ವೀರಪ್ಪನ್ ಹತ್ಯೆಗೈದ ಐಪಿಎಸ್ ಮಾಜಿ ಅಧಿಕಾರಿ ಕೆ. ವಿಜಯ್ ಕುಮಾರ್ ಗೃಹ ಸಚಿವಾಲಯಕ್ಕೆ ನೇಮಕ| ಭದ್ರತಾ ಸಲಹೆಗಾರರಾಗಿ 1 ವರ್ಷ ಸೇವೆ ಸಲ್ಲಿಸಲಿದ್ದಾರೆ ಕೆ. ವಿಜಯ್ ಕುಮಾರ್| 

ನವದೆಹಲಿ[ಡಿ.06]: ಕರ್ನಾಟಕದ ನಿದ್ರೆಗೆಡಿಸಿದ್ದ ಕುಖ್ಯಾತ ನರಹಂತಕ ವೀರಪ್ಪನ್‌ನನ್ನು 2004ರಲ್ಲಿ ಹತ್ಯೆಗೈದ ವಿಶೇಷ ಕಾರ್ಯಪಡೆ (ಎಸ್‌ಟಿಎಫ್‌)ಯ ಮುಖ್ಯಸ್ಥರಾಗಿದ್ದ ಐಪಿಎಸ್‌ ಅಧಿಕಾರಿ ಹಾಗೂ ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲರ ಮಾಜಿ ಸಲಹೆಗಾರರಾಗಿದ್ದ ವಿಜಯ್ ಕುಮಾರ್‌ ಕೇಂದ್ರ ಗೃಹ ಸಚಿವಾಲಯಕ್ಕೆ ಭದ್ರತಾ ಸಲಹೆಗಾರರಾಗಿ ನೇಮಕಗೊಂಡಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಐಪಿಎಸ್‌ ಅಧಿಕಾರಿ ವಿಜಯ್ ಕುಮಾರ್‌ರನ್ನು ಗೃಹ ಸಚಿವಾಲಯದ ಭದ್ರತಾ ಸಲಹೆಗಾರರನ್ನಾಗಿ ನೇಮಕಗೊಳಿಸಿದ್ದಾರೆ. 1975ನೇ ಇಸವಿಯ IPS ಬ್ಯಾಚ್ ಅಧಿಕಾರಿಯಾಗಿದ್ದ ವಿಜಯ್ ಕುಮಾರ್ 'ಕೇಂದ್ರಾಡಳಿತ ಪ್ರದೇಶ ಜಮ್ಮು ಕಾಶ್ಮೀರ ಹಾಗೂ ನಕ್ಸಲ್ ಪ್ರಭಾವವಿರುವ ರಾಜ್ಯಗಳ ಭದ್ರತೆಗೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವಾಲಯಕ್ಕೆ ಸಲಹೆ ನೀಡಲಿದ್ದಾರೆ' ಎಂದು ತಿಳಿಸಲಾಗಿದೆ.

ಕೇಂದ್ರ ಗೃಹ ಸಚಿವಾಲಯ ಡಿಸೆಂಬರ್ 3 ರಂದು ಈ ಆದೇಶ ಹೊರಡಿಸಿದ್ದು, 67 ವರ್ಷದ ವಿಜಯ್ ಕುಮಾರ್ ಮುಂದಿನ 1 ವರ್ಷ ಭದ್ರತಾ ಸಲಹೆಗಾರರಾಗಿ ಕಾರ್ಯ ನಿರ್ವಹಿಸಲಿದ್ದಾರೆ.

ವೀರಪ್ಪನ್‌ ಹತ್ಯೆಗೈದ ವಿಜಯ್‌ ಕಾಶ್ಮೀರ ಗವರ್ನರ್?

2018ರಿಂದ ಜಮ್ಮು-ಕಾಶ್ಮೀರ ರಾಜ್ಯಪಾಲರ ಸಲಹೆಗಾರರಾಗಿ ವಿಜಯಕುಮಾರ್‌ ಕಾರ್ಯನಿರ್ವಹಿಸುತ್ತಿದ್ದಾರೆ. 1975ನೇ ಬ್ಯಾಚಿನ ತಮಿಳುನಾಡು ಕೇಡರ್‌ ಅಧಿಕಾರಿಯಾಗಿರುವ ವಿಜಯನ್ ಕೇಂದ್ರ ಮೀಸಲು ಪೊಲೀಸ್ ಪಡೆ[CRPF]ನ ಮಹಾ ನಿರ್ದೇಶಕ, ರಾಷ್ಟ್ರೀಯ ಪೊಲೀಸ್ ಅಕಾಡೆಮಿ ಹೈದರಾಬಾದ್‌ನ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ.

ಕುಖ್ಯಾತ ನರಹಂತಕ ವೀರಪ್ಪನ್‌ನನ್ನು 2004ರಲ್ಲಿ ಹತ್ಯೆಗೈದ ವಿಶೇಷ ಕಾರ್ಯಪಡೆ (ಎಸ್‌ಟಿಎಫ್‌)ಯ ಮುಖ್ಯಸ್ಥರಾಗಿದ್ದ ಐಪಿಎಸ್‌ ಅಧಿಕಾರಿ ಕನ್ನಡಿಗರ ಮನಗೆದ್ದಿದ್ದರು. ಇವರನ್ನು ಆಧಾರವಾಗಿಟ್ಟುಕೊಂಡು ಸ್ಯಾಂಡಲ್‌ವುಡ್‌ನಲ್ಲಿ ಎರಡು ಸಿನಿಮಾಗಳು ಮೂಡಿ ಬಂದಿವೆ. 2013ರಲ್ಲಿ ಅರ್ಜುನ್ ಸರ್ಜಾ ನಟಿಸಿದ್ದ 'ಅಟ್ಟಹಾಸ' ಮೊದಲ ಸಿನಿಮಾವಾದರೆ, ಮತ್ತೊಂದು 2016ರಲ್ಲಿ ತೆರೆಕಂಡ ಶಿವರಾಜ್‌ ಕುಮಾರ್ ನಟನೆಯ 'ಕಿಲ್ಲಿಂಗ್ ವೀರಪ್ಪನ್'. ವಿಜಯನ್ Veerappan: Chasing the Brigand ' ಎಂಬ ಪುಸ್ತಕವನ್ನೂ ಬರೆದಿದ್ದು, ಇದರಲ್ಲಿ ಆಪರೇಷನ್ ವೀರಪ್ಪನ್ ಅನುಭವವನ್ನು ಹಂಚಿಕೊಂಡಿದ್ದಾರೆ.

ಒಂದೆಡೆ ಸ್ವಾತಂತ್ರ್ಯೋತ್ಸವ ಆಚರಣೆ; ಇನ್ನೊಂದೆಡೆ 6 ಪೊಲೀಸರ ನರಮೇಧ; ವೀರಪ್ಪನ್ ಅಟ್ಟಹಾಸದ ಆ ಒಂದು ಕ್ಷಣ...