ಪ್ರಧಾನಿ ಮೋದಿ ಸರ್ಕಾರದ ವಿರುದ್ಧದ ಅಪಪ್ರಚಾರ ಎದುರಿಸಲು ಮತ್ತು 2029ರ ಚುನಾವಣೆಯಲ್ಲಿ ಮೋದಿಯವರನ್ನು ಬೆಂಬಲಿಸಲು ಗುಜರಾತ್‌ನ ಕಾನ್‌ಸ್ಟೆಬಲ್ ರಾಮಗರ್ ಗೋಸಾಯಿ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ. ಮುಂದೆ ಅವರ ನಡೆ ಏನು ಅನ್ನೋ ವಿವರ ಈ ಸ್ಟೋರಿಯಲ್ಲಿದೆ.

ಗಾಂಧಿನಗರ: ಪ್ರಧಾನಿ ನರೇಂದ್ರ ಮೋದಿ ಮೇಲಿನ ಅಭಿಮಾನ ಮತ್ತು ಅವರ ಸಿದ್ಧಾಂತಗಳನ್ನು ಬೆಂಬಲಿಸಲು ವ್ಯಕ್ತಿಯೊಬ್ಬರು ತಾವು ಕಷ್ಟಪಟ್ಟು ಪಡೆದಿದ್ದ ಸರ್ಕಾರಿ ಕೆಲಸವನ್ನೇ ತ್ಯಾಗ ಮಾಡಿರುವ ಅಪರೂಪದ ಘಟನೆ ಗುಜರಾತ್‌ನಲ್ಲಿ ನಡೆದಿದೆ. ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಗಳ ನಂತರ ಸರ್ಕಾರದ ವಿರುದ್ಧ ಸೃಷ್ಟಿಯಾಗಿರುವ ಅಪಪ್ರಚಾರವನ್ನು ಎದುರಿಸಲು ಈ ಕಾನ್‌ಸ್ಟೆಬಲ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ಯಾರಿದು ಕಾನ್‌ಸ್ಟೆಬಲ್?

ಗುಜರಾತ್‌ನ ಪೂರ್ವ ಕಚ್‌ನ ಅದೇಶರ್ ಪೊಲೀಸ್ ಠಾಣೆಯಲ್ಲಿ ಕಾನ್‌ಸ್ಟೆಬಲ್ ಆಗಿ ಸೇವೆ ಸಲ್ಲಿಸುತ್ತಿದ್ದ ರಾಮಗರ್ ಮೋಹನ್ ಗರ್ ಗೋಸಾಯಿ ರಾಜೀನಾಮೆ ನೀಡಿದ ಅಧಿಕಾರಿ. ತಾವು ಬಹಳ ಕಷ್ಟಪಟ್ಟು ಮತ್ತು ಶ್ರದ್ಧೆಯಿಂದ ಸರ್ಕಾರಿ ಕೆಲಸವನ್ನು ಗಿಟ್ಟಿಸಿಕೊಂಡಿದ್ದಾಗಿ ಹೇಳಿಕೊಂಡಿರುವ ಅವರು, ಈಗ ರಾಷ್ಟ್ರದ ಹಿತದೃಷ್ಟಿಯಿಂದ ಅದನ್ನು ಬಿಡುತ್ತಿರುವುದಾಗಿ ತಿಳಿಸಿದ್ದಾರೆ.

ಇತ್ತೀಚೆಗೆ ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಪಕ್ಷಗಳು ನಡೆಸಿದ ಪ್ರತಿಭಟನೆ ಮತ್ತು ಸರ್ಕಾರದ ವಿರುದ್ಧ ಹರಡುತ್ತಿರುವ ನೆಗೆಟಿವ್ ನ್ಯಾರೇಟಿವ್‌ಗಳನ್ನು ಎದುರಿಸುವುದು ತಮ್ಮ ನೈತಿಕ ಕರ್ತವ್ಯ ಎಂದು ಗೋಸಾಯಿ ಭಾವಿಸಿದ್ದಾರೆ. ಈ ಕುರಿತು ವಿಡಿಯೋ ಸಂದೇಶ ಬಿಡುಗಡೆ ಮಾಡಿರುವ ಅವರು, ಜಂತರ್ ಮಂತರ್ ಪ್ರತಿಭಟನೆಯ ನಂತರ ಮೋದಿ ಸಾಹೇಬರು ಯುವಕರ ಪರವಾಗಿ ತೆಗೆದುಕೊಂಡ ನಿರ್ಧಾರಗಳನ್ನು ನಾನು ಸ್ವಾಗತಿಸುತ್ತೇನೆ. ಇನ್ಮುಂದೆ ನಾನು ಸರ್ಕಾರಿ ನೌಕರನಾಗಿ ಇರದೆ ಮೋದಿ ಸರ್ಕಾರ ಮತ್ತು ಆರ್‌ಎಸ್‌ಎಸ್ (RSS) ಬೆಂಬಲಿಸಲು ನನ್ನ ಜೀವನವನ್ನು ಮುಡಿಪಾಗಿಡುತ್ತೇನೆ ಎಂದು ಘೋಷಿಸಿದ್ದಾರೆ.

ಬರೀ ರಾಜೀನಾಮೆ ನೀಡುವುದು ಮಾತ್ರವಲ್ಲದೆ 2029ರ ಲೋಕಸಭಾ ಚುನಾವಣೆಯವರೆಗೂ ತಾವು ಕಟ್ಟುನಿಟ್ಟಾದ ವೈಯಕ್ತಿಕ ಪ್ರತಿಜ್ಞೆಗಳನ್ನು ಪಾಲಿಸುವುದಾಗಿ ಅವರು ತಿಳಿಸಿದ್ದಾರೆ. ನಿಸ್ವಾರ್ಥ ಸೇವೆ ಮಾಡುವ ಆರ್‌ಎಸ್‌ಎಸ್ ಸಂಘಟನೆಯ ಮೂಲಕ ಮೋದಿ ಅವರ ಕೈ ಬಲಪಡಿಸುವುದು ಇವರ ಮುಖ್ಯ ಗುರಿಯಾಗಿದೆ.

ನಾನು ಇನ್ಮುಂದೆ ಯಾವುದೇ ವೈಯಕ್ತಿಕ ಹಿತಾಸಕ್ತಿ ಇಲ್ಲದೆ ರಾಷ್ಟ್ರ ಸೇವೆಯಲ್ಲಿ ತೊಡಗಿಸಿಕೊಳ್ಳುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸೇವಕನಾಗಿ ಕೆಲಸ ಮಾಡುತ್ತೇನೆ ಎಂದು ಗೋಸಾಯಿ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಕಷ್ಟಪಟ್ಟು ಸಿಕ್ಕ ಕೆಲಸವನ್ನು ಕೇವಲ ಸಿದ್ಧಾಂತಕ್ಕಾಗಿ ಬಿಟ್ಟ ಗೋಸಾಯಿ ಅವರ ನಿರ್ಧಾರ ಈಗ ಗುಜರಾತ್ ಸೇರಿದಂತೆ ದೇಶಾದ್ಯಂತ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ.