ತಿರುಪತಿ[ಡಿ.09]: ಪ್ರಸಿದ್ಧ ತಿರುಮಲ ದೇವಸ್ಥಾನದ ಲಡ್ಡು ತಯಾರಿಸುವ ಅಡುಗೆ ಕೋಣೆಯಲ್ಲಿ ಬೆಂಕಿ ಕಾಣಿಸಿಕೊಂಡು, ಆತಂಕ ಸೃಷ್ಟಿಯಾದ ಘಟನೆ ಭಾನುವಾರ ನಡೆದಿದೆ.

ಬೆಂಕಿಯ ಪರಿಣಾಮ ನೋಡನೋಡುತ್ತಿದ್ದಂತೆ ದಟ್ಟಹೊಗೆ ಮತ್ತು ಬೆಂಕಿ ಕೋಣೆಯನ್ನು ಅವರಿಸಿಕೊಂಡಿತ್ತು. ಕೂಡಲೇ ಅಗ್ನಿಶಾಮಕ ದಳ ಪಡೆಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಬೆಂಕಿಯ ಕೆನ್ನಾಲಿಗೆ ಹರಡದಂತೆ ತಡೆದಿದ್ದಾರೆ.

ಬೆಂಕಿ ಹೊತ್ತಿಕೊಳ್ಳಲು ನಿಖರ ಕಾರಣ ತಿಳಿದಿಲ್ಲವಾದರೂ, ಪ್ರಾಥಮಿಕ ತನಿಖೆಯ ಪ್ರಕಾರ ಲಡ್ಡು ತಯಾರಿಕೆ ವೇಳೆ ಸಿಬ್ಬಂದಿಯೋರ್ವ ದೊಡ್ಡ ಪಾತ್ರೆಯಲ್ಲಿ ಎಣ್ಣೆ ಸುರಿಯುತ್ತಿರುವಾಗ ಒಲೆಯ(ಸ್ಟೌ) ಬೆಂಕಿ ತಾಗಿ, ಬೆಂಕಿ ಹೊತ್ತಿಕೊಂಡಿದೆ. ಇದು ಕೋಣೆಯಲ್ಲಿ ಶೇಖರಿಸಿಟ್ಟಿದ್ದ ತುಪ್ಪ ಮತ್ತು ಎಣ್ಣೆಯ ಡಬ್ಬಗಳಿಗೂ ವ್ಯಾಪಿಸಿದೆ. ಜಾಗೃತಗೊಂಡ ಸಿಬ್ಬಂದಿ ಒಲೆಗಳನ್ನೆಲ್ಲಾ ನಂದಿಸಿದರೂ ಅಗ್ನಿಯ ತೀವ್ರತೆ ತಡೆಯಲಾಗಲಿಲ್ಲ.

ಘಟನೆ ಕುರಿತು ದೇವಸ್ಥಾನ ಆಡಳಿತ ಮಂಡಳಿ(ಟಿಟಿಡಿ) ತನಿಖೆಗೆ ಆದೇಶಿಸಿದೆ.