ಹೈದ್ರಾಬಾದ್(ಜೂ.05)‌: ಲಾಕ್‌ಡೌನ್‌ ವೇಳೆ ವಲಸೆ ಕಾರ್ಮಿಕರು ತವರಿಗೆ ತೆರಳಿದ ಪರಿಣಾಮ ನಿರ್ಮಾಣ ಉದ್ಯಮ ಭಾರೀ ಪ್ರಮಾಣದಲ್ಲಿ ಕಾರ್ಮಿಕರ ಕೊರತೆ ಎದುರಿಸುವಂತಾಗಿದೆ. ಹೀಗಾಗಿ ಕಾರ್ಮಿಕರನ್ನು ಮರಳಿ ಸೆಳೆಯಲು ವಿವಿಧ ಕಂಪನಿಗಳು ಭರ್ಜರಿ ಆಫರ್‌ಗಳನ್ನು ಮುಂದಿಡುತ್ತಿವೆ.

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಕಾಮಗಾರಿ ಪೂರ್ಣಕ್ಕೆ ಹೆಚ್ಚಿನ ಅವಧಿ ನೀಡಿದ್ದರೂ, ಕೆಲ ಕಂಪನಿಗಳು ಕಾಲಮಿತಿಯಲ್ಲಿ ಯೋಜನೆ ಪೂರ್ಣಕ್ಕೆ ನಿರ್ಧರಿಸಿವೆ. ಹೀಗಾಗಿ ಅಂಥ ಕಂಪನಿಗಳು ಬಿಹಾರ ಸೇರಿದಂತೆ ವಿವಿಧ ರಾಜ್ಯಗಳಲ್ಲಿನ ಕಾರ್ಮಿಕರಿಗೆ ವಿಮಾನದಲ್ಲಿ ಕರೆಸಿಕೊಳ್ಳುವುದು, ಹೆಚ್ಚಿನ ವೇತನ ನೀಡುವುದು ಸೇರಿದಂತೆ ಹಲವು ಸೌಲಭ್ಯಗಳ ಆಫರ್‌ ನೀಡಿವೆ. 

ಇನ್ನು ಆಂಧ್ರದಲ್ಲಿ ಪೊಲ್ಲಾವರಂ ಯೋಜನೆಯ ನಿರ್ಮಾಣದ ಹೊಣೆ ಹೊತ್ತಿರುವ ಕಂಪನಿ, ವಿಶೇಷ ರೈಲನ್ನೇ ಬುಕ್‌ ಮಾಡಿ ಸಾವಿರಾರು ಕಾರ್ಮಿಕರನ್ನು ಒಮ್ಮೆಗೆ ಕರೆತರುವ ಯೋಜನೆಯನ್ನು ರೂಪಿಸಿದೆ. ಆದರೆ ಕೆಲ ಕಾರ್ಮಿಕರು ಪೂರ್ಣ ವೇತನದ ಜೊತೆಗೆ ಹೆಚ್ಚುವರಿ ತಲಾ 10000 ರುಪಾಯಿ ನೀಡುವ ಆಫರ್‌ ನೀಡಿದ್ದರೂ, ಬರಲು ತಯಾರಿಲ್ಲ ಎಂದು ನಿರ್ಮಾಣ ಕಂಪನಿ ಅಧಿಕಾರಿಗಳು ಅಳಲು ತೋಡಿಕೊಂಡಿದ್ದಾರೆ.

ಕಾರ್ಮಿಕರಿಗೆ 5 ಸಾವಿರ ರೂ.: ಈ ಹಣ ಪಡೆಯುವುದೇಗೆ..?

ಲಾಕ್‌ಡೌನ್‌ಗಿಂತ ಮೊದಲು ತೆಲಂಗಾಣ ರಾಜ್ಯವೊಂದರಲ್ಲೇ ಮೂರುವರೆ ಲಕ್ಷ ಮಂದಿ ವಲಸಿಗ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಲಾಕ್‌ಡೌನ್ ಬಳಿಕ ಇವರ ಪೈಕಿ ಬಹುತೇಕ ಕಾರ್ಮಿಕರು ತಮ್ಮ ತಮ್ಮ ಊರುಗಳಿಗೆ ತೆರೆಳಿದ್ದಾರೆ. ಕೆಲವರಂತು ನೂರಾರು ಕಿಲೋ ಮೀಟರ್ ನಡೆದುಕೊಂಡೇ ತಮ್ಮೂರು ಸೇರಿಕೊಂಡಿದ್ದಾರೆ ಎಂದು ತೆಲಂಗಾಣ ಸರ್ಕಾರ ಹೇಳಿತ್ತು.

ಲಾಕ್‌ಡೌನ್ ಸಂದರ್ಭದಲ್ಲಿ ಸಾವಿರಾರು ಕಾರ್ಮಿಕರು ಬರೀಗಾಲಿನಲ್ಲೇ ತಮ್ಮ ಊರಿಗೆ ಪ್ರಯಾಣ ಕೈಗೊಂಡಿದ್ದರು. ಕೆಲವರು ಮಾರ್ಗಮಧ್ಯದಲ್ಲೇ ಪ್ರಾಣಬಿಟ್ಟಿದ್ದರು. ಆಗ ಮಾಲೀಕರಿಗೆ ಇವರ ಬಗ್ಗೆ ಯಾವುದೇ ಆಲೋಚನೆ ಇರಲಿಲ್ಲ. ಈಗ ಕೆಲಸ ಪೂರ್ಣವಾಗಬೇಕಾದರೇ ವಲಸಿಗ ಕಾರ್ಮಿಕರನ್ನು ರೆಡ್ ಕಾರ್ಪೆಟ್ ಹಾಕಿ ಸ್ವಾಗತಿಸಲು ಸಜ್ಜಾಗಿವೆ. ತಡವಾಗಿಯಾದರೂ ಕೇಂದ್ರ ಸರ್ಕಾರ ಶ್ರಮಿಕ್ ಎಕ್ಸ್‌ಪ್ರೆಸ್ ಮೂಲಕ ಅನ್ಯರಾಜ್ಯದ ಕಾರ್ಮಿಕರನ್ನು ಅವರ ಊರಿಗೆ ಸೇರಿಸುವ ಕೆಲಸವನ್ನು ಮಾಡಿತ್ತು.