ಕೋಲ್ಕತಾ(ಡಿ.22): ಪಶ್ಚಿಮ ಬಂಗಾಳ ಚುನಾವಣೆ ಆಗಮಿಸುತ್ತಿದ್ದಂತೆ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಪಕ್ಷದ ಬುಡ ಅಲುಗಾಡುತ್ತಿದೆ. ದಶಗಳ ಕಾಲ ಗಟ್ಟಿಯಾಗಿ ನೆಲೆಯೂರಿದ್ದ ಮಮತಾ ಇದೀಗ ಬಿಜೆಪಿ ಅಲೆಗೆ ಸಿಲುಕಿ ಒದ್ದಾಡುವ ಪರಿಸ್ಥಿತಿ ಬಂದಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಬಂಗಾಳದಲ್ಲಿ ನಡೆಸಿದ ರೋಡ್ ಶೋ ಹಾಗೂ ಕಾರ್ಯಕ್ರಮ ದೀದಿಗೆ ತಲೆನೋವಾಗಿ ಪರಿಣಮಿಸಿದೆ. ಶಾ ಸಮ್ಮುಖದಲ್ಲಿ ತೃಣಮೂಲ ಕಾಂಗ್ರೆಸ್ ಪ್ರಮುಖ ನಾಯಕರು ಬಿಜೆಪಿ ಸೇರಿಕೊಂಡಿದ್ದರು. ಇದರ ಬೆನ್ನಲ್ಲೇ ಮತ್ತೆ ಕೆಲ ನಾಯಕರು ಬಿಜೆಪಿಯತ್ತ ಮುಖಮಾಡಿದ್ದಾರೆ.

ತೃಣಮೂಲ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ ಬಳಿಕ ಮಮತಾ ಬ್ಯಾನರ್ಜಿ ಕ್ಯಾಬಿನೆಟ್ ಸಭೆ ಕರೆದಿದ್ದಾರೆ. ಡಿಸೆಂಬರ್ 22 ರಂದು ಕೆರದ ಸಭೆಗೆ ತೃಣಮೂಲ ಕಾಂಗ್ರೆಸ್‌ನ ನಾಲ್ವರು ನಾಯಕರು ಗೈರಾಗಿದ್ದಾರೆ. ಇದರಲ್ಲಿ ಮೂವರು ಸ್ಪಷ್ಟ ಕಾರಣ ನೀಡಿದ್ದಾರೆ. ಆದರೆ ಅರಣ್ಯ ಸಚಿವ ರಜೀಬ್ ಬ್ಯಾನರ್ಜಿ ಮಾತ್ರ ಯಾವುದೇ ಕಾರಣವೂ ನೀಡಿಲ್ಲ, ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ ಎಂದು ತೃಣಮೂಲ ಕಾಂಗ್ರೆಸ್ ಮುಖ್ಯ ಕಾರ್ಯದರ್ಶಿ ಪಾರ್ಥ ಚಟರ್ಜಿ ಹೇಳಿದ್ದಾರೆ.

ಕಳೆದ ತಿಂಗಳಿನಿಂದ ರಜೀಬ್ ಬ್ಯಾನರ್ಜಿ ಪಕ್ಷದ ವಿರುದ್ಧವೇ ಆರೋಪ ಮಾಡಿದ್ದರು. ಇಷ್ಟೇ ಅಲ್ಲ ಕಳೆದ ವಾರದಿಂದ ಪಕ್ಷದ ಯಾವ ಸೂಚನೆಗೆ ಸ್ಪಷ್ಟ ಪ್ರತಿಕ್ರಿಯೆ ನೀಡಿಲ್ಲ. ಹೀಗಾಗಿ ರಜೀಬ್ ಕೂಡ ಬಿಜೆಪಿಯತ್ತ ಮುಖ ಮಾಡಿದ್ದಾರೆ ಅನ್ನೋ ಮಾತುಗಳು ಬಲವಾಗಿ ಕೇಳಿ ಬರುತ್ತಿದೆ. ಈಗಾಗಲೇ ಸಚಿವ ಸುವೆಂದು ಅಧಿಕಾರಿ ಬಿಜೆಪಿ ಸೇರಿಕೊಂಡಿದ್ದಾರೆ. ಇದರ ಜೊತೆ ಹಲವು ನಾಯಕರು, ಸಂಸದರು  ಬಿಜೆಪಿ ಸೇರಿಕೊಂಡಿದ್ದಾರೆ.