ನೋಯ್ಡಾ(ಜ.28): ಕೃಷಿ ಕಾಯ್ದೆ ವಿರೋಧಿಸಿ ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯಿಂದ 2 ರೈತ ಸಂಘಟನೆಗಳು ಹಿಂದಕ್ಕೆ ಸರಿದಿವೆ. ಇದರೊಂದಿಗೆ ಎರಡೂವರೆ ತಿಂಗಳಿನಿಂದ ನಡೆಯುತ್ತಿರುವ ರೈತ ಹೋರಾಟದಲ್ಲಿ ಮೊದಲ ಬಾರಿಗೆ ಬಿರುಕು ಮೂಡಿದಂತಾಗಿದೆ.

ಮಂಗಳವಾರ ನಡೆದ ಟ್ರ್ಯಾಕ್ಟರ್‌ ರಾರ‍ಯಲಿ ವೇಳೆ ಭಾರೀ ಹಿಂಸಾಚಾರ ನಡೆದಿದ್ದಕ್ಕೆ ತೀವ್ರ ಬೇಸರ ಮತ್ತು ಆಕ್ಷೇಪ ವ್ಯಕ್ತಪಡಿಸಿ ಪ್ರತಿಭಟನೆಯಿಂದ ಹಿಂದಕ್ಕೆ ಸರಿಯುತ್ತಿರುವುದಾಗಿ ಭಾರತೀಯ ಕಿಸಾನ್‌ ಮೋರ್ಚಾದ ಭಾನು ಘಟಕ ಘೋಷಿಸಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಸಂಘಟನೆಯ ಮುಖ್ಯಸ್ಥ ಠಾಕೂರ್‌ ಭಾನುಪ್ರತಾಪ್‌ ಸಿಂಗ್‌, ಗಣರಾಜ್ಯದ ದಿನ ದಿಲ್ಲಿಯಲ್ಲಿ ಏನಾಯಿತೋ ಅದು ತೀವ್ರ ನೋವು ತಂದಿದೆ. ಹೀಗಾಗಿ ನಾವು ತಕ್ಷಣದಿಂದ ಪ್ರತಿಭಟನೆಯಿಂದ ಹಿಂದಕ್ಕೆ ಸರಿಯುತ್ತಿದ್ದೇವೆ ಎಂದು ಹೇಳಿದ್ದಾರೆ. ಈ ಸಂಘಟನೆ ಚಿಲ್ಲಾ ಗಡಿ ಪ್ರದೇಶದಲ್ಲಿ ಪ್ರತಿಭಟನೆ ನಡೆಸುತ್ತಿತ್ತು.

ಅದೇ ರೀತಿ ಅಖಿಲ ಭಾರತ ಕಿಸಾನ್‌ ಸಂಘರ್ಷ ಸಮನ್ವಯ ಸಮಿತಿ ಕೂಡಾ ಪ್ರತಿಭಟನೆಯಿಂದ ಹಿಂದೆ ಸರಿಯುವ ನಿರ್ಧಾರ ಕೈಗೊಂಡಿದೆ. ಕೆಲ ವ್ಯಕ್ತಿಗಳ ಉದ್ದೇಶ ಬೇರೇನೋ ಇರುವ ಕಾರಣ ನಾವು ಈ ಹೋರಾಟದಲ್ಲಿ ಮುಂದುವರೆಯುವುದು ಉಚಿತವಲ್ಲ ಎಂದು ಸಂಘಟನೆಯ ಮುಖ್ಯಸ್ಥ ವಿ.ಎಂ.ಸಿಂಗ್‌ ಹೇಳಿದ್ದಾರೆ.