ಬೂದಿ ಮುಚ್ಚಿದ ಕೆಂಡದಂತಿದ್ದ ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದೆ. ಬುಡುಕಟ್ಟು ಸಮುದಾಯ ಹಾಗೂ ಇತರರ ನಡುವಿನ ಗಲಭೆಯಲ್ಲಿ ಹಲವು ಮನೆಗಳು ಬೆಂಕಿಗೆ ಆಹುತಿಯಾಗಿದೆ. ಪರಿಸ್ಥಿತಿ ನಿಯಂತ್ರಣಕ್ಕೆ 144 ಸಕ್ಷೆನ್ ಜಾರಿ ಮಾಡಲಾಗಿದೆ. ಮತ್ತೆ ಸೇನೆ ನಿಯೋಜನೆಗೊಂಡಿದೆ. 

ಮಣಿಪುರ(ಮೇ.22): ಮಣಿಪುರದಲ್ಲಿ ಎದ್ದಿರುವ ಗಲಭೆ ಸದ್ಯಕ್ಕೆ ಶಾಂತವಾಗುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ಕಳೆದೊಂದು ತಿಂಗಳಿನಿಂದ ಮಣಿಪುರ ಪ್ರಕ್ಷ್ಯುಬ್ದಗೊಂಡಿದೆ. ಹಲವು ಹಿಂಸಾಚಾರ ಘಟನೆ ನಡೆದಿದೆ. ಬಳಿಕ ಸೇನೆ ನಿಯೋಜಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತರಲಾಗಿತ್ತು. ಇದೀಗ ಬುಡಕಟ್ಟು ಸಮುದಾಯ ಹಾಗೂ ಇತರರ ನಡುವಿನ ಗಲಭೆ ಮತ್ತೊಂದು ಹಿಂಸಾಚಾರಕ್ಕೆ ನಾಂದಿ ಹಾಡಿದೆ. ಭಾರಿ ಹಿಂಸಾಚಾರಕ್ಕೆ ಹಲವು ಮನೆಗಳು ಬೆಂಕಿಗೆ ಆಹುತಿಯಾಗಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ಭಾರತೀಯ ಸೇನೆಯನ್ನು ನಿಯೋಜಿಸಲಾಗಿದ್ದು, ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. 

ಇತ್ತೀಚೆಗೆ ಮೇಟಿ ಸಮುದಾಯ ವಿರೋಧಿ ಹಿಂಸಾಚಾರದಿಂದ ನಲುಗಿದ್ದ ಮಣಿಪುರದಲ್ಲಿ ಮತ್ತೆ ಹಿಂಸಾಚಾರ ತೀವ್ರಗೊಂಡಿದೆ. ಮಧ್ಯಾಹ್ನ ರಾಜಧಾನಿ ಇಂಫಾಲ್‌ನ ಚೆಕ್‌ಕಾನ್‌ ಪ್ರದೇಶದಲ್ಲಿ ಮೇಟಿ ಹಾಗೂ ಕುಕಿ ಸಮುದಾಯಗಳ ನಡುವೆ ಮಾರುಕಟ್ಟೆಯ ಜಾಗಕ್ಕೆ ಸಂಬಬಂಧಿಸಿದಂತೆ ಘರ್ಷಣೆ ನಡೆಯಿತು. ಈ ವೇಳೆ ಅಲ್ಲಲ್ಲಿ ಬೆಂಕಿ ಹಚ್ಚಿದ ಪ್ರಕರಣಗಳೂ ವರದಿಯಾಗಿವೆ. ಈ ಹಿನ್ನೆಲೆಯಲ್ಲಿ ಸೇನೆಯನ್ನು ಗಸ್ತಿಗೆ ಮರು ನಿಯೋಜನೆ ಮಾಡಲಾಗಿದ್ದು, ಮಧ್ಯಾಹ್ನ 1ರ ನಂತರ ಮತ್ತೆ ಕರ್ಫ್ಯೂ ಹೇರಲಾಗಿದೆ.

Manipur Violence: ಮಣಿಪುರ ಹಿಂಸೆಗೆ 54 ಬಲಿ; ರಜೆಗೆ ಹೋಗಿದ್ದ ಸಿಆರ್‌ಪಿಎಫ್ ಯೋಧನ ಹತ್ಯೆ

ಇತ್ತೀಚೆಗೆ ಹಿಂಸೆ ನಿಯಂತ್ರಣಕ್ಕೆ ಬಂದ ಕಾರಣ ಹಗಲು ಕರ್ಫ್ಯೂ ಸಡಿಲಿಸಿ, ಸಂಜೆ 4 ಗಂಟೆ ನಂತರ ಕರ್ಫ್ಯೂ ಹೇರಲಾಗುತ್ತಿತ್ತು. ಮಣಿಪುರವು ಸುಮಾರು ಒಂದು ತಿಂಗಳಿನಿಂದ ಹಲವಾರು ಸಮಸ್ಯೆಗಳಿಗೆ ಸಂಬಂಧಿಸಿದ ಜನಾಂಗೀಯ ಘರ್ಷಣೆಗಳಿಗೆ ಸಾಕ್ಷಿಯಾಗಿದೆ. ಮೇಟಿ ಸಮುದಾಯಕ್ಕೆ ಪರಿಶಿಷ್ಟವರ್ಗ ನೀಡುವ ವಿರುದ್ಧ ಕುಕಿ ಹಾಗೂ ಇತರ ಸಮುದಾಯಗಳು ಭಾರಿ ಹಿಂಸಾಚಾರ ನಡೆಸಿದ್ದವು. 60ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದರು.

ಕಳೆದ ತಿಂಗಳು ಮಣಿಪುರದಲ್ಲಿ ನಡೆದ ಹಿಂಸಚಾರದ ವರದಿ ನೀಡುವಂತೆ ಈಗಾಗಲೇ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚನೆ ನೀಡಿತ್ತು. ಈ ವರದಿ ಕೈ ಸೇರುವ ಮೊದಲೇ ಮತ್ತೆ ಗಲಭೆ ಶುರುವಾಗಿದೆ.

ಹಿಂದೂ ಮೀಟಿ ಸಮುದಾಯ, ಆದಿವಾಸಿ ಕ್ರೈಸ್ತರ ನಡುವೆ ಸಂಘರ್ಷ: ಬೂದಿ ಮುಚ್ಚಿದ ಕೆಂಡವಾದ ಮಣಿಪುರ ಹಿಂಸೆಗೆ 54 ಬಲಿ!

ಮಣಿಪುರ ಪ್ರಾದೇಶಿಕ ಸಮಗ್ರತೆ ಕಾಪಾಡಲು ಕ್ರೈಸ್ತ ಕುಕಿ ಆದಿವಾಸಿ ಸಮುದಾಯ ಹೆಚ್ಚಿನ ಪ್ರಮಾಣದಲ್ಲಿರುವ ಪ್ರದೇಶಗಳಿಗೆ ಪ್ರತ್ಯೇಕ ಆಡಳಿತ ನೀಡಬೇಕು ಎಂದು ಸಲ್ಲಿಸಲಾಗಿದ್ದ ಬೇಡಿಕೆಯನ್ನು ಮುಖ್ಯಮಂತ್ರಿ ಎನ್‌.ಬೀರೇನ್‌ ಸಿಂಗ್‌ ಅವರು ತಿರಸ್ಕರಿಸಿದ್ದಾರೆ. ಬಿಜೆಪಿಯ 7 ಶಾಸಕರು ಸೇರಿದಂತೆ 10 ಶಾಸಕರು ಈ ಬೇಡಿಕೆಯನ್ನು ಸಲ್ಲಿಸಿದ್ದರು. ಈ ಕುರಿತಾಗಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರೊಂದಿಗೆ ಸಭೆ ನಡೆಸಿ ಮರಳಿದ ಸಿಂಗ್‌, ‘ಮಣಿಪುರದ ಪ್ರಾದೇಶಿಕ ಸಮಗ್ರತೆಯನ್ನು ಕಾಪಾಡುವುದಾಗಿ ನಾನು ಭರವಸೆಯನ್ನು ನೀಡುತ್ತೇನೆ ಎಂದಿದ್ದರು.