ಡಿಎಂಕೆ ಭರ್ಜರಿ ಭರವಸೆ| ಚಿನ್ನ, ಕೃಷಿ ಸಾಲ ಮನ್ನಾ| ಗ್ಯಾಸ್‌ಗೆ ರೂ 100 ಸಬ್ಸಿಡಿ| ಪೆಟ್ರೋಲ್‌ ಬೆಲೆ ರೂ 5 ಕಡಿತ| 500 ಕಲೈನರ್‌ ಕ್ಯಾಂಟೀನ್‌| ದೇಗುಲಗಳ ಜೀರ್ಣೋದ್ಧಾರಕ್ಕೆ ರೂ 1000 ಕೋಟಿ| ಬೆಂಗಳೂರು ಪಕ್ಕದ ಹೊಸೂರಿನಲ್ಲಿ ಏರ್‌ಪೋರ್ಟ್‌| 505 ಭರವಸೆಗಳ ಡಿಎಂಕೆ ಪ್ರಣಾಳಿಕೆ ಬಿಡುಗಡೆ

ಚೆನ್ನೈ(ಮಾ.14): ಹತ್ತು ವರ್ಷಗಳಿಂದ ಅಧಿಕಾರ ವಂಚಿತವಾಗಿರುವ ಡಿಎಂಕೆ ಈ ಬಾರಿ ಗದ್ದುಗೆಗೆ ಏರಲೇ ಬೇಕು ಎಂಬ ಹಟದೊಂದಿಗೆ ಬರೋಬ್ಬರಿ 505 ಭರವಸೆಗಳನ್ನು ಹೊಂದಿರುವ ಚುನಾವಣಾ ಪ್ರಣಾಳಿಕೆಯನ್ನು ಶನಿವಾರ ಬಿಡುಗಡೆ ಮಾಡಿದೆ. ವೈದ್ಯಕೀಯ ಕೋರ್ಸ್‌ ಪ್ರವೇಶಕ್ಕಾಗಿ ಇರುವ ನೀಟ್‌ ಪರೀಕ್ಷಾ ವ್ಯವಸ್ಥೆ ಮೊದಲ ವಿಧಾನಸಭೆ ಅಧಿವೇಶನದಲ್ಲೇ ರದ್ದು, ಪೆಟ್ರೋಲ್‌ ಬೆಲೆ ಲೀಟರ್‌ಗೆ 5 ಹಾಗೂ ಡೀಸೆಲ್‌ ದರ 4 ರು. ಕಡಿತ. ಹಾಲಿನ ದರ 3 ರು. ಇಳಿಕೆ, ಗ್ಯಾಸ್‌ ಸಿಲಿಂಡರ್‌ಗೆ 100 ರು. ಸಬ್ಸಿಡಿ ನೀಡುವುದಾಗಿ ಘೋಷಿಸಿದೆ.

ತಮಿಳು ಮೂಲದ ಜನರಿಗೆ ಕೈಗಾರಿಕಾ ಸಂಸ್ಥೆಗಳಲ್ಲಿ ಶೇ.75ರಷ್ಟುಮೀಸಲಾತಿ ನೀಡುವುದರ ಜತೆಗೆ, ಡಿಎಂಕೆ ನಾಯಕ ಕರುಣಾನಿಧಿ ಅವರ ನೆನಪಿನಲ್ಲಿ 500 ಕಲೈನರ್‌ ಕ್ಯಾಂಟೀನ್‌ಗಳನ್ನು ಸ್ಥಾಪನೆ ಮಾಡುವುದಾಗಿ ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್‌ ಬಿಡುಗಡೆ ಮಾಡಿದ ಪ್ರಣಾಳಿಕೆ ಹೇಳುತ್ತದೆ.

‘ನಾಸ್ತಿಕ ಪಕ್ಷ’ ಎಂಬ ಆರೋಪಕ್ಕೆ ಗುರಿಯಾಗಿದ್ದರೂ ಹಿಂದುಗಳ ಭರ್ಜರಿ ಓಲೈಕೆಗೆ ಇಳಿದಿರುವ ಡಿಎಂಕೆ, ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ 1000 ಕೋಟಿ ರು. ಮೀಸಲಿಡಲಾಗುವುದು ಎಂದಿದೆ. ಜತೆಗೆ ಹಿಂದು ದೇಗುಲಗಳ ಯಾತ್ರೆಗೆ ತೆರಳುವವರಿಗೆ 25 ಸಾವಿರದಿಂದ 1 ಲಕ್ಷ ನೆರವು ನೀಡುವುದಾಗಿ ಘೋಷಿಸಿದೆ. ಬೆಂಗಳೂರು ಸಮೀಪದಲ್ಲೇ ಇರುವ ಹೊಸೂರು ಸೇರಿ ವಿವಿಧೆಡೆ ಹೊಸ ಏರ್‌ಪೋರ್ಟ್‌ ಸ್ಥಾಪಿಸಲಾಗುವುದು ಎಂದೂ ತಿಳಿಸಿದೆ.

