು ಅವರನ್ನು ಬ್ರಿಟಿಷ್ ಕಾರ್ಮಿಕರಿಗೆ ಅರ್ಥವಾಯಿತು. ಅವರೆಲ್ಲರೂ ಆ ಬಳಿಕ ಹರ್ಷೋದ್ಘಾರಗಳಿಂದ ಗಾಂಧಿಯನ್ನು ಸ್ವಾಗತಿಸಿ ಭಾರತದ ಸ್ವಾತಂತ್ರ್ಯಕ್ಕೆ ನಮ್ಮ ಬೆಂಬಲವೂ ಇದೆ ಎಂಬುದನ್ನು ಸರಿ ಹೇಳುತ್ತಾರೆ.
1931ರ ಫ್ಲಾಗ್ ಕಮಿಟಿ ಮೀಟಿಂಗ್ ನಡೆದಾಗ ದೇಶದ ಧ್ವಜ ಯಾವುದಾಗಬೇಕೆಂದು ಚರ್ಚೆಯಾದಾಗ ಇಡೀ ದೇಶದ ಜನರ ಅಭಿಪ್ರಾಯ ಸಂಗ್ರಹಿಸಿ ಮೊತ್ತ ಮೊದಲಿಗೆ ರಚನೆಯಾದ ಧ್ವಜವೇ ಚರಕವಿದ್ದ ಧ್ವಜ. ಕಾರಣ ಚರಕ ಈ ದೇಶದ ಜನರನ್ನು ಒಗ್ಗೂಡಿಸಿದ ಒಂದು ಅದ್ಭುತವಾದ ಶಕ್ತಿ. ಒಂದರ್ಥದಲ್ಲಿ ಅದನ್ನು ಗಾಂಧಿ ನಿಜವಾಗಿಯೂ ಬ್ರಹ್ಮಾಸ್ತ್ರದಂತೆಯೇ ಪ್ರಯೋಗಿಸಿದ್ದರು.
ಹೀಗೆ ಭಾರತೀಯ ಮೂಲ ಉದ್ಯಮವೊಂದನ್ನು ಜೀವಂತಿಕೆಗೆ ತಂದು ವ್ಯಾಪಾರೀ ಮನೋಭಾವದಿಂದ ಜಗತ್ತು ಗೆಲ್ಲಲು ಹೊರಟ ಬ್ರಿಟಿಷರಿಗೆ ಅವರದ್ದೇ ಧಾಟಿಯಲ್ಲಿ ಉತ್ತರ ಕೊಟ್ಟಿದ್ದರು ಗಾಂಧಿ. ಬ್ರಿಟಿಷ್ ಸಾಮ್ರಾಜ್ಯವನ್ನು ನಲುಗಿಸಿ, ಕೊನೆಗೆ ಅವರನ್ನು ಈ ದೇಶದಿಂದಲೇ ಓಡಿಸಿತ್ತು ಗಾಂಧಿ ಮತ್ತು ಅವರು ತೆಗೆದ ನೂಲು..
