ಕಳೆದ ವರ್ಷದಂತೆ ಸುಗ್ರೀವಾಜ್ಞೆ ಮೂಲಕ ಬಜೆಟ್‌ಗೆ ಅನುಮೋದನೆ ಪಡೆದ ಆಂಧ್ರ| ಚುನಾವಣೆಗಳ ಹಿನ್ನೆಲೆಯಲ್ಲಿ ಅಧಿವೇಶನ ಕರೆಯಲು ನಕಾರ| ಸಚಿವರಿಗೆ ಆನ್‌ಲೈನ್‌ನಲ್ಲಿ ಬಜೆಟ್‌ ಪ್ರತಿಗಳ ಪೂರೈಕೆ

ಅಮರಾವತಿ(ಮಾ.29): ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್‌ ಮೋಹನ್‌ ರೆಡ್ಡಿ ಅವರು ಸುಗ್ರೀವಾಜ್ಞೆ ಮೂಲಕವೇ 2021-22ನೇ ಸಾಲಿನ ಬಜೆಟ್‌ಗೆ ಮಂಡಿಸಿದ್ದಾರೆ. ಕೊರೋನಾ ಕಾರಣಕ್ಕೆ ಕಳೆದ ವರ್ಷವೂ ಅಂದರೆ 2020-21ನೇ ಸಾಲಿನಲ್ಲೂ ಇದೇ ರೀತಿ ಸುಗ್ರೀವಾಜ್ಞೆಯಿಂದಲೇ ಬಜೆಟ್‌ ಅನುಮೋದನೆ ಪಡೆಯಲಾಗಿತ್ತು.

ಏಪ್ರಿಲ್‌ನಿಂದ ಆರಂಭವಾಗಲಿರುವ ನೂತನ ವಿತ್ತೀಯ ವರ್ಷದ ಕೆಲ ತಿಂಗಳುಗಳ ಕಾಲ ವಿನಿಯೋಗಕ್ಕಾಗಿ ರಾಜ್ಯದ ಬೊಕ್ಕಸದಿಂದ ಹಣ ಪಡೆಯಲು ಅನುಮತಿಸುವ ಸುಗ್ರೀವಾಜ್ಞೆಗೆ ರಾಜ್ಯಪಾಲ ವಿಶ್ವಭೂಷಣ್‌ ಹರಿಚಂದ್ರನ್‌ ಅವರು ಅನುಮೋದಿಸಿದ್ದಾರೆ.

ತಿರುಪತಿ ಲೋಕಸಭೆ ಕ್ಷೇತ್ರದ ಉಪ ಚುನಾವಣೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆಯಲ್ಲಿ ಮಾ.31ರ ಒಳಗೆ ವಿಧಾನಸಭೆ ಅಧಿವೇಶನ ನಡೆಸದೇ ಇರಲು ನಿರ್ಧರಿಸಿದೆ. ಹೀಗಾಗಿ ಮುಖ್ಯಮಂತ್ರಿ ಕಚೇರಿಯು ಆನ್‌ಲೈನ್‌ ಮೂಲಕ ಬಜೆಟ್‌ ಪ್ರತಿಗಳನ್ನು ಸಚಿವರಿಗೆ ರವಾನಿಸಿದ್ದು, ಈ ಸುಗ್ರೀವಾಜ್ಞೆಯನ್ನು ಸಚಿವ ಸಂಪುಟವೂ ಅನುಮೋದಿಸಿದೆ. ಈ ಮಾಹಿತಿಯನ್ನು ರಾಜ್ಯಪಾಲರಿಗೆ ರವಾನಿಸಲಾಗಿದ್ದು, ಸುಗ್ರೀವಾಜ್ಞೆಗೆ ರಾಜ್ಯಪಾಲರು ಭಾನುವಾರ ಸಮ್ಮತಿ ಸೂಚಿಸಿದ್ದಾರೆ.