ಪ್ರಮುಖ ಭರವಸೆಗಳು

- ಕೋವಿಡ್‌ ಸಂಕಷ್ಟಭರಿಸಲು ಪಡಿತರ ಕಾರ್ಡ್‌ ಹೊಂದಿದ್ದವರಿಗೆ 4000 ರು. ನೆರವು

- ಸಹಕಾರಿ ಬ್ಯಾಂಕ್‌ಗಳಲ್ಲಿನ ಸಣ್ಣ ರೈತರ ಕೃಷಿ, ಚಿನ್ನ (40 ಗ್ರಾಂವರೆಗೆ) ಸಾಲ ಮನ್ನಾ

- ಸ್ವಸಹಾಯ ಸಂಘ, ಕಾಲೇಜು ವಿದ್ಯಾರ್ಥಿಗಳ ಶಿಕ್ಷಣ ಸಾಲ ಮನ್ನಾ

- ಜಯಲಲಿತಾ ಸಾವಿಗೆ ಕಾರಣವಾದ ಸನ್ನಿವೇಶದ ಬಗೆ ಸೂಕ್ತ ತನಿಖೆ

- ವಾರ್ಷಿಕ 1 ಲಕ್ಷ ಹಿಂದೂಗಳ ತೀರ್ಥಯಾತ್ರೆಗೆ ತಲಾ 25000 ರು.ನೆರವು

- ಸರ್ಕಾರಿ ವಲಯದಲ್ಲಿ 5 ಲಕ್ಷ ಉದ್ಯೋಗ ಸೃಷ್ಟಿ

- ಬಳಕೆದಾರರಿಗೆ ಹಾಲಿನ ದರ ಲೀ.ಗೆ 3 ರು.ನಷ್ಟುಕಡಿತ

- ಪೆಟ್ರೋಲ್‌ ಬೆಲೆ 5 ರು., ಡೀಸೆಲ್‌ 4 ರು. ಇಳಿಕೆ

- ಪಡಿತರ ಚೀಟಿ ಹೊಂದಿದವರಿಗೆ ಗ್ಯಾಸ್‌ ಸಿಲಿಂಡರ್‌ಗೆ 100 ರು. ಸಬ್ಸಿಡಿ

- ಉದ್ಯೋಗದಲ್ಲಿ ಶೇ.75ರಷ್ಟುಮೀಸಲು ಸ್ಥಳೀಯರಿಗೆ

- ಖಾಸಗಿ ವಲಯದಲ್ಲೂ ಮೀಸಲು ನೀತಿ ಜಾರಿಗೆ

- ಸಿಟಿ ಬಸ್‌ಗಳಲ್ಲಿ ಸ್ತ್ರೀಯರಿಗೆ ಉಚಿತ ಪ್ರಯಾಣ

- ಹೆರಿಗೆ ರಜೆ 6 ತಿಂಗಳಿಂದ 1 ವರ್ಷಕ್ಕೆ ವಿಸ್ತರಣೆ

- ಸರ್ಕಾರಿ ಉದ್ಯೋಗದಲ್ಲಿ ಸ್ತ್ರೀಯರಿಗೆ ಶೇ.40 ಮೀಸಲಾತಿ

- ವಿದ್ಯಾರ್ಥಿಗಳಿಗೆ ಉಚಿತ ಕಂಪ್ಯೂಟರ್‌ ವಿತರಣೆ

- ಸಮವರ್ತಿ ಪಟ್ಟಿಯಲ್ಲಿರುವ ಶಿಕ್ಷಣ ‘ರಾಜ್ಯ ಪಟ್ಟಿ’ಗೆ

- ವೈದ್ಯಕೀಯ ಕೋರ್ಸ್‌ ಪ್ರವೇಶಕ್ಕಾಗಿ ಇರುವ ನೀಟ್‌ ರದ್ದು

- ಪ್ರತ್ಯೇಕ ಕೃಷಿ ಬಜೆಟ್‌ ಮಂಡನೆ

- ಮಸೀದಿ, ಚರ್ಚುಗಳ ಅಭಿವೃದ್ಧಿಗೆ 200 ಕೋಟಿ

- ಅರ್ಚಕರ ವೇತನ ಹೆಚ್ಚಳ, ವೃದ್ಧರಿಗೆ 1500 ರು. ಪಿಂಚಣಿ

- ಅಣ್ಣಾಡಿಎಂಕೆ ನಾಯಕರ ಭ್ರಷ್ಟಾಚಾರ ತನಿಖೆಗೆ ಪ್ರತ್ಯೇಕ ಕೋರ್ಟ್‌

- ಪ್ರಣಾಳಿಕೆ ಜಾರಿ ಕಣ್ಗಾವಲಿಗೆ ಪ್ರತ್ಯೇಕ ಇಲಾಖೆ ರಚನೆ