ದೇಶದ ಹಲವು ರಾಜ್ಯದಲ್ಲಿ ಭಾರಿ ಮಳೆಯಾಗುತ್ತಿದ್ದು, ರಸ್ತೆಗಳು ಜಲಾವೃತಗೊಂಡಿದೆ. ಇದರ ನಡುವೆ ಫುಡ್ ಡೆಲಿವರಿ ಎಜೆಂಟ್ಸ್ ಸಾಹಸ ಮಾಡಿ ಡೆಲಿವರಿ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಹಲವರು ಡೆಲಿವರಿ ಎಜೆಂಟ್ ಸವಾಲುಗಳ ಕುರಿತು ಆತಂಕ ವ್ಯಕ್ತಪಡಿಸಿದ್ದಾರೆ.

ನವದೆಹಲಿ (ಆ.19) ಮಳೆ ಇರಲಿ, ಮಧ್ಯರಾತ್ರಿಯೇ ಆಗಲಿ ಮನೆಯಲ್ಲಿ ಕುಳಿತು ಕ್ಲಿಕ್ ಮಾಡಿದರೆ ಸಾಕು ಏನು ಬೇಕಾದರೂ ಮನೆಗೆ ಬರುತ್ತದೆ. ಮನೆಗೆ ಡೆಲಿವರಿ ನಿಮಿಷಗಳಲ್ಲಿ ಆಗಲಿದೆ. ಈ ಪೈಕಿ ಫುಡ್ ಡೆಲಿವರಿ ತ್ವರಿತವಾಗಿ ಮಾಡಲಾಗುತ್ತದೆ. ಹಲವು ಆ್ಯಪ್ ಆಧಾರಿತ ಸಂಸ್ಥೆಗಳು ಸೇವೆ ನೀಡುತ್ತಿದೆ. ಕ್ಲಿಕ್ ಮಾಡಿದೆ ಕೆಲವೆ ನಿಮಿಷಗಳಲ್ಲಿ ಫುಡ್ ಡೆಲಿವರಿ ಎಜೆಂಟ್ಸ್ ತುರ್ತಾಗಿ ಆಹಾರ ಅಥವ ವಸ್ತುಗಳನ್ನು ಮನೆಗೆ ತಲುಪಿಸುತ್ತಾರೆ. ಆದರೆ ಹೀಗೆ ಫುಡ್ ಡೆಲಿವರಿ ಮಾಡುವಾಗ ಡೆಲಿವರಿ ಎಜೆಂಟ್ಸ್ ಎದುರಿಸುವ ಸವಾಲು ಹೆಚ್ಚು ಸುದ್ದಿಯಾಗುವುದಿಲ್ಲ. ಇದೀಗ ಭಾರಿ ಮಳೆ ನಡುವೆ, ರಸ್ತೆಗಳು ಸಂಪೂರ್ಣ ಜಲಾವೃತಗೊಂಡಿದ್ದರೂ, ಡೆಲಿವರಿ ಎಜೆಂಟ್ ತಕ್ಕ ಸಮಯಕ್ಕೆ ಫುಡ್ ಡೆಲಿವರಿ ಮಾಡಿದ್ದಾರೆ. ಈ ಫುಡ್ ಡೆಲಿವರಿ ಎಜೆಂಟ‌ಗಳ ವಿಡಿಯೋ ಭಾರಿ ಸದ್ದು ಮಾಡುತ್ತಿದೆ.

ನೀರು ತುಂಬಿದ ರಸ್ತೆ ಮೂಲಕ ಡೆಲಿವರಿ

ದೆಹಲಿಯಲ್ಲಿ ಭಾರಿ ಮಳೆಗೆ ಹಲವು ರಸ್ತೆಗಳು ಜಲಾವೃತಗೊಂಡಿದೆ. ಇದರ ನಡುವೆ ಫುಡ್ ಡೆಲಿವರಿ ಎಜೆಂಟ್ ಡೆಲಿವರಿ ಮಾಡುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ನೀರು ತುಂಬಿದ ಅಪಾಯಾಕಾರಿ ರಸ್ತೆಯಲ್ಲಿ ಆಹಾರ ಪ್ಯಾಕೆಟ್ ಹಿಡಿದು ಸಾಗುತ್ತಿರುವ ಡಿಲಿವರಿ ಎಜೆಂಟ್ ದೃಶ್ಯ ಎಲ್ಲೆಡೆ ಸಾಮಾನ್ಯವಾಗಿದೆ. ಮಳೆ, ಪ್ರವಾಹದ ನಡುವೆಯೂ ಡೆಲಿವರಿ ಎಜೆಂಟ್ ತಕ್ಕ ಸಮಯಕ್ಕೆ ಆಹಾರ ತಲುಪಿಸುತ್ತಿರುವ ಈ ದಶ್ಯ ಹಲವರ ಆತಂಕಕ್ಕೆ ಕಾರಣವಾಗಿದೆ.

