'ಹಾವನ್ನು ಸಾಕಿದ್ದೀರಿ, ಅದು ನಿಮ್ಮನ್ನೂ ಕೂಡ ಕಚ್ಚಬಹುದು..' ಪಾಕಿಸ್ತಾನಕ್ಕೆ ಮಾತಿನಲ್ಲೇ ತಿವಿದ ಜೈಶಂಕರ್!
ನಾವು ನೀಡುವ ಸಲಹೆಯನ್ನು ನೀವು ಪಾಲಿಸಿ, ಒಳ್ಳೆಯ ನೆರೆಹೊರೆಯವರಾಗಿ. ಇಂದು ಜಗತ್ತು ಪಾಕಿಸ್ತಾನವನ್ನು ಭಯೋತ್ಪಾದನೆಯಯ ಕೇಂದ್ರವನ್ನಾಗಿ ಕಾಣುತ್ತಿದೆ. ಯಾಕೆಂದರೆ, ಅಂಥಾ ಹಾವನ್ನು ನೀವು ಸಾಕಿದ್ದೀರಿ. ಆದರೆ, ನಿಮಗೆ ನೆನಪಿರಲಿ ಈ ಹಾವು ನಿಮ್ಮನ್ನು ಕೂಡ ಕಚ್ಚಬಹುದು ಎಂದು ವಿದೇಶಾಂಗ ಇಲಾಖೆ ಸಚಿವ ಎಸ್.ಜೈಶಂಕರ್ ಹೇಳಿದ್ದಾರೆ.
ನ್ಯೂಯಾರ್ಕ್ (ಡಿ.16): ಭಯೋತ್ಪಾದನೆಯ ಪೋಷಕ ಸ್ಥಾನದಲ್ಲಿ ಕುಳಿತಿರುವ ಪಾಕಿಸ್ತಾನದ ಕುರಿತಾಗಿ ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಗುರುವಾರ ರಾತ್ರಿ ವಿಶ್ವಸಂಸ್ಥೆಯಲ್ಲಿ ಎಚ್ಚರಿಕೆಯ ಮಾತುಗಳನ್ನು ಆಡಿದ್ದಾರೆ. ಭಯೋತ್ಪಾದನೆಯನ್ನು ಹಾವಿಗೆ ಹೋಲಿಸಿ ಮಾತನಾಡಿದ ಜೈಶಂಕರ್, ಹಾವನ್ನು ಸಾಕುತ್ತಿರುವವರು, ಅದು ಬೇರೆಯವರಿಗೆ ಕಚ್ಚಲಿ ಎಂದು ಅಶಿಸಬಹುದು. ಆದರೆ, ಅದು ಸಾಕಿದವರನ್ನೂ ಕಚ್ಚುತ್ತದೆ ಎನ್ನುವುದು ನೆನಪಿರಲಿ ಎಂದು ಪಾಕಿಸ್ತಾನಕ್ಕೆ ಹೇಳಿದ್ದಾರೆ. ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ಸಭೆಯಲ್ಲಿ ಪಾಕಿಸ್ತಾನದ ಸಚಿವೆ ಹೀನಾ ರಬ್ಬಾನಿ, ಭಾರತವೇ ಜಗತ್ತಿಗೆ ಭಯೋತ್ಪಾದನೆಯನ್ನು ಹರಡುತ್ತಿದೆ ಎಂದು ಹೇಳಿಕೆ ನೀಡಿದ್ದರು. ಹೀನಾ ರಬ್ಬಾನಿ ಅವರ ಮಾತಿಗೆ ಎಸ್.ಜೈಶಂಕರ್ ಹಿಲರಿ ಕ್ಲಿಂಟನ್ 11 ವರ್ಷದ ಹಿಂದೆ ಹೇಳಿದ್ದ ಹೇಳಿಕೆಯನ್ನು ನೆನಪಿಸಿ ಟಾಂಗ್ ನೀಡಿದ್ದರು. ಅಂದು ಅಮೆರಿಕದ ರಕ್ಷಣಾ ಸಚಿವೆಯಾಗಿದ್ದ ಹಿಲರಿ ಕ್ಲಿಂಟನ್, 2011ರಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದರು. ಈ ವೇಳೆ ಅವರು, ನೀವು ಹಾವನ್ನು ಪಾಲನೆ ಮಾಡುತ್ತೀರಿ ಎಂದಾದಲ್ಲಿ, ಇದು ಕೇವಲ ನೆರೆಹೊರೆಯವರನ್ನು ಕಚ್ಚುತ್ತದೆ ಎಂದು ಭಾವಿಸಬೇಡಿ. ಇದು ನಿಮ್ಮ ಜನರನ್ನೂ ಕೂಡ ಕಚ್ಚುತ್ತದೆ ಎಂದು ಹೇಳಿದ್ದನ್ನು ನೆನಪಿಸಿದರು.
ಜಗತ್ತು ಮೂರ್ಖವಾಗಿಲ್ಲ, ಉತ್ತಮ ನೆರೆಹೊರೆಯವರಾಗಿ ಬದುಕಿ: ಜಗತ್ತು ಮೂರ್ಖವಲ್ಲ ಎಂದು ಜೈಶಂಕರ್ ಹೇಳಿದ್ದಾರೆ. ಭಯೋತ್ಪಾದನೆಯಲ್ಲಿ ತೊಡಗಿರುವ ದೇಶ, ಸಂಘಟನೆ ಮತ್ತು ಅದನ್ನು ನಿಗ್ರಹಿಸಲು ಪ್ರಯತ್ನಿಸುತ್ತಿರುವ ಬಗ್ಗೆ ಜಗತ್ತಿಗೆ ಚೆನ್ನಾಗಿ ತಿಳಿದಿದೆ. ಇಂದು ಜಗತ್ತು ಪಾಕಿಸ್ತಾನವನ್ನು ಭಯೋತ್ಪಾದನೆಯ ಕೇಂದ್ರವಾಗಿ ನೋಡುತ್ತಿದೆ. ಅಂದಹಾಗೆ, ಪಾಕಿಸ್ತಾನವು ಸರಿಯಾದ ಸಲಹೆಯನ್ನು ಇಷ್ಟಪಡುವುದಿಲ್ಲ. ಆದರೆ ಇನ್ನೂ ನನ್ನ ಸಲಹೆ ಏನೆಂದರೆ ನೀವು ಇದನ್ನೆಲ್ಲ ಬಿಟ್ಟು ಉತ್ತಮ ನೆರೆಹೊರೆಯವರಾಗಲು ಪ್ರಯತ್ನಿಸಿ ಎಂದು ಮಾತಿನಲ್ಲಿಯೇ ತಿವಿದಿದ್ದಾರೆ.
ಭಯೋತ್ಪಾದನೆ ಯಾವಾಗ ಮುಗಿಯುತ್ತೆ ಅನ್ನೋದನ್ನ ಪಾಕಿಸ್ತಾನವೇ ತಿಳಿಸಬೇಕು: ವಿಶ್ವಸಂಸ್ಥೆಯ ಭದ್ರತಾ ಸಮಿತಿ ಸುದ್ದಿಗೋಷ್ಠಿಯಲ್ಲಿ ಪಾಕಿಸ್ತಾನಿ ಪತ್ರಕರ್ತರೊಬ್ಬರು ಜೈಶಂಕರ್‌ಗೆ ಭಯೋತ್ಪಾದನೆ ಯಾವಾಗ ಕೊನೆಗೊಳ್ಳುತ್ತದೆ ಎಂದು ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಜೈಶಂಕರ್, ನೀವು ನನಗೆ ಈ ಪ್ರಶ್ನೆಯನ್ನು ಕೇಳುತ್ತಿದ್ದರೆ, ಖಂಡಿತವಾಗಿ ನೀವು ತಪ್ಪಾದ ಸಚಿವರ ಜೊತೆ ಮಾತನಾಡುತ್ತಿದ್ದೀರಿ. ಇದೇ ಪ್ರಶ್ನೆಯನ್ನು ನೀವು ಪಾಕಿಸ್ತಾನದ ಮಂತ್ರಿಗಳಿಗೆ ಕೇಳಬೇಕು. ಭಯೋತ್ಪಾದನೆಯಲ್ಲಾ ಯಾವಾಗ ಕೊನೆಗೊಳ್ಳುತ್ತದೆ ಎನ್ನುವ ವಿಚಾರಕ್ಕೆ ಅವರು ಮಾತ್ರವೇ ಉತ್ತರಿಸಬಲ್ಲರು. ಭಯೋತ್ಪಾದನೆಗೆ ಉತ್ತೇಜನ ಯಾವಾಗ ನಿಲ್ಲುತ್ತದೆ ಎಂದು ಅವರಿಗೆ ಕೇಳಿ ಎಂದು ಹೇಳಿದರು.
ಯುದ್ಧ ಸ್ಥಗಿತಕ್ಕೆ ರಷ್ಯಾ-ಉಕ್ರೇನ್ ನಡುವೆ ಭಾರತ ಸಂಧಾನ?
ಭಯೋತ್ಪಾದನೆಗೆ ಯಾವುದೇ ಮಿತಿಯಿಲ್ಲ: ಭಯೋತ್ಪಾದನೆಯನ್ನು ಎದುರಿಸಲು ಹೊಣೆಗಾರಿಕೆಯೇ ಆಧಾರವಾಗಬೇಕು ಎಂದು ವಿದೇಶಾಂಗ ಸಚಿವ ಜೈಶಂಕರ್ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಭಯೋತ್ಪಾದನೆ ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆಗೆ ಅಪಾಯವಾಗಿದೆ. ಅದಕ್ಕೆ ಯಾವುದೇ ಗಡಿ ಅಥವಾ ರಾಷ್ಟ್ರೀಯತೆಗಳ ಭೇಧವಿಲ್ಲ. ಇದು ನಮಗೆ ಒಂದು ಸವಾಲಾಗಿದೆ, ಇದನ್ನು ಅಂತರರಾಷ್ಟ್ರೀಯ ಸಮುದಾಯವು ಒಟ್ಟಾಗಿ ಎದುರಿಸಬೇಕು. ಭಯೋತ್ಪಾದನೆಯು ಜಗತ್ತಿನಲ್ಲಿ ಗಂಭೀರ ಸ್ವರೂಪವನ್ನು ಪಡೆಯುವ ಮುಂಚೆಯೇ, ಭಾರತವು ಗಡಿಯಾಚೆಯಿಂದ ಅದನ್ನು ಎದುರಿಸಿತು. ದಶಕಗಳಿಂದ ನಮ್ಮ ಸಾವಿರಾರು ಅಮಾಯಕರ ಜೀವಗಳು ಬಲಿಯಾಗಿವೆ. ಆದರೂ ಧೈರ್ಯದಿಂದ ಎದುರಿಸಿದೆವು. ಭಯೋತ್ಪಾದನೆಯನ್ನು ಬೇರು ಸಮೇತ ಕಿತ್ತೊಗೆಯುವವರೆಗೂ ನಾವು ವಿಶ್ರಮಿಸುವುದಿಲ್ಲ ಎಂದಿದ್ದಾರೆ.
ನಾನು ಭಾರತದ ದೊಡ್ಡ ಅಭಿಮಾನಿ ಎಂದ China ಉನ್ನತ ಅಧಿಕಾರಿ..!
ವಿಶ್ವಸಂಸ್ಥೆಯಲ್ಲಿ ಕಾಶ್ಮೀರದ ಕುರಿತು ಪಾಕಿಸ್ತಾನದ ಹೇಳಿಕೆಯ ಬಳಿಕ ಮಾತನಾಡಿದ ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅದೇ ವೇದಿಕೆಯಲ್ಲಿ ಪ್ರತಿಕ್ರಿಯಿಸಿದ್ದಾರೆ. ನೆರೆಯ ಸಂಸತ್ತಿನ ಮೇಲೆ ದಾಳಿ ನಡೆಸಿದ, ಒಸಾಮಾ ಬಿನ್ ಲಾಡೆನ್‌ಗೆ ಆತಿಥ್ಯ ನೀಡಿದ ದೇಶವು ವಿಶ್ವಸಂಸ್ಥೆಯಂತಹ ಪ್ರಬಲ ವೇದಿಕೆಯಲ್ಲಿ ಬೇರೆ ದೇಶಗಳಿಗೆ ಬೋಧನೆ ಮಾಡುವ ಸಾಮರ್ಥ್ಯವನ್ನು ಹೊಂದಿಲ್ಲ ಎಂದು ಹೇಳಿದ್ದಾರೆ.