ಜೈಲಿನಿಂದಲೇ ಪರೀಕ್ಷೆ ಪಾಸ್ ಮಾಡಿದ್ದ ಹರ್ಯಾಣದ ಮಾಜಿ ಸಿಎಂ ಓಂ ಪ್ರಕಾಶ ಚೌಟಾಲಾ ನಿಧನ
ಹರ್ಯಾಣದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲಾ ತಮ್ಮ 89ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ನಾಲ್ಕು ಬಾರಿ ಹರಿಯಾಣದ ಮುಖ್ಯಮಂತ್ರಿಯಾಗಿದ್ದ ಅವರು, ಭಾರತದ 6ನೇ ಉಪ ಪ್ರಧಾನಿ ದೇವಿ ಲಾಲ್ ಅವರ ಪುತ್ರ. ಅವರ ರಾಜಕೀಯ ಜೀವನವು ವಿವಾದಗಳಿಂದ ಕೂಡಿತ್ತು, ಶಿಕ್ಷಕರ ನೇಮಕಾತಿ ಹಗರಣ ಸೇರಿದಂತೆ ಹಲವು ಆರೋಪಗಳನ್ನು ಎದುರಿಸಿದ್ದರು.
ಹರ್ಯಾಣದ ಮಾಜಿ ಮುಖ್ಯಮಂತ್ರಿ, ಐಎನ್‌ಎಲ್‌ಡಿ ನಾಯಕ ಓಂ ಪ್ರಕಾಶ ಚೌಟಾಲಾ ನಿಧನರಾಗಿದ್ದಾರೆ. ಅವರಿಗೆ 89 ವರ್ಷ ವಯಸ್ಸಾಗಿತ್ತು. ಗುರುಗ್ರಾಮದಲ್ಲಿರುವ ತಮ್ಮ ನಿವಾಸದಲ್ಲಿ ವಯೋಸಹಜ ಖಾಯಿಲೆಯಿಂದ ಇಹಲೋಕ ತ್ಯಜಿಸಿದ್ದಾರೆ. ಹರಿಯಾಣದ ಚೌಟಾಲಾದಲ್ಲಿ ಜನಿಸಿದ ಅವರು ಭಾರತದ 6ನೇ ಉಪ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ಚೌಧರಿ ದೇವಿ ಲಾಲ್ ಅವರ ಪುತ್ರರಾಗಿದ್ದಾರೆ.
ಇಂಡಿಯನ್ ನ್ಯಾಷನಲ್ ಲೋಕ ದಳದ (ಐಎನ್‌ಎಲ್‌ಡಿ) ಮುಖ್ಯಸ್ಥರಾಗಿದ್ದ ಚೌಟಾಲಾ ನಾಲ್ಕು ದಶಕಗಳಿಗಿಂತ ಹೆಚ್ಚು ಕಾಲ ರಾಜಕೀಯ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ನಾಲ್ಕು ಬಾರಿ ಹರಿಯಾಣದ ಮುಖ್ಯಮಂತ್ರಿಯಾಗಿದ್ದರು. ಹರ್ಯಾಣದ ಸಿಂಎಂ ಆಗಿ ಅವರ ಕೊನೆಯ ಅವಧಿ 1999ರಿಂದ 2005 ರವರೆಗೆ ಆಗಿತ್ತು.
ಪ್ರಭಾವಿ ರಾಜಕಾರಣಿಯಾಗುವುದರ ಜೊತೆಗೆ ಅವರು ವಿವಾದಗಳಿಂದಲೇ ಹೆಚ್ಚು ಸುದ್ದಿಯಲ್ಲಿದ್ದರು. ಮುಖ್ಯವಾಗಿ 2000ನೇ ಇಸವಿಯಲ್ಲಿ 3206 ಶಿಕ್ಷಕರನ್ನು ಅಕ್ರಮವಾಗಿ ನೇಮಿಸಿಕೊಂಡ ಆರೋಪ ಸಂಬಂಧ ಒ.ಪಿ.ಚೌಟಾಲಾ, ಅವರ ಪುತ್ರ ಅಜಯ್ ಚೌಟಾಲಾ ಮತ್ತು 55 ಜನರನ್ನು ದೋಷಿಗಳೆಂದು ಪರಿಗಣಿಸಿ 2015ರಲ್ಲಿ ಸುಪ್ರೀಂಕೋರ್ಟ್ ತೀರ್ಪು ನೀಡಿ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು.
ಇಷ್ಟು ಮಾತ್ರವಲ್ಲದೆ ಅಕ್ರಮ ಆಸ್ತಿಯ ಪ್ರಕರಣದಲ್ಲಿ, ದಿಲ್ಲಿ ವಿಶೇಷ ನ್ಯಾಯಾಲಯ 4 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಚೌಟಾಲಾ ಬಳಿಯಿರುವ 4 ಅಕ್ರಮ ಆಸ್ತಿಗಳನ್ನು ವಶಪಡಿಸಿಕೊಳ್ಳುವಂತೆ ಸಂಬಂಧಿತ ಅಧಿಕಾರಿಗಳಿಗೆ ಸೂಚನೆ ನೀಡಿತ್ತು. ಶಾಲಾ ಶಿಕ್ಷಕಿಯರ ನೇಮಕಾತಿ ವೇಳೆ ಭ್ರಷ್ಟಾಚಾರ ನಡೆಸಿದ ಆರೋಪದ ಮೇಲೆ 10 ವರ್ಷಗಳ ಶಿಕ್ಷೆ ಅನುಭವಿಸಿ ಬಂದ ಬಳಿಕ ಮತ್ತೆ 2022ರಲ್ಲಿ ಜೈಲಿಗೆ ಹೋಗುವಂತಾಯ್ತು. ತಿಹಾರ್ ಜೈಲಿನಲ್ಲಿ 10 ವರ್ಷಗಳ ಶಿಕ್ಷೆ ಅನುಭವಿಸುತ್ತಿದ್ದ ಸಂದರ್ಭದಲ್ಲಿ ತಮ್ಮ 82ನೇ ವಯಸ್ಸಿನಲ್ಲಿ 12ನೇ ತರಗತಿ ಪರೀಕ್ಷೆ ಬರೆದು ಫಸ್ಟ್ ಕ್ಲಾಸ್'ನಲ್ಲಿ ಪಾಸಾಗಿದ್ದರು.