ಭುವನೇಶ್ವರ್‌ (ಅ. 29): ಸಮುದ್ರದಲ್ಲಿ 28 ದಿನಗಳ ಕಾಲ ಸಿಕ್ಕಿಹಾಕಿಕೊಂಡಿದ್ದ ವ್ಯಕ್ತಿಯೊಬ್ಬ ಪವಾಡ ಸದೃಶ ರೀತಿಯಲ್ಲಿ ಬದುಕಿ ಉಳಿದು, ಒಡಿಶಾ ಕರಾವಳಿಯನ್ನು ತಲುಪುವಲ್ಲಿ ಯಶಸ್ವಿಯಾಗಿದ್ದಾನೆ.

ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪಗಳ ಶಹೀದ್‌ ದ್ವೀಪಗಳ ನಿವಾಸಿಯಾದ ಅಮೃತ್‌ ಕುಜೂರ್‌ ಎಂಬಾತ ತನ್ನ ಸ್ನೇಹಿತ ದಿವ್ಯಾರಂಜನ್‌ ಎಂಬಾತನೊಡನೆ ಸೆ.28ರಂದು ಅಂಡಮಾನ್‌ನಿಂದ ಬೋಟ್‌ವೊಂದರಲ್ಲಿ ಪ್ರಯಾಣ ಬೆಳೆಸಿದ್ದ. ಆದರೆ, ಮಾರ್ಗ ಮಧ್ಯೆ ಇವರಿದ್ದ ಬೋಟು ಚಂಡಮಾರುತಕ್ಕೆ ಸಿಲುಕಿಕೊಂಡಿತ್ತು. ಇಂಧನ ಖಾಲಿಯಾಗಿ ಸಂಕಷ್ಟಕ್ಕೆ ಸಿಲುಕಿದ್ದ ಇವರಿಗೆ ನೌಕಾ ಹಡಗೊಂದು 260 ಲೀಟರ್‌ ಡೀಸೆಲ್‌ ಮತ್ತು ಕಂಪಾಸ್‌ ನೀಡಿತ್ತು.

ಆದರೆ, ಬಂಗಾಳಕೊಲ್ಲಿ ಉಂಟಾದ ಇನ್ನೊಂದು ಚಂಡಮಾರುತವೊಂದು ಅಪ್ಪಳಿಸಿ ಬೋಟ್‌ನಲ್ಲಿ ಇದ್ದ ಆಹಾರ ಮತ್ತು ನೀರು ಸಮುದ್ರ ಪಾಲಾಗಿತ್ತು. ಹೀಗಾಗಿ ಆಹಾರ ನೀರಿಲ್ಲದೇ ಕುಜೂರ್‌ ಸ್ನೇಹಿತ ದಿವ್ಯಾ ರಂಜನ್‌ ಸಾವಿಗೀಡಾಗಿದ್ದ. ಮಳೆಯ ನೀರನ್ನೇ ಕುಡಿದುಕೊಂಡು ಕುಚೂರ್‌ ಜೀವ ಕೈಯಲ್ಲಿ ಹಿಡಿದುಕೊಂಡು ಪ್ರಯಾಣ ಮುಂದುವರಿಸಿದ್ದ.

28 ದಿನಗಳ ಜೀವನ್ಮರಣ ಹೋರಾಟದ ಬಳಿಕ ಕುಜೂರ್‌ ಒಡಿಶಾದ ಖಿರಿಸಾಹಿ ಸಮುದ್ರ ತೀರವನ್ನು ತಲುಪಿದ್ದಾನೆ. ಕರಾವಳಿ ಪೊಲೀಸರು ಈತನನ್ನು ಆಸ್ಪತ್ರೆಗೆ ದಾಖಲಿಸಿ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿದ್ದಾರೆ.