ಹೈದರಾಬಾದ್(ಜೂ.08)‌: ತಿರುಪತಿ ದೇವಾಲಯದ ಕೆಲ ಆಸ್ತಿ ಮಾರಾಟ ಮಾಡಲು ಮುಂದಾಗಿ ಟಿಟಿಡಿ ವಿವಾದಕ್ಕೀಡಾದ ಬೆನ್ನಲ್ಲೇ, ಇದೀಗ ಟಿಟಿಡಿ ಆಸ್ತಿಯನ್ನು ತಮ್ಮ ಆಪ್ತರಿಗೆ ಮಾರಾಟ ಮಾಡುವ ಮೂಲಕದ ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್‌. ಜಗನ್ಮೋಹನ ರೆಡ್ಡಿ, ಹೊಸ ವಿವಾದ ಸೃಷ್ಟಿಸಿದ್ದಾರೆ.

ತಿರುಮಲ ಬೆಟ್ಟದ ಮೇಲಿರುವ 2 ಮಠಗಳು ಅತಿಕ್ರಮಣ ಮಾಡಿಕೊಂಡಿದ್ದವು. ಆ ಜಮೀನನ್ನು ಮಠಗಳಿಗೇ ವಹಿಸಿ ಸಕ್ರಮಗೊಳಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಈ ಮಠಗಳಲ್ಲಿ ಒಂದು ಮಠವು ಮುಖ್ಯಮಂತ್ರಿ ಜಗನ್ಮೋಹನ ರೆಡ್ಡಿ ಅವರಿಗೆ ಆಪ್ತ ಮಠ ಎಂದು ತಿಳಿದುಬಂದಿದ್ದು ವಿವಾದಕ್ಕೆ ತುಪ್ಪ ಸುರಿದಿದೆ. ಜಗನ್‌ ನಡೆಯನ್ನು ಬಿಜೆಪಿ ಆಕ್ಷೇಪಿಸಿದ್ದು, ಭಕ್ತರಿಗೆ ಸೇರಿದ ಜಾಗವನ್ನು ಮಠಗಳಿಗೆ ನೀಡಿದ್ದೇಕೆ ಎಂದು ಪ್ರಶ್ನಿಸಿದೆ.

3 ದಿನ ರಿಹರ್ಸಲ್‌ ಬಳಿಕ ಭಕ್ತರಿಗೆ ತಿಮ್ಮಪ್ಪನ ದರ್ಶನ!

ತಿರುಮಲ ಬೆಟ್ಟದ ಮೇಲೆ ಮೌನಸ್ವಾಮಿ ಮಠ 1870 ಚದರ ಅಡಿ ಹಾಗೂ ವಿಶಾಖ ಶ್ರೀ ಶಾರದಾ ಪೀಠಂಗಳು 4817 ಚದರ ಅಡಿ ಜಾಗವನ್ನು ಅತಿಕ್ರಮಣ ಮಾಡಿಕೊಂಡಿದ್ದವು ಎನ್ನಲಾಗಿತ್ತು. ಈ ಅತಿಕ್ರಮಣ ಸಕ್ರಮಗೊಳಿಸಿ ಕಳೆದ ಡಿಸೆಂಬರ್‌ನಲ್ಲಿ ಟಿಟಿಡಿ (ತಿರುಪತಿ ತಿರುಮಲ ದೇವಸ್ಥಾನ ಸಮಿತಿ) ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಕ್ರಮವಾಗಿ ಚದರ ಅಡಿಗೆ 374 ರು. ಹಾಗೂ 964 ರು.ಗಳನ್ನು ವಿಧಿಸಿ ಸಕ್ರಮಗೊಳಿಸುವಂತೆ ಶಿಫಾರಸಿನಲ್ಲಿ ತಿಳಿಸಲಾಗಿತ್ತು.

ಈ 2 ಮಠಗಳಲ್ಲಿ ಶಾರದಾ ಪೀಠದ ಸ್ವರೂಪಾನಂದರು ಜಗನ್‌ ಅವರ ಆಪ್ತರು.

ಇದೀಗ ಈ ಪ್ರಸ್ತಾವವನ್ನು ಜಗನ್‌ ಸರ್ಕಾರ ಒಪ್ಪಿರುವುದು ವಿವಾದಕ್ಕೀಡಾಗಿದೆ. ಆದರೆ, ‘ಮಠಗಳು ಹಿಂದೂ ಧರ್ಮದ ಪ್ರತಿಪಾದನೆಯಲ್ಲಿ ತೊಡಗಿದ್ದು, ಜಾಗ ಹಂಚಿಕೆಯಲ್ಲಿ ತಪ್ಪಿಲ್ಲ’ ಎಂದು ಟಿಟಿಡಿ ಅಧ್ಯಕ್ಷ ವೈ.ವಿ. ಸುಬ್ಬಾರೆಡ್ಡಿ ಸಮರ್ಥಿಸಿದ್ದಾರೆ.