* ತನಿಖೆಗೆ ಎಫ್‌ಬಿಐ ಬರುವವರೆಗೆ ಸುಮ್ಮನೆ ಕುಳಿತಿದ್ದೇಕೆ?* ಮೋದಿ ವ್ಯಾಲೆಟ್‌ಗೆ ಬಿಟ್ಕಾಯಿನ್ ಹೋಗಿದೆಯೇ?: ಸಿದ್ದು ಪ್ರಶ್ನೆ
ಬೆಂಗಳೂರು(ಏ.10): ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬಿಟ್‌ಕಾಯಿನ್ ಹಗರಣದ ಬಗ್ಗೆ ಚಿಂತಿಸಬೇಡಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಹೇಳಿದ್ದಾರೆ. ಹಾಗಾದರೆ ನರೇಂದ್ರ ಮೋದಿ ಅವರ ವ್ಯಾಲೆಟ್‌ಗೆ ಬಿಟ್‌ಕಾಯಿನ್‌ನ ಅಕ್ರಮ ವರ್ಗಾವಣೆ ಆಗಿದೆಯೇ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಇದೇ ವೇಳೆ ಬಿಟ್‌ಕಾಯಿನ್ ಹಗರಣದ ಬಗ್ಗೆ ಎಫ್‌ಬಿಐ ತನಿಖೆ ನಡೆಸುತ್ತಿರುವ ಬಗ್ಗೆ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದು, ಕೇಂದ್ರದ ಬಿಜೆಪಿ ಸರ್ಕಾರವು ಭಾರತಕ್ಕೆ ಎಫ್‌ಬಿಐ ಆಗಮಿಸಿ ತನಿಖೆ ಮಾಡುವ ಮಟ್ಟಕ್ಕೆ ಬಿಟ್ ಕಾಯಿನ್ ಪ್ರಕರಣವನ್ನು ಬಿಟ್ಟು ವಿಶ್ವಮಟ್ಟದಲ್ಲಿ ದೇಶದ ಮಾನ ಕಳೆದಿದೆ. ದೇಶವನ್ನು ನಾಚಿಕೆಗೇಡಿನ ಸ್ಥಿತಿಗೆ ತಂದು ನಿಲ್ಲಿಸಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ತನಿಖಾ ಸಂಸ್ಥೆಗಳ ಸಾಮರ್ಥ್ಯದ ಬಗ್ಗೆ ಪ್ರಶ್ನೆ ಎದ್ದಂತಾಗಿದೆ ಎಂದು ಕಿಡಿ ಕಾರಿದ್ದಾರೆ.
ದೇಶದ್ರೋಹಿಗಳನ್ನು ಬಯಲಿಗೆಳೆಯಿರಿ:
ಅಧಿಕಾರ ಹೊಂದಿರುವ ಕಾಣದ ಕೈಗಳು ವರ್ಗಾವಣೆಯಾದ ಬಿಟ್ ಕಾಯಿನ್‌ಗಳನ್ನು ಅಕ್ರಮ ಹಣ ವರ್ಗಾವಣೆ ಹಾಗೂ ಡ್ರಗ್ಸ್ ದಂಧೆಗೆ ಬಳಕೆ ಮಾಡಿರುವುದಾಗಿ ಹೇಳಲಾಗಿದೆ. ಇದು ಭಯೋತ್ಪಾದಕರಿಗೆ ಅಕ್ರಮ ಹಣ ವರ್ಗಾವಣೆ ಮಾಡುವ ಅಪರಾಧಕ್ಕಿಂತಲೂ ಯಾವ ರೂಪದಲ್ಲೂ ಕಡಿಮೆ ಅಪರಾಧವಲ್ಲ. ಈ ಕೃತ್ಯಗಳು ಸಾಬೀತಾದರೆ ಖಂಡಿತ ನಿಜವಾದ ದೇಶದ್ರೋಹಿಗಳು ಬಯಲಾಗಲಿದ್ದಾರೆ. ಹೀಗಾಗಿ ಕೇಂದ್ರ ಸರ್ಕಾರ ಶೀಘ್ರವಾಗಿ ಈ ದೇಶದ್ರೋಹಿಗಳನ್ನು ಬಯಲಿಗೆಳೆಯಬೇಕು ಎಂದು ಒತ್ತಾಯ ಮಾಡಿದ್ದಾರೆ.
ರಾಷ್ಟ್ರೀಯ ಬಿಜೆಪಿ ನಾಯಕರಿಗೆ ಮುಂದೆ ಬಂದು ಬಿಟ್‌ಕಾಯಿನ್ ಹಗರಣದಲ್ಲಿ ತಮ್ಮ ಪಾತ್ರವಿಲ್ಲ ಎಂದು ಹೇಳಲು ಇದು ಸೂಕ್ತ ಸಮಯ. ಇಲ್ಲದಿದ್ದರೆ ಎಫ್‌ಬಿಐ ಸಂಸ್ಥೆಯು ಬಿಜೆಪಿ ನಾಯಕರನ್ನು ಪ್ಯಾಬ್ಲೊ ಎಸ್ಕೊಬಾರ್, ಎಲ್ ಹ್ಯೂವೊ ಮುಂತಾದ ಜಾಗತಿಕ ಮಟ್ಟದ ಆರ್ಥಿಕ ಅಪರಾಧಿಗಳ ಮಾದರಿಯಲ್ಲಿ ಬ್ರ್ಯಾಂಡ್ ಮಾಡಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.
ಇದೇ ವೇಳೆ ರಾಜ್ಯದ ನಾಯಕರ ಬಗ್ಗೆಯೂ ಕಿಡಿ ಕಾರಿರುವ ಅವರು, ರಾಜ್ಯ ಬಿಜೆಪಿಯು ಯಾವುದೇ ವಿಷಯಕ್ಕೆ ಬಣ್ಣ ಬಳಿಯಲು ಸದಾ ಕಾಯುತ್ತಿರುತ್ತದೆ. ಈ ಬಿಟ್‌ಕಾಯಿನ್ ಎಂಬ ‘ವೈಟ್ ಕಲರ್ ಕಾಲರ್’ ಹಗರಣಕ್ಕೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಯಾವ ಬಣ್ಣವನ್ನು ಬಳಿಯುತ್ತಾರೆ ಎಂದು ಪ್ರಶ್ನಿಸಿದ್ದಾರೆ.
