ಸಮಾಜವಾದಿ ಪಕ್ಷದ (ಎಸ್‌ಪಿ) ನಾಯಕ ಮತ್ತು ಮಾಜಿ ಸಚಿವ ಅಜಂ ಖಾನ್‌ಗೆ ಸುಪ್ರೀಂ ಕೋರ್ಟ್‌ನಿಂದ ಮಧ್ಯಂತರ ಜಾಮೀನು ಸಿಕ್ಕಿದೆ. ಸುಮಾರು 26 ತಿಂಗಳಿನಿಂದ ಉತ್ತರ ಪ್ರದೇಶದ ಸೀತಾಪುರ ಜೈಲಿನಲ್ಲಿರುವ ಆಜಂ ಖಾನ್ ಈಗ ಜೈಲಿನಿಂದ ಹೊರ ಬರಲಿದ್ದಾರೆ.
ಲಕ್ನೋ (ಮೇ.19): ಸಮಾಜವಾದಿ ಪಕ್ಷದ (ಎಸ್‌ಪಿ) ನಾಯಕ ಮತ್ತು ಮಾಜಿ ಸಚಿವ ಅಜಂ ಖಾನ್‌ಗೆ (Azam Khan) ಸುಪ್ರೀಂ ಕೋರ್ಟ್‌ನಿಂದ (Supreme Court) ಮಧ್ಯಂತರ ಜಾಮೀನು ಸಿಕ್ಕಿದೆ. ಗುರುವಾರ ತೀರ್ಪು ಪ್ರಕಟಿಸಿದ ಸುಪ್ರೀಂ ಕೋರ್ಟ್, ಅಜಂ ಖಾನ್ ಜಾಮೀನಿನ ಷರತ್ತುಗಳನ್ನು ವಿಚಾರಣಾ ನ್ಯಾಯಾಲಯ ನಿರ್ಧರಿಸುತ್ತದೆ ಮತ್ತು ಸಾಮಾನ್ಯ ಜಾಮೀನಿಗೆ ಅಜಂ ಎರಡು ವಾರಗಳಲ್ಲಿ ಸೂಕ್ತ ಮತ್ತು ಸಮರ್ಥ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬೇಕು ಎಂದು ಹೇಳಿದೆ.
ವಿಚಾರಣಾ ನ್ಯಾಯಾಲಯದಿಂದ ನಿಯಮಿತ ಜಾಮೀನು ಪಡೆಯುವವರೆಗೆ ಮಧ್ಯಂತರ ಆದೇಶ ಜಾರಿಯಲ್ಲಿರುತ್ತದೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಗಮನಾರ್ಹ ಸಂಗತಿ ಎಂದರೆ 80ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಆಜಂ ಖಾನ್ ಕಳೆದ 26 ತಿಂಗಳಿಂದ ಸೀತಾಪುರ ಜೈಲಿನಲ್ಲಿದ್ದಾರೆ.
ಒಂದು ಪ್ರಕರಣದಲ್ಲಿ ಜಾಮೀನು ಪಡೆದಿದ್ದರೆ ಮತ್ತೊಂದು ಪ್ರಕರಣ ದಾಖಲಾಗುತ್ತಿತ್ತು. ಇದಾದ ನಂತರ ಅಜಂ ಖಾನ್ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಮಂಗಳವಾರ ಇದರ ವಿಚಾರಣೆ ನಡೆದಿತ್ತು.
