* ರಾಜಸ್ಥಾನ ಕಾಂಗ್ರೆಸ್‌ ಸರ್ಕಾರದಲ್ಲಿ ಮತ್ತೆ ಬಿಕ್ಕಟ್ಟು* ಖಾಲಿ ಇರುವ 9 ಸಚಿವ ಸ್ಥಾನ ನೀಡಲು ಸಚಿನ್‌ ಪೈಲಟ್‌ ಬಣ ಪಟ್ಟು* ಕೆಲ ಶಾಸಕರ ಫೋನ್‌ ಟ್ಯಾಪಿಂಗ್‌: ಪೈಲಟ್‌ ಬಣದ ಶಾಸಕರ ಆರೋಪ

ಜೈಪುರ(ಜೂ.14): ಕಳೆದ ವರ್ಷದ ಜುಲೈನಲ್ಲಿ ದೊಡ್ಡಮಟ್ಟದಲ್ಲಿ ಹೊರಹೊಮ್ಮಿ ಕೊನೆಗೆ ಅಲ್ಲೇ ತಣ್ಣಗಾಗಿದ್ದ ರಾಜಸ್ಥಾನ ಕಾಂಗ್ರೆಸ್‌ ಸರ್ಕಾರದಲ್ಲಿ ಮತ್ತೆ ಬಿಕ್ಕಟ್ಟು ಉಲ್ಪಣಿಸಿದೆ. ವರ್ಷ ಕಳೆದರೂ 9 ಖಾಲಿ ಸಚಿವ ಸ್ಥಾನಗಳು ಸೇರಿದಂತೆ ತಮ್ಮ ಹಲವು ಬೇಡಿಕೆ ಈಡೇರಿಸಲು ಸಿಎಂ ಅಶೋಕ್‌ ಗೆಹ್ಲೋಟ್‌ ಮತ್ತು ಪಕ್ಷದ ಹೈಕಮಾಂಡ್‌ ನಿರಾಸಕ್ತಿ ತೋರಿರುವ ಬಗ್ಗೆ ಸಚಿನ್‌ ಪೈಲಟ್‌ ನೇತೃತ್ವದ ಕಾಂಗ್ರೆಸ್‌ ಬಣ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಈ ನಿಟ್ಟಿನಲ್ಲಿ ಇತ್ತೀಚೆಗೆ ಸಚಿನ್‌ ಪೈಲಟ್‌ ದೆಹಲಿಗೆ ಭೇಟಿ ನೀಡಿ ತಮ್ಮ ಬಣಕ್ಕೆ ಸಚಿವ ಸಂಪುಟದಲ್ಲಿ ಸ್ಥಾನ ನೀಡುವುದು ಸೇರಿದಂತೆ ಇತರೆ ಕೆಲವು ಬೇಡಿಕೆಗಳ ಬಗ್ಗೆ ಮತ್ತೊಮ್ಮೆ ಕೇಂದ್ರದ ನಾಯಕರಿಗೆ ನೆನಪಿಸಿ ಬಂದಿದ್ದಾರೆ. ಅದರ ಬೆನ್ನಲ್ಲೇ ಸಚಿನ್‌ ಪೈಲಟ್‌ ಬಿಜೆಪಿ ಸೇರಬಹುದು ಎಂಬ ವದಂತಿ ಮತ್ತೊಮ್ಮೆ ಜೋರಾಗಿ ಹಬ್ಬಿದ್ದು, ಅದರ ಬೆನ್ನಲ್ಲೇ ಸರ್ಕಾರ ಮತ್ತು ಪಕ್ಷದಲ್ಲಿ ಪುನರ್‌ ರಚನೆಯ ಚಟುವಟಿಕೆಗಳು ಆರಂಭವಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಪಕ್ಷದ ನಾಯಕರೊಬ್ಬರು, ಪೈಲಟ್‌ ಬಣದ ಬೇಡಿಕೆ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ. ಅದು ತಕ್ಷಣವೇ ಈಡೇರಬಹುದು, ಇಲ್ಲವೇ ಅದಕ್ಕೆ ಸ್ವಲ್ಪ ಸಮಯ ಹಿಡಿಯಬಹುದು. ಸದ್ಯ ಸರ್ಕಾರದಲ್ಲಿ 9 ಸಚಿವ ಸ್ಥಾನ ಖಾಲಿ ಇದೆ. ಎಲ್ಲಾ ಸ್ಥಾನಗಳಿಗೂ ಪೈಲಟ್‌ ಬಣ ಬೇಡಿಕೆ ಇಟ್ಟಿದೆ. ಆದರೆ ಪೈಲಟ್‌ ಬಣದ ಬೇಡಿಕೆ ಜೊತೆಗೆ ಸರ್ಕಾರಕ್ಕೆ ಬೆಂಬಲ ನೀಡಿರುವ 18 ಪಕ್ಷೇತರ ಸದಸ್ಯರು, ಓರ್ವ ಬಿಎಸ್‌ಪಿ ಶಾಸಕ ಮತ್ತು ಕನಿಷ್ಠ 6-7 ಬಾರಿ ಆಯ್ಕೆಯಾಗಿರುವವರನ್ನು ನಾವು ಪರಿಗಣಿಸಬೇಕಿದೆ. ಹೀಗಾಗಿ ಎಲ್ಲಾ ಅಂಶಗಳನ್ನು ಪರಿಗಣಿಸಿ ಎಲ್ಲರಿಗೂ ಸೂಕ್ತವೆನ್ನಿಸುವಂಥ ಸೂತ್ರವೊಂದನ್ನು ಶೀಘ್ರವೇ ಮುಂದಿಡಲಾಗುವುದು ಎಂದು ತಿಳಿಸಿದ್ದಾರೆ.

ಟ್ಯಾಪಿಂಗ್‌:

ಈ ನಡುವೆ ನಮ್ಮ ಕೆಲ ಶಾಸಕರ ಫೋನ್‌ ಕದ್ದಾಲಿಕೆ ನಡೆಸಲಾಗುತ್ತಿದೆ ಎಂದು ಸಚಿನ್‌ ಪೈಲಟ್‌ ಬಣದ ಶಾಸಕ ವೇದ್‌ ಪ್ರಕಾಶ್‌ ಸೋಲಂಕಿ ಆರೋಪಿಸಿದ್ದಾರೆ. ‘ನನ್ನ ಫೋನ್‌ ಕೂಡಾ ಕದ್ದಾಲಿಕೆ ಮಾಡಲಾಗುತ್ತಿದೆಯೋ ಇಲ್ಲವೋ ಎಂಬುದು ಗೊತ್ತಿಲ್ಲ. ಆದರೆ ಹಲವು ಸಂಸ್ಥೆಗಳ ಮೂಲಕ ಇಂಥದ್ದೊಂದು ಪ್ರಕ್ರಿಯೆ ನಡೆಯುತ್ತಿದೆ ಎಂದು ಹಲವು ಶಾಸಕರು ನನ್ನ ಬಳಿ ಹೇಳಿಕೊಂಡಿದ್ದಾರೆ. ಶಾಸಕರನ್ನು ಬಲೆಗೆ ಬೀಳಿಸಿಕೊಳ್ಳಲು ಸರ್ಕಾರ ಇಂಥ ಕೆಲಸ ಮಾಡುತ್ತಿದೆ ಎಂದು ಸ್ವತಃ ಕೆಲ ಅಧಿಕಾರಿಗಳೇ ಶಾಸಕರ ಬಳಿ ಹೇಳಿಕೊಂಡಿದ್ದಾರೆ’ ಎಂದು ಸೋಲಂಕಿ ಹೇಳಿದ್ದಾರೆ.

ಮತ್ತೊಂದೆಡೆ ಸಚಿನ್‌ ಪೈಲಟ್‌ ಬಣದ ಶಾಸಕರಿಗೆ, ಸಿಎಂ ಅಶೋಕ್‌ ಗೆಹ್ಲೋಟ್‌ ಬಣಕ್ಕೆ ಹಾರುವಂತೆ ಒತ್ತಡ ಹಾಕಲಾಗುತ್ತಿದೆ ಎಂದು ಕೆಲ ಶಾಸಕರು ಆರೋಪಿಸಿದ್ದಾರೆ.

2ನೇ ಬಂಡಾಯ:

ಕಳೆದ ವರ್ಷ ಸಚಿನ್‌ ಪೈಲಟ್‌ ಬಣದ 18 ಶಾಸಕರು ಬಂಡೆದ್ದು, ಹರ್ಯಾಣದಲ್ಲಿ ತಿಂಗಳಿಗೂ ಹೆಚ್ಚು ಕಾಲ ರೆಸಾರ್ಟ್‌ ವಾಸ ಮಾಡಿದ್ದರು. ಬಳಿಕ ಪೈಲಟ್‌ ಅವರನ್ನು ಡಿಸಿಎಂ ಮತ್ತು ಪಕ್ಷದ ರಾಜ್ಯಾಧ್ಯಕ್ಷ ಹುದ್ದೆಯಿಂದ ತೆಗೆದು ಹಾಕಲಾಗಿತ್ತು.