ಅಪಾಯ ಲೆಕ್ಕಿಸಿದೇ ಡೆಲಿವರಿ

ಕವಿ ಶರ್ಮಾ ಅನ್ನೋ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ದೆಹಲಿಯ ಭಾರಿ ಮಳೆಯಲ್ಲಿ ತುಂಬಿ ಹೋಗಿರುವ ರಸ್ತೆ ಮೂಲಕ ಜೊಮ್ಯಾಟೋ, ಬ್ಲಿಂಕಿಟ್, ಸ್ವಿಗ್ಗಿ ಸೇರಿದಂತೆ ಹಲವು ಡೆಲಿವರಿ ಎಜೆಂಟ್‌ಗಳು ಹರಸಾಹಸ ಮಾಡಿ ಡೆಲಿವರಿ ಮಾಡುತ್ತಿದ್ದಾರೆ. ರಸ್ತೆಯಲ್ಲಿ ಆಳಿನ ಅರ್ಧ ಭಾಗದಷ್ಟು ನೀರು ತುಂಬಿಕೊಂಡಿದೆ. ಬಸ್ಸು, ಲಾರಿ ವಾಹನಗಳು ತೆರಳಿದಾಗ ಪಕ್ಕದಲ್ಲಿ ಬೈಕ್ ಇದ್ದರೆ ತೇಲಿ ಹೋಗುವ ಅಪಾಯವೂ ಇದೆ. ಇದರ ನಡುವೆ ಡೆಲಿವರಿ ಎಜೆಂಟ್ ಫುಡ್ ತಲುಪಿಸುತ್ತಿದ್ದಾರೆ. ಅಪಾಯವನ್ನೂ ಲೆಕ್ಕಿಸದೇ ಡೆಲಿವರಿ ಮಾಡುತ್ತಿದ್ದಾರೆ.

ನೀವು ಫುಡ್ ಆರ್ಡರ್ ಮಾಡಿದ ಬಳಿಕ ವಾತಾವರಣ ಹೇಗಿದೆ, ರಸ್ತೆ ಜಲಾವೃತಗೊಂಡಿದೆಯಾ ಅನ್ನೋದು ನೋಡುವುದಿಲ್ಲ. ಹೀಗಾಗಿ ಡೆಲಿವರಿ ಎಜೆಂಟ್ ಮಳೆಯಲ್ಲಿ ನೆನೆದು,ಸಾಹಸದ ಮೂಲಕ ಫುಡ್ ಡೆಲಿವರಿ ಮಾಡಿದಾಗ ಒಂದು ಗ್ಲಾಸ್ ನೀರು ಕೊಡಲು ಮರೆಯದಿರಿ ಎಂದು ಕವಿ ಶರ್ಮಾ ಬರೆದುಕೊಂಡಿದ್ದಾರೆ.

ಡೆಲಿವರಿ ಎಜೆಂಟ್‌ಗಳಿಗೆ ಪ್ರತಿ ಡೆಲಿವರಿ ತಕ್ಕ ಸಮಯದಲ್ಲಿ ತಲುಪಿಸದರೆ ಮಾತ್ರ ಆದಾಯ. ಹೀಗಾಗಿ ಅವರು ಅಪಾಯ ಲೆಕ್ಕಿಸದೇ ಕೆಲಸ ಮಾಡುತ್ತಾರೆ. ಉತ್ತಮ ಚರಂಡಿ ವ್ಯವಸ್ಥೆ, ಸರಿಯಾದ ರಸ್ತೆಗಳಿದ್ದರೆ ಈ ರೀತಿಯ ಸಮಸ್ಯೆ ಇರುವುದಿಲ್ಲ. ಸರ್ಕಾರದ ಕೆಟ್ಟ ಯೋಜನೆಗಳಿಂದ ಡೆಲಿವರಿ ಎಜೆಂಟ್ ಅಪಾಯ ಎದುರಿಸುವಂತಾಗಿದೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ.

View post on Instagram