ಗುಡ್ ನ್ಯೂಸ್: ದೇಶದಲ್ಲಿ ಸಕ್ರಿಯ ಕೇಸ್ ಈಗ 3 ತಿಂಗಳಲ್ಲೇ ಕನಿಷ್ಠ..!
ಕೊರೋನಾ ಆತಂಕದ ನಡುವೆಯೇ ಇಡೀ ದೇಶವೇ ನೆಮ್ಮದಿಯ ನಿಟ್ಟುಸಿರು ಬಿಡುವಂತಹ ಸುದ್ದಿಯೊಂದು ಹೊರಬಿದ್ದಿದ್ದು, ಕಳೆದ ಮೂರು ತಿಂಗಳಿಗೆ ಹೋಲಿಸಿದರೆ ಇದೀಗ ದಿನವೊಂದಕ್ಕೆ ಕನಿಷ್ಠ ಕೊರೋನಾ ಹೊಸ ಪ್ರಕರಣಗಳು ದಾಖಲಾಗಿವೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ನವದೆಹಲಿ(ಅ.31): ಕೊರೋನಾ ವಿರುದ್ಧದ ಸಮರದಲ್ಲಿ ಒಂದೊಂದೇ ಯಶಸ್ಸಿನ ಹೆಜ್ಜೆ ಇಡುತ್ತಿರುವ ಭಾರತದಲ್ಲಿ ಇದೀಗ ಸಕ್ರಿಯ ಸೋಂಕಿತರ ಸಂಖ್ಯೆ 5.94 ಲಕ್ಷಕ್ಕೆ ಇಳಿದಿದೆ. ಅಂದರೆ ಒಟ್ಟು ಸೋಂಕಿತರ ಪೈಕಿ ಶೇ.7.35ರಷ್ಟುಮಾತ್ರವೇ ಸಕ್ರಿಯರಾಗಿ ಉಳಿದಿದ್ದಾರೆ. ಸಕ್ರಿಯ ಕೇಸುಗಳ ಸಂಖ್ಯೆ 6 ಲಕ್ಷಕ್ಕಿಂತ ಕೆಳಗೆ ಇಳಿದಿದ್ದು ಕಳೆದ 85 ದಿನಗಳಲ್ಲಿ ಇದೇ ಮೊದಲು. ಹೀಗಾಗಿ ಇದು ಕೊರೋನಾ ವಿರುದ್ಧದ ಹೋರಾಟದಲ್ಲಿ ಹೊಸ ಮೈಲುಗಲ್ಲು ಎಂದು ಸರ್ಕಾರ ಹೇಳಿದೆ. ಈ ಹಿಂದೆ ಆ.6 ರಂದು 5.95 ಲಕ್ಷ ಕೇಸು ದಾಖಲಾಗಿತ್ತು.
ಇನ್ನು ಸೋಂಕಿನಿಂದ ಚೇತರಿಸಿಕೊಳ್ಳುವವರ ಪ್ರಮಾಣ ಶೇ.91.15ಕ್ಕೆ ತಲುಪಿದೆ. ಹೊಸ ಕೇಸುಗಳಲ್ಲಿ ಶೇ.80ರಷ್ಟುಪಾಲು ಕೇವಲ 10 ರಾಜ್ಯಗಳಿಗೆ ಸೀಮೀತವಾಗಿದೆ. ಈ ಪೈಕಿ ಕೇರಳ, ಮಹಾರಾಷ್ಟ್ರ ಮತ್ತು ಕರ್ನಾಟಕ ಮೊದಲ ಮೂರು ಸ್ಥಾನದಲ್ಲಿವೆ ಎಂದು ಸರ್ಕಾರ ಮಾಹಿತಿ ನೀಡಿದೆ.
ಡಿಸೆಂಬರ್‌ಗೆ ಭಾರತದಲ್ಲಿ ಕೊರೋನಾ 'ಕೋವಿಶೀಲ್ಡ್' ಲಸಿಕೆ ತುರ್ತು ಬಳಕೆ..!
ಈ ನಡುವೆ ಶುಕ್ರವಾರ ದೇಶದಲ್ಲಿ 48772 ಹೊಸ ಸೋಂಕಿತರು ಪತ್ತೆಯಾಗಿದ್ದಾರೆ. ಅಂದರೆ ಸತತ 5ನೇ 50000ಕ್ಕಿಂತ ಕಡಿಮೆ ಕೇಸು ದಾಖಲಾದಂತೆ ಆಗಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಶುಕ್ರವಾರದ ವರದಿ ಅನ್ವಯ ದೇಶದಲ್ಲೀಗ ಕೊರೋನಾ ಸೋಂಕಿತರ ಸಂಖ್ಯೆ 80.88 ಲಕ್ಷಕ್ಕೆ ತಲುಪಿದ್ದು, 1.21 ಲಕ್ಷ ಜನರು ಸಾವನ್ನಪ್ಪಿದ್ದಾರೆ.