ಹೆದ್ದಾರಿ ಬಂದ್ ಮಾಡಿ ರೈತರ ‘ಶತದಿನದ ಹೋರಾಟ’| ಕಾಯ್ದೆಗಳಿಂದ ಕಾರ್ಪೊರೇಟ್ ಕಂಪನಿಗಳಿಗೆ ಲಾಭ: ರೈತರು
ಚಂಡೀಗಢ(ಮಾ.07): ಕೇಂದ್ರ ಸರ್ಕಾರದ 3 ನೂತನ ಕೃಷಿ ಕಾಯ್ದೆಗಳ ವಿರುದ್ಧ ದಿಲ್ಲಿ ಗಡಿಗಳಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಯು ಶನಿವಾರ 100 ದಿನ ಪೂರೈಸಿದೆ. ಈ ಹಿನ್ನೆಲೆಯಲ್ಲಿ ಹರ್ಯಾಣ ಹಾಗೂ ಪಂಜಾಬ್‌ನ ಅನೇಕ ಕಡೆ ರೈತರು ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದಾರೆ.
ದಿಲ್ಲಿ ಹೊರವಲಯದ ಹರಾರಯಣದ ಕುಂಡ್ಲಿ-ಮಾನೇಸರ್-ಪಾಲ್ವಾಲ್(ಕೆಎಂಪಿ) ಹೆದ್ದಾರಿಯನ್ನು ತಡೆದ ರೈತರ ಸಂಘಟನೆ ಸಂಯುಕ್ತ ಕಿಸಾನ್ ಮೋರ್ಚಾ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿತು.
ಶನಿವಾರ ಬೆಳಗ್ಗೆ 11 ಗಂಟೆಯಿಂದ ಸಂಜೆ 4 ಗಂಟೆವರೆಗೆ ತಮ್ಮ ಟ್ರಾಕ್ಟರ್ ಟ್ರಾಲಿಗಳನ್ನು ಅಡ್ಡಲಾಗಿ ನಿಲ್ಲಿಸಿ ಕೆಎಂಪಿ ಹೆದ್ದಾರಿಯನ್ನು ಬಂದ್ ಮಾಡಿದರು. ಈ ವೇಳೆ, ‘ಈ ಕರಾಳ ಕಾಯ್ದೆಗಳ ಜಾರಿಯಿಂದ ತಮ್ಮ ಬೆಳೆಗಳಿಗೆ ನೀಡಲಾಗುತ್ತಿರುವ ಕನಿಷ್ಠ ಬೆಂಬಲ ಬೆಲೆ ರದ್ದಾಗಲಿದ್ದು, ಕಾರ್ಪೊರೇಟ್ ಕಂಪನಿಗಳಿಗೆ ಅನುಕೂಲವಾಗಲಿದೆ’ ಎಂದು ರೈತರು ಕಿಡಿಕಾರಿದರು.
ಕಾಂಗ್ರೆಸ್ ಕಿಡಿ:
‘ಈ 100 ದಿನಗಳು ಭಾರತದ ಪ್ರಜಾಪ್ರಭುತ್ವದ ಅಧ್ಯಾಯದಲ್ಲಿ ಬಿಜೆಪಿಯ ದಾಷ್ಟ್ರ್ಯದ ಆಡಳಿತದ ಕಪ್ಪುಚುಕ್ಕೆಗಳು’ ಎಂದು ಕಾಂಗ್ರೆಸ್ ಕಿಡಿಕಾರಿದೆ.
ಈ ಬಗ್ಗೆ ಶುಕ್ರವಾರ ಟ್ವೀಟ್ ಮಾಡಿರುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ‘ದೇಶದ ಗಡಿಯಲ್ಲಿ ದೇಶದ ರಕ್ಷಣೆಗಾಗಿ ಪ್ರಾಣತ್ಯಾಗ ಮಾಡುವವರ ಮಕ್ಕಳ ಪೋಷಕರು ಇಂದು ದೆಹಲಿಯ ಗಡಿಗಳಲ್ಲಿ ಕುಳಿತಿದ್ದಾರೆ. ದೇಶದ ಅನ್ನದಾತರು ತಮ್ಮ ಹಕ್ಕುಗಳಿಗಾಗಿ ಒತ್ತಾಯಿಸುತ್ತಿದ್ದರೆ, ಇತ್ತ ಸರ್ಕಾರ ಅವರ ಮೇಲೆ ದೌರ್ಜನ್ಯ ಎಸಗುತ್ತಿದೆ’ ಎಂದು ವಾಗ್ದಾಳಿ ನಡೆಸಿದ್ದಾರೆ.
ತಿದ್ದುಪಡಿಗೆ ಸಿದ್ಧ:
ಈ ನಡುವೆ, ರೈತರ ಆಗ್ರಹದಂತೆ ಕಾಯ್ದೆ ತಿದ್ದುಪಡಿಗೆ ಸರ್ಕಾರ ಸಿದ್ಧವಿದೆ. ಆದರೆ ವಿಪಕ್ಷವು ರಾಜಕೀಯ ಮಾಡುತ್ತಿದೆ’ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ.
