ನವದೆಹಲಿ(ಸೆ.13): ಬಿಹಾರದ ದಿಗ್ಗಜ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ರಘುವಂಶ್ ಪ್ರಸಾದ್ ಸಿಂಗ್ ನಿಧನರಾಗಿದ್ದಾರೆ. ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ. 

ಇತ್ತೀಚೆಗಷ್ಟೇ ಮಾಜಿ ಕೇಂದ್ರ ಸಚಿವ ರಘುವಂಶ್ ಪ್ರಸಾದ್ ಸಿಂಗ್ ಆರೋಗ್ಯದಲ್ಲಿ ಏರುಪೇರಾಗಿದ್ದು, ಚಿಕಿತ್ಸೆಗಾಗಿ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಶುಕ್ರವಾರ ತಡೆರಾತ್ರಿ ಆರೋಗ್ಯ ಮತ್ತಷ್ಟು ಹದಗೆಟ್ಟಿದ್ದು, ವೆಂಟಿಲೇಟರ್‌ಸಪೋರ್ಟ್‌ನಲ್ಲಿರಿಸಲಾಗಿತ್ತು. ಹೀಗಿದ್ದರೂ ಅವರ ಆರೋಗ್ಯ ಸುಧಾರಿಸಿರಲಿಲ್ಲ. ಹೀಗಿರುವಾಗ ಭಾನುವಾರ ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.

ರಘುವಂಶ್ ಪ್ರಸಾದ್ ಸಿಂಗ್ ಬಿಹಾರದ ಅಗ್ರ ನಾಯಕರಾಗಿ ಗುರುತಿಸಿಕೊಂಡವರು. ಇನ್ನು ಆರೋಗ್ಯ ಹದಗೆಟ್ಟು ಏಮ್ಸ್‌ಗೆ ದಾಖಲಾಗಿದ್ದ ಮಾಜಿ ಸಚಿವರು ಗುರುವಾರ ಆರ್‌ಜೆಡಿ ನಾಯಕ ಲಾಲೂ ಪ್ರಸಾದ್ ಯಾದವ್‌ರಗೆ ಪತ್ರವೊಂದನ್ನು ಬರೆದಿದ್ದರು. ಇದರಲ್ಲಿ ಅವರು ತಾನು ಆರ್‌ಜೆಡಿಗೆ ವಿದಾಯ ಹೇಳುವುದಾಗಿ ಘೋಷಿಸಿದ್ದರು.

ಆದರೆ ಪಕ್ಷಕ್ಕೆ ರಾಜೀನಾಮೆ ನೀಡುವ ಕುರಿತಾಗಿ ಬರೆದ ಪತ್ರವನ್ನು ಲಾಲೂ ಪ್ರಸಾದ್ ಯಾದವ್ ತಿರಸ್ಕರಿಸಿದ್ದರು ಹಾಗೂ ಅವರ ಮನವೊಲಿಸುವ ಯತ್ನ ನಡೆಸಿದ್ದರು. ಇನ್ನು ರಘುವಂಶ್ ಪ್ರಸಾದ್ ಸಿಂಗ್ ಅತ್ತ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ರವರಿಗೂ ಪತ್ರವೊಂದನ್ನು ಬರೆದು ಮೂರು ಬೇಡಿಕೆಗಳನ್ನಿಟ್ಟಿದ್ದರು. ಆದರೀಗ ಬಿಹಾರ ಚುನಾವಣೆ ಹೊಸ್ತಿಲಲ್ಲೇ ರಘುವಂಶ್ ಪ್ರಸಾದ್ ಸಿಂಗ್ ಕೊನೆಯುಸಿರೆಳೆದಿದ್ದಾರೆ.