ನವದೆಹಲಿ(ಜ.14): ಸಂಕ್ರಾತಿ ದಿನ ಬಿಜೆಪಿಯಲ್ಲಿ ಸಮ್ ಕ್ರಾಂತಿಯಾಗಿದೆ. ಕರ್ನಾಟಕದಲ್ಲಿ ಸಂಪುಟ ಪುನರ್ ರಚನೆಯಾಗೋ ಮೂಲಕ 7 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇನ್ನು ಉತ್ತರ ಪ್ರದೇಶದಲ್ಲಿ ಮಾಜಿ ಐಎಎಸ್ ಅಧಿಕಾರಿ ಅರವಿಂದ್ ಕುಮಾರ್ ಶರ್ಮಾ ಬಿಜೆಪಿ ಸೇರಿಕೊಂಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯ ನಂಬಿಕಸ್ಥ ಅಧಿಕಾರಿಯಾಗಿದ್ದ ಅರವಿಂದ್ ಕುಮಾರ್ ಶರ್ಮಾ, ನಿವೃತ್ತಿಯಾದ ಬಳಿಕ ಇದೀಗ ಬಿಜೆಪಿ ಸೇರಿಕೊಂಡಿದ್ದಾರೆ. 20 ವರ್ಷಗಳಿಂದ ನರೇಂದ್ರ ಮೋದಿಯ ನಂಬಕಸ್ಥ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಬಿಜೆಪಿ ಸೇರಿಕೊಂಡಿರುವ ಅರವಿಂದ್ ಕುಮಾರ್ ಶರ್ಮಾಗೆ ಪ್ರಮುಖ ಹುದ್ದೆ ನೀಡಲು ಉತ್ತರ ಪ್ರದೇಶ ಸರ್ಕಾರ ಮುಂದಾಗಿದೆ.

ಅರವಿಂದ್ ಕುಮಾರ್ ಶರ್ಮಾ ದಕ್ಷ ಅಧಿಕಾರಿಯಾಗಿ ಹೆಸರು ಮಾಡಿದ್ದಾರೆ. ಅವರ ಆಡಳಿತದ ಜ್ಞಾನ, ಅಭಿವೃದ್ಧಿಕಡೆಗೆ ಇರುವ ತುಡಿತ ಇದೀಗ ಬಿಜೆಪಿಗೆ ನೆರವಾಗಲಿದೆ. ರಾಜ್ಯ ಬಿಜೆಪಿ ಘಟಕ ಮಾಜಿ ಐಎಎಸ್ ಅಧಿಕಾರಿಯನ್ನು ಆತ್ಮೀಯವಾಗಿ ಸ್ವಾಗತಿಸಲಾಗಿದೆ ಎಂದು ಉತ್ತರ ಪ್ರದೇಶ ಬಿಜೆಪಿ ರಾಜ್ಯಾಧ್ಯಕ್ಷ ಸ್ವಾತಂತ್ರ ದೇವ್ ಸಿಂಗ್ ಹೇಳಿದ್ದಾರೆ. 

ಮೋದಿ ಗುಜರಾತ್ ಮುಖ್ಯಮಂತ್ರಿಯಾದಾಗಿನಿಂದ ಅರವಿಂದ್ ಕುಮಾರ್ ಶರ್ಮಾ  ಅವರ ಜೊತೆ ಕೆಲಸ ಮಾಡುತ್ತಿದ್ದಾರೆ. 2001ರಲ್ಲಿ ಸೆಕ್ರೆಟರಿಯಾಗಿ ಗುಜರಾತ್‌ನಲ್ಲಿ ತಮ್ಮ ಕತರ್ವ್ಯ ಆರಂಭಿಸಿದ ಶರ್ಮಾ ಇದೀಗ ನಿವೃತ್ತಿಯಾಗಿ ಬಿಜೆಪಿ ಸೇರಿಕೊಂಡಿದ್ದಾರೆ.