ಶ್ರೀನಗರ(ಅ.25): ಸಂವಿಧಾನದ 370ನೇ ವಿಧಿಯನ್ನು ಮರುಸ್ಥಾಪಿಸುವ ಉದ್ದೇಶದಿಂದ ಜಮ್ಮು- ಕಾಶ್ಮೀರದ ಏಳು ಪ್ರಮುಖ ರಾಜಕೀಯ ಪಕ್ಷಗಳು ಇತ್ತೀಚೆಗೆ ರಚಿಸಿಕೊಂಡಿರುವ ಒಕ್ಕೂಟಕ್ಕೆ ಶನಿವಾರ ಒಂದು ಅಧಿಕೃತ ಸ್ವರೂಪ ನೀಡಿವೆ.

ಪೀಪಲ್ಸ್‌ ಅಲಯನ್ಸ್‌ ಫಾರ್‌ ಗುಪ್ಕರ್‌ ಡಿಕ್ಲೆರೇಷನ್‌ (ಪಿಎಜಿಡಿ) ಮೈತ್ರಿಕೂಟಕ್ಕೆ ನ್ಯಾಷನಲ್‌ ಕಾನ್ಫೆರೆನ್ಸ್‌ ಮುಖಂಡ ಫಾರೂಖ್‌ ಅಬ್ದುಲ್ಲಾ ಮುಖ್ಯಸ್ಥರಾಗಿ ಹಾಗೂ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಉಪಾಧ್ಯಕ್ಷೆ ಆಗಿ ಆಯ್ಕೆ ಆಗಿದ್ದಾರೆ. ಹಿರಿಯ ಸಿಪಿಎಂ ಮುಖಂಡ ಎಂ.ವೈ. ತರಿಗಾಮಿ ಅವರು ಸಂಚಾಲಕ ಹಾಗೂ ಪೀಪಲ್ಸ್‌ ಕಾನ್ಫರೆನ್ಸ್‌ನ ಸಜ್ಜದ್‌ ಗನಿ ಲೋನ್‌ರನ್ನು ವಕ್ತಾರರಾಗಿ ನೇಮಿಸಲಾಗಿದೆ.

ಇದೇ ವೇಳೆ ತಮ್ಮದು ದೇಶ ವಿರೋಧಿ ಸಂಘಟನೆ ಅಲ್ಲ. ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ಮರುಸ್ಥಾಪಿಸಲು ನಾವು ಹೋರಾಟ ನಡೆಸಲಿದ್ದೇವೆ ಎಂದು ಫಾರೂಕ್‌ ಅಬ್ದುಲ್ಲಾ ತಿಳಿಸಿದ್ದಾರೆ.