ಜಿ20 ಶೃಂಗದ ನಿಮಿತ್ತ ಅಲಂಕಾರಕ್ಕೆ ಶಿವಲಿಂಗದ ಕಾರಂಜಿಗಳು. ವಿವಾದ- ದಿಲ್ಲಿ ಉಪರಾಜ್ಯಪಾಲರ ವಿರುದ್ಧ ಆಪ್‌ ಗರಂ- ಶಿವಲಿಂಗ ತೆಗೆಸಲು ಆಗ್ರಹ. ಜಿ20 ಶೃಂಗಸಭೆಗೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಬರುವುದು ಅನುಮಾನ

ನವದೆಹಲಿ (ಸೆ.1): ದೆಹಲಿಯಲ್ಲಿ ಜಿ20 ಶೃಂಗಸಭೆ ನಡೆಯಲಿರುವ ನಿಮಿತ್ತ ಅಲಂಕಾರದ ಭಾಗವಾಗಿ ಶಿವಲಿಂಗ ಆಕಾರದ ಕಾರಂಜಿಗಳನ್ನು ಸ್ಥಾಪಿಸಿರುವುದು ವಿವಾದಕ್ಕೀಡಾಗಿದೆ.

ನಗರದ ಪಾಲಂ ನಿಲ್ದಾಣದ ಬಳಿಯ ಹನುಮಾನ್‌ ದೇವಸ್ಥಾನದ ಜಂಕ್ಷನ್‌ನಲ್ಲಿ ಸೌಂದರ್ಯಕ್ಕಾಗಿ 18 ಶಿವಲಿಂಗ ಆಕಾರದ ಕಾರಂಜಿಗಳನ್ನು ಸ್ಥಾಪಿಸಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆಪ್‌ ಸಂಸದ ಸಂಜಯ ಸಿಂಗ್‌, ‘ಶಿವಲಿಂಗದ ಕಾರಂಜಿಗಳನ್ನು ಸ್ಥಾಪಿಸುವ ಮೂಲಕ ದೆಹಲಿಯ ಉಪರಾಜ್ಯಪಾಲ ವಿ.ಕೆ ಸಕ್ಸೇನಾ ಅವರು ಕೋಟ್ಯಂತರ ಹಿಂದೂಗಳ ಭಾವನೆಗೆ ಧಕ್ಕೆ ತಂದಿದ್ದಾರೆ ಹಾಗೂ ಇದು ಶಿವಲಿಂಗಕ್ಕೆ ಮಾಡಿದ ಅವಮಾನ ಹಾಗೂ ಅಗೌರವ. ಕೂಡಲೇ ಅವುಗಳನ್ನು ತೆರವುಗೊಳಿಸಬೇಕು ಹಾಗೂ ಸಕ್ಸೇನಾ ವಿರುದ್ಧ ಕ್ರಮ ಕೈಗೊಳ್ಳಬೇಕು. ಬಿಜೆಪಿ ಮತ್ತು ವಿ.ಕೆ ಸಕ್ಸೇನಾ ಅವರು ದೇಶದ ಜನರ ಕ್ಷಮೆಯಾಚಿಸಬೇಕು’ ಎಂದು ಆಗ್ರಹಿಸಿದ್ದಾರೆ.

ಚಂದ್ರಯಾನ-3 ಮಿಷನ್ ಸಕ್ಸಸ್‌ ಹಿಂದಿರುವ ವಿಜ್ಞಾನಿಗಳು ಮತ್ತು ತಂತ್ರಜ್ಞರ ವೇತನ ವಿವರ

‘ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಶಿವಲಿಂಗವನ್ನು ಅವಮಾನಿಸಲಾಗಿದೆ. ಆದರೆ ಬಿಜೆಪಿ ಮೋದಿಯನ್ನು ಹೊಗಳುತ್ತದೆ’ ಎಂದೂ ಕಿಡಿಕಾರಿದ್ದಾರೆ. ಇನ್ನು ಆಪ್‌ ರಾಷ್ಟ್ರೀಯ ವಕ್ತಾರೆ ಪ್ರಿಯಾಂಕ್‌ ಕಕ್ಕರ್‌ ಕೂಡ ‘ದೆಹಲಿ ಉಪರಾಜ್ಯ ವಿ.ಕೆ ಸಕ್ಸೇನಾ ಶಿವಲಿಂಗದ ಕಾರಂಜಿ ಮೂಲಕ ದೇಶದ ಕೋಟ್ಯಂತರ ಹಿಂದೂಗಳ ಭಾವನೆಗೆ ಧಕ್ಕೆ ತಂದಿದ್ದಾರೆ’ ಎಂದು ಟ್ವೀಟ್‌ ಮಾಡಿದ್ದಾರೆ.

ಮಂಗಗಳಂತೆ ಕೂಗಲು 40 ಪರಿಣಿತರ ಆಯೋಜನೆ!:
ದೆಹಲಿಯಲ್ಲಿ ಸೆ.9 ಮತ್ತು 10ರಂದು ನಿಗದಿಯಾಗಿರುವ ಜಿ20 ಸಭೆ ನಡೆಯುವ ಸ್ಥಳದಲ್ಲಿ ಹೆಚ್ಚಾಗಿ ಮಂಗಗಳ ಹಾವಳಿ ಇದ್ದು, ಇದನ್ನು ತಡೆಯಲು ಸರ್ಕಾರವು ಅಲ್ಲಲ್ಲಿ ಮಂಗಗಳದ್ದೇ ಕಟೌಟ್‌ಗಳನ್ನು ಹಾಕಿದೆ. ಇದು ಮಾತ್ರವಲ್ಲದೇ ಮಂಗಗಳಂತೆ ಕೂಗಬಲ್ಲ ತರಬೇತಿ ಪಡೆದ 40 ಜನರನ್ನು ನಿಯೋಜನೆ ಮಾಡಲಾಗಿದೆ.

ಜಿ20 ಸಭೆ ನಡೆಯುವ ಪ್ರದೇಶದ ಮುಖ್ಯ ಪ್ರದೇಶದಲ್ಲಿ ಈಗ ಮಂಗಗಳ ಕಾಟ ಹೆಚ್ಚಿದೆ. ಇಲ್ಲಿ ಮಂಗಗಳನ್ನೇ ಹೋಲುವ ಕಟೌಟ್‌ ಹಾಕುವುದರಿಂದ ಹಾಗೂ ಅವುಗಳ ರೀತಿ ಕೂಗುವುದರಿಂದ ಅವು ಹೆದರಿ ಇಲ್ಲಿ ಬರುವುದಿಲ್ಲ ಎಂಬುದು ಅಧಿಕಾರಿ ಲೆಕ್ಕಾಚಾರ. ಹೀಗಾಗಿ ಬೆದರುಗೊಂಬೆ ರೀತಿಯಲ್ಲಿ ಕಟೌಟ್‌ ಹಾಕಲಾಗಿದೆ ಎಮದು ಮೂಲಗಳು ತಿಳಿಸಿವೆ.

ರೈಲ್ವೆ ಮಂಡಳಿಗೆ ಮೊದಲ ಮಹಿಳಾ ಅಧ್ಯಕ್ಷೆಯಾಗಿ ಜಯಾ ವರ್ಮಾ ನೇಮಕ, ಯಾರೀಕೆ?

ಜಿ20 ಸಭೆಗೆ ಬರುವ ವಿದೇಶಿ ಗಣ್ಯರು ಉಳಿದುಕೊಳ್ಳುವ ಹೋಟೆಲ್‌ ಮತ್ತು ಇತರೆಡೆ ಮಂಗಗಳಂತೆ ಕೂಗುವ ಪ್ರತಿನಿಧಿಗಳನ್ನು ನಿಯೋಜಿಸಲಾಗಿದೆ. ಅಲ್ಲದೇ ಮಂಗಗಳು ಆಹಾರ ಅರಸುತ್ತ ಬಂದು ಹೆಚ್ಚು ಸಮಯ ಕಾಲಹರಣ ಮಾಡುತ್ತವೆಯಾದ್ದರಿಂದ, ಬೇರೆಡೆ ಅಲ್ಲಲ್ಲಿ ಅವುಗಳಿಗೆ ಆಹಾರದ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಆಹಾರ ಸೇವಿಸಿದ ಬಳಿಕ ಜಿ20 ಸ್ಥಳಕ್ಕೆ ಬರುವುದಿಲ್ಲ ಎಂಬುದು ಅಧಿಕಾರಿಗಳ ಇನ್ನೊಂದು ಆಶಾವಾದ.

ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಜಿ20 ಶೃಂಗಕ್ಕೆ ಬರುವುದು ಅನುಮಾನ:
ಭಾರತದಲ್ಲಿ ಸೆ.9-10ರಂದು ನಡೆಯಲಿರುವ ಜಿ20 ಸಭೆಗೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಭಾಗವಹಿಸುವುದು ಅನುಮಾನ ಎಂದು ಮೂಲಗಳು ಹೇಳಿವೆ. ಕ್ಸಿ ಬದಲಿಗೆ ಚೀನಾ ಪ್ರಧಾನ ಮಂತ್ರಿ ಲೀ ಕ್ವಿಂಗ್‌ ಚೀನಾವನ್ನು ಪ್ರತಿನಿಧಿಸಿಬಹುದು ಎನ್ನಲಾಗಿದೆ. ಕ್ಸಿ ಅನುಪಸ್ಥಿತಿಗೆ ಕಾರಣ ಇನ್ನೂ ತಿಳಿದುಬಂದಿಲ್ಲ. ಕಳೆದ ವಾರ ದಕ್ಷಿಣ ಆಫ್ರಿಕಾದಲ್ಲಿ ನಡೆದ ಬ್ರಿಕ್ಸ್‌ ಸಭೆಗೆ ಕ್ಸಿ ಹಾಜರಾಗಿದ್ದರು. ಈ ವೇಳೆ ಮೋದಿ ಹಾಗೂ ಕ್ಸಿ ಅವರು ಉಭಯ ದೇಶಗಳ ನಡುವಿನ ಗಡಿ ಬಿಕ್ಕಟ್ಟು ತಣಿಸಲು ಅನೌಪಚಾರಿಕ ಮಾತುಕತೆ ನಡೆಸಿದ್ದರು. ಆದರೆ ಇದಾದ ಬಳಿಕ ಚೀನಾ ಭಾರತದ ಅರುಣಾಚಲ ಪ್ರದೇಶ ಹಾಗೂ ಲಡಾಖನ್ನು ತನ್ನ ಭಾಗ ಎಂದು ಬಿಂಬಿಸುವ ನಕ್ಷೆ ಬಿಡುಗಡೆ ಮಾಡಿದ್ದು, ಉಭಯ ದೇಶಗಳ ನಡುವೆ ಹೊಸ ಬಿಕ್ಕಟ್ಟು ಸೃಷ್ಟಿಸಿದೆ. ಹೀಗಾಗಿ ಕ್ಸಿ ಪಾಲ್ಗೊಳ್ಳುವುದು ಅನುಮಾನ ಎನ್ನಲಾಗಿದೆ.