ಕೋಲ್ಕತಾ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ಬೆಂಕಿಯಿಂದ ಆತಂಕ ಸ್ಥಿತಿ ನಿರ್ಮಾಣವಾಗಿದೆ. ಬೆಂಕಿಯ ಕೆನ್ನಾಲಿಗೆ ತೀವ್ರಗೊಳ್ಳುತ್ತಿದ್ದಂತೆ ಅಗ್ನಿಶಾಮಕ ದಳ ನಂದಿಸುವ ಕಾರ್ಯದಲ್ಲಿ ತೊಡಗಿದೆ. ಈ ಘಟನೆಯಿಂದ ವಿಮಾನಗಳು ರದ್ದಾಗಿದೆ.
ಕೋಲ್ಕತಾ(ಜೂ.14) ಕೋಲ್ಕತಾ ವಿಮಾನ ನಿಲ್ದಾಣದಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡಿದೆ. ನಿರ್ಗಮನ ಲಾಂಜ್ ಬಳಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣವೇ ಅಗ್ನಿಶಾಮಕ ದಳ ಬೆಂಕಿ ನಂದಿಸುವ ಕಾರ್ಯ ಆರಂಭಿಸಿದೆ. ಇತ್ತ ಪ್ರಯಾಣಿಕರನ್ನು ಸುರಕ್ಷಿತವಾಗಿ ನಿಲ್ದಾಣದಿಂದ ಹೊರಕ್ಕೆ ಕಳುಹಿಸಲಾಗಿದೆ. ಬೆಂಕಿಯ ಕೆನ್ನಾಲಿಗೆಯಿಂದ ಇಡೀ ನಿಲ್ದಾಣದಲ್ಲಿ ಹೊಗೆ ಆವರಿಸಿದೆ. ಇತ್ತ ಕೋಲ್ಕಾತದಿಂದ ತೆರಳಬೇಕಿದ್ದ ಎಲ್ಲಾ ವಿಮಾನ ಪ್ರಯಾಣ ತಾತ್ಕಾಲಿಕವಾಗಿ ರದ್ದು ಮಾಡಲಾಗಿದೆ. ಇತ್ತ ಕೋಲ್ಕಾದ ನಿಲ್ದಾಣದಲ್ಲಿ ಲ್ಯಾಂಡ್ ಆಗಬೇಕಿದ್ದ ವಿಮಾನಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ.
ನಿರ್ಗಮನ ಲಾಂಜ್ ಬಳಿ ವಿಸ್ತಾರ ಕೌಂಟರ್ ಬಳಿ ಮೊದಲುು ಬೆಂಕಿ ಕಾಣಿಸಿಕೊಂಡಿದೆ. ತಕ್ಷಣವೇ ಬೆಂಕಿ ಜ್ವಾಲೆ ಇತರೆಡೆ ಆವರಿಸಿಕೊಂಡಿದೆ. ಹೆಚ್ಚುವರಿ ಅಗ್ನಿಶಾಮಕ ದಳ ವಾಹನ ಸ್ಥಳಕ್ಕೆ ದೌಡಾಯಿಸಿದೆ. ಬೆಂಕಿ ನಂದಿಸುವ ಕಾರ್ಯ ಪ್ರಗತಿಯಲ್ಲಿದೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಆದರೆ ದಟ್ಟ ಹೊಗೆ ಕಾಣಿಸಿಕೊಂಡಿರುವ ಕಾರಣ ನಿಲ್ದಾಣದಲ್ಲಿ ಸಂಪೂರ್ಣ ಎಸಿ ಬಂದ್ ಮಾಡಲಾಗಿದೆ. ಎಲ್ಲಾ ದ್ವಾರಗಳನ್ನು ತೆರೆಯಲಾಗಿದೆ.
ಎಲ್ಲಾ ವಿಮಾನಯಾನಗಳು ಪ್ರಯಾಣ ಸಮಯ ಮುಂದೂಡಲಾಗಿದೆ. ಬಹುತೇಕ ವಿಮಾನಯಾನಗಳು ರದ್ದಾಗಿದೆ. ಇತ್ತ ಏರ್‌ಪೋರ್ಟ್ ಸುತ್ತ ಮುತ್ತ ಹೊಗೆ ಕಾಣಿಸಿಕೊಂಡಿದೆ. ಹೀಗಾಗಿ ಯಾವುದೇ ಪ್ರಯಾಣಿಕರನ್ನು ನಿಲ್ದಾಣ ಪ್ರವೇಶಕ್ಕೆ ಅನುಮತಿ ನೀಡಿಲ್ಲ.
ಸುಭಾಷ್ ಚಂದ್ರ ಬೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಚೆಕ್ ಇನ್ ಪ್ರದೇಶದಲ್ಲಿ ಕಾಣಿಸಿಕೊಂಡ ಬೆಂಕಿಯಿಂದ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಕಾರ್ಯಪ್ರವೃತ್ತರಾದ ಸಿಬ್ಬಂದಿ ವಿಮಾನ ನಿಲ್ದಾಣದಲ್ಲಿದ್ದ ಜನರನ್ನು ಸ್ಥಳಾಂತರಗೊಳಿಸಿದ್ದು, ಹೆಚ್ಚಿನ ಅಪಾಯವಾಗುವುದನ್ನು ತಪ್ಪಿಸಿದ್ದಾರೆ. ಈ ಕುರಿತಾಗಿ ಪ್ರತಿಕ್ರಿಯಿಸಿರುವ ಕೋಲ್ಕತಾ ವಿಮಾನ ನಿಲ್ದಾಣ ಪ್ರಾಧಿಕಾರ, ಬುಧವಾರ ರಾತ್ರಿ 9.12ರ ಸುಮಾರಿಗೆ ನಿಲ್ದಾಣದ ಚೆಕ್-ಇನ್ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ತಕ್ಷಣವೇ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದು, 9.40ರ ಸುಮಾರಿಗೆ ಬೆಂಕಿಯನ್ನು ಸಂಪೂರ್ಣವಾಗಿ ಆರಿಸಲಾಗಿದೆ. 10.15ಕ್ಕೆ ಚೆಕ್-ಇನ್ ಮತ್ತೆ ಆರಂಭವಾಗಿದೆ ಎಂದು ಹೇಳಿದೆ. ಬೆಂಕಿ ಕಾಣಿಸಿಕೊಂಡಿದ್ದಕ್ಕೆ ನಿಖರ ಕಾರಣ ಇನ್ನೂ ಸಹ ತಿಳಿದುಬಂದಿಲ್ಲ